ಸಾರಾಂಶ
2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ । ಪಟ್ಟಣದ ಹಿತ ದೃಷ್ಟಿಯಿಂದ ಉತ್ತಮ ನಿರ್ಧಾರ
ಕನ್ನಡಪ್ರಭ ವಾರ್ತೆ,ಕಡೂರುಕಂದಾಯ ವಸೂಲಿಗೆ ಬೃಹತ್ ಕಂದಾಯ ಆಂದೋಲನ ನಡೆಸಿ ವಸೂಲಿಗೆ ಕೌಂಟರ್ ಮಾಡುವ ಜೊತೆ ನಮ್ಮ ಅಧಿಕಾರಿಗಳ ತಂಡ ತೆರಳಲಿದ್ದು, ಪಟ್ಟಣ ಜನತೆ ಕಂದಾಯ ನೀಡಿ ಸಹಕರಿಸಬೇಕು ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮನವಿ ಮಾಡಿದರು.
ಸೋಮವಾರ ಪಟ್ಟಣದ ಪುರಸಭೆ ಕನಕ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘ, ಸಂಸ್ಥೆಗಳು, ವ್ಯಾಣಿಜ್ಯೋದ್ಯಮಿಗಳು ಪುರಸಭೆ ಸದಸ್ಯರ ಸಲಹೆ, ಸೂಚನೆ ಪಡೆದು ಮಾತನಾಡಿದರು. ಪಟ್ಟಣದ ಅಭಿವೃದ್ಧಿ ಮತ್ತು ಸೌಂದರ್ಯದ ಹಿತ ದೃಷ್ಟಿಯಿಂದ ಉತ್ತಮ ನಿರ್ಧಾರ ಕೈಗೊಳ್ಳಲಾಗುತ್ತಿದೆ. ನಿವೇಶನ ಮತ್ತು ಮನೆ ಗಳ ತೆರಿಗೆ ಕಟ್ಟದಿರುವ ನಿವಾಸಿಗಳಿಗೆ ಅಂಚೆ ಪತ್ರದ ಮೂಲಕ ತಿಳುವಳಿಕೆ ನೀಡಿ ತೆರಿಗೆ ನೀಡುವಂತೆ ಪತ್ರದ ಮೂಲಕ ಮನವಿ ಮಾಡಲಾಗುವುದು ಎಂದು ಪ್ರಕಟಿಸಿದರು.ಸದಸ್ಯ ಈರುಳ್ಳಿ ರಮೇಶ್ ಮಾತನಾಡಿ, ಈ ಹಿಂದೆ ಖಾಲಿ ನಿವೇಶನಕ್ಕೆ ತೆರಿಗೆ ರಿಯಾಯಿತಿಯಿತ್ತು. ಆದರೆ ಇದೀಗ ಸಣ್ಣ ಸಣ್ಣ ನಿವೇಶನ ಹೊಂದಿರುವ ಮಧ್ಯಮ ವರ್ಗ ಮತ್ತು ಬಡವರಿಗೆ ತೊಂದರೆ ಆಗುತ್ತದೆ ಎಂದಾಗ, ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಈ ಬಗ್ಗೆ ಅಧಿಕಾರಿಗಳು ಸದಸ್ಯರ ಸಾಮಾನ್ಯ ಸಭೆಯಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕಳೆದ 2024-25 ರಲ್ಲಿ ನೀರಿನ ಕರ ₹46 ಲಕ್ಷ ಮತ್ತು ₹2.58 ಕೋಟಿ ಆಸ್ತಿ ತೆರಿಗೆ ವಸೂಲಾಗಿದೆ. ವ್ಯಾಪಾರ, ವಹಿವಾಟಿನ ಪರವಾನಗಿಯಲ್ಲಿ ₹6 ಲಕ್ಷ ತೆರಿಗೆ ಪಾವತಿ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದಾಗ ಈ ಬಾರಿ ಪುರಸಭೆಯಿಂದ ಕಂದಾಯ ವಸೂಲಿಗೆ ಬೃಹತ್ ಕಂದಾಯ ಆಂದೋಲನ ನಡೆಸಿ ವಸೂಲಿಗೆ ಕೌಂಟರ್ ಮಾಡುವ ಜೊತೆ ನಮ್ಮ ಅಧಿಕಾರಿಗಳ ತಂಡ ತೆರಳಲಿದ್ದು, ಪಟ್ಟಣ ಜನತೆ ಕಂದಾಯ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.ಬಡ ಮಕ್ಕಳು ಹೆಚ್ಚಾಗಿರುವ ಸರಕಾರಿ ಶಾಲೆಯನ್ನು ಪುರಸಭೆಯಿಂದ ದತ್ತು ತೆಗೆದುಕೊಳ್ಳುವ ಜೊತೆ ಪೌರ ಕಾರ್ಮಿಕರ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಲು ಆದ್ಯತೆ ನೀಡಲಾಗುವುದು ಎಂದು ಪ್ರಕಟಿಸಿದರು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.ರೋಟರಿಯನ್ ರಾಘವೇಂದ್ರ ಪಟ್ಟಣದ ವಾರ್ಡ್ ಗಳಲ್ಲಿರುವ ಖಾಲಿ ನಿವೇಶನಗಳಲ್ಲಿನ ಗಿಡ, ಗೆಂಟೆಗಳನ್ನು ತೆಗೆಸಿದರೆ ಉತ್ತಮ ಆರೋಗ್ಯ ನೀಡಲು ಸಾಧ್ಯ. ಈ ಬಗ್ಗೆ ಪರಿಶೀಲಿಸಿ ಎಂಬ ಸಲಹೆ ನೀಡಿದರು. ಕಾಲ ಕಾಲಕ್ಕೆ ಸರ್ಕಾರದ ನಿಯಮಗಳನ್ನು ಅಳವಡಿಸಿಕೊಳ್ಳದೇ ಹೋದರೆ 15ನೇ ಹಣಕಾಸು ನಿಧಿಗೆ ಹಣವನ್ನು ಸರ್ಕಾರ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಮುಖ್ಯಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದಾಗ ಶ್ರೀನಿವಾಸ್ ಈ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸೋಣ ಎಂದರು.
ಕಡೂರು ಪಟ್ಟಣದಲ್ಲಿ ಸುಮಾರು 8,000 ಮನೆಗಳು ಮತ್ತು ಸುಮಾರು 2500 ನಿವೇಶನಗಳಿದ್ದು, ಇದರಿಂದ ನಿರೀಕ್ಷಿತ ಆದಾಯದ ಪಡೆಯಲು ಸಾಧ್ಯ. ತಿಂಡಿ ಗಾಡಿಗಳ ವ್ಯಾಪಾರಿಗಳಿಗೆ ಫುಡ್ ಕೋರ್ಟ್ ಮಾಡಿಕೊಟ್ಟು ಉತ್ತಮ ತಿಂಡಿ- ಉತ್ತಮ ಆರೋಗ್ಯ ಹಾಗೂ ಪುರಸಭೆಗೂ ಆದಾಯ ಬರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.2014 ರಲ್ಲಿ ಕಂದಾಯ ಹೆಚ್ಚಿಸಿದ್ದು ಬಿಟ್ಟರೆ ಮತ್ತೆ ಹೆಚ್ಚಿಸಿಲ್ಲ ಹಾಗಾಗಿ ಇದನ್ನು ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗುವುದು. ಪುರಸಭೆ ವ್ಯಾಪ್ತಿ ರಾಜಕಾಲುವೆಗಳನ್ನು ತೆರವುಗೊಳಿಸಲಾಗುವುದು ಎಂದರು.
ತೆರಿಗೆ ಪಾವತಿಸಲು ಪುರಸಭೆಯಲ್ಲಿ ಬ್ಯಾಂಕ್ ಕೌಂಟರ್ ತೆರೆದಲ್ಲಿ ಜನರಿಗೆ ಅನುಕೂಲವಾಗುತ್ತದೆ ಎಂದು ಮುಖಂಡ ಕೆ.ಎಸ್. ತಿಪ್ಪೇಶ್ ಹೇಳಿದಾಗ ಕಂದಾಯ ಸ್ವೀಕಾರ ಮಾಡುವ ಕೇಂದ್ರ ಮಾಡಲು ಚರ್ಚೆ ನಡೆಯುತ್ತಿದೆ ಎಂದರು.ಪುರಸಭೆ ಉಪಾಧ್ಯಕ್ಷೆ ಮಂಜುಳಾಚಂದ್ರು, ಸದಸ್ಯರಾದ ಮನು ಮರುಗುದ್ದಿ,ಸೈಯ್ಯದ್ ಯಾಸೀನ್,ಸುಧಾಉಮೇಶ್,ಕಮಲಾ ವೆಂಕಟೇಶ್ ಮುಖ್ಯಾಧಿಕಾರಿ ಮಂಜುನಾಥ್,ಇಂಜಿನಿಯರ್ ಶ್ರೇಯಸ್,ಸಿಬ್ಬಂದಿ ತಿಮ್ಮಯ್ಯ ಹಾಗೂ ಕೆ.ಎಸ್ ತಿಪ್ಪೇಶ್,ರಾಘವೇಂದ್ರ,ತ್ಯಾಗರಾಜ್, ಸಂಘ,ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಇದ್ದರು.
-- ಬಾಕ್ಸ್ --ಕಂದಾಯದ ವಸೂಲಾತಿ ಕುಂಠಿತವಾಗಿರುವ ಕಾರಣ ವಾಣಿಜ್ಯ ಮಳಿಗೆಗಳ, ಮನೆಗಳ ಕಂದಾಯ ಬಾಕಿ ಇರುವವರಿಗೆ ಅಂಚೆ ಮೂಲಕ ಪತ್ರ ಕಳುಹಿಸುವ ಜೊತೆ ಬೃಹತ್ ಆಂದೋಲನ ಮಾಡಲಾಗುವುದು. ಅದರಲ್ಲಿ ಕಂದಾಯ ಬಾಕಿಯ ವಿವರ ನಮೂದಿಸಿ ಇಂತಿಷ್ಟು ದಿನಗಳಲ್ಲಿ ಕಟ್ಟಿದರೆ ರಿಯಾಯಿತಿ ನೀಡುವುದಾಗಿ ತಿಳಿಸಲಾಗುವುದು. ಬ್ಯಾಂಕಿನಿಂದ ತೆರಿಗೆ ಕಟ್ಟಲು ಕೌಂಟರ್ ತೆರೆಯಲು ಪತ್ರ ವ್ಯವಹಾರ ನಡೆದಿದೆ
- ಭಂಡಾರಿಶ್ರೀನಿವಾಸ್ .6ಕೆಕೆಡಿಯು1.ಕಡೂರು ಪುರಸಭೆಯ 2025-26ನೇ ಸಾಲಿನ ಬಜೆಟ್ ಪೂರ್ವಭಾವಿಯಾಗಿ ಪುರಸಭೆ ಕನಕ ಸಭಾಂಗಣದಲ್ಲಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.