ತುಂಗಭದ್ರಾ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ನಾರಾಯಣದೇವರಕೆರೆ ಸೇರಿದಂತೆ 33 ಹಳ್ಳಿಗಳು ಜಲಾಶಯದಲ್ಲಿ ಮುಳುಗಡೆ

ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಅರ್ಹ ರೈತರಿಗೆ ಹಕ್ಕುಪತ್ರ, ರೈತರ ಸಂಪೂರ್ಣ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವಿಜಯನಗರ ಜಿಲ್ಲಾ ಸಮಿತಿಯಿಂದ ಬುಧವಾರ ಬೃಹತ್ ಬೈಕ್ ರ‍್ಯಾಲಿ ಹಾಗೂ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಪ್ರತಿಭಟನಾ ಸಭೆ ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಗೋಣಿ ಬಸಪ್ಪ ಮಾತನಾಡಿ, ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ಡಣಾಯಕನಕೆರೆ, ನಂದಿಬಂಡಿ ಹಾಗೂ ಜಿ. ನಾಗಲಾಪುರ ಗ್ರಾಮಗಳಲ್ಲಿ ಹಲವು ದಶಕಗಳಿಂದ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ಕಾನೂನುಬದ್ಧ ಹಕ್ಕುಪತ್ರ ನೀಡಬೇಕು. ಸುಮಾರು 73 ವರ್ಷಗಳಿಂದ ಜಮೀನು ಸಾಗುವಳಿ ಮಾಡುತ್ತಿರುವ ಹಲವು ರೈತರಿಗೆ ಹಕ್ಕುಪತ್ರ ನೀಡದೆ ತಾಲೂಕಾಡಳಿತದ ಮೂಲಕ ಹಿಂಬರಹ ನೀಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ತಕ್ಷಣವೇ ರೈತರಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.

ತುಂಗಭದ್ರಾ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ನಾರಾಯಣದೇವರಕೆರೆ ಸೇರಿದಂತೆ 33 ಹಳ್ಳಿಗಳು ಜಲಾಶಯದಲ್ಲಿ ಮುಳುಗಡೆಯಾಗಿದ್ದು, ಜಲಾಶಯದಲ್ಲಿ ಮುಳುಗಡೆಯಾಗಿ ಪುನರ್ವಸತಿ ಹೊಂದಿರುವ ರೈತರಿಗೆ ಯಾವುದೇ ಹಕ್ಕುಪತ್ರ ನೀಡದೇ ಸತಾಯಿಸುತ್ತಿರುವುದು ಸರಿಯಲ್ಲ. ತಕ್ಷಣವೇ ಹಕ್ಕುಪತ್ರ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಗೌರವಾಧ್ಯಕ್ಷ ಬಾಣದ ಶಿವಪ್ಪ ಮಾತನಾಡಿ, ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50ರ ಅನುಪಾತದಲ್ಲಿ ಸಾಲಮನ್ನಾ ಮಾಡುವ ಕ್ರಮ ಕೈಗೊಳ್ಳಬೇಕು. ರೈತರ ಪರಿಸ್ಥಿತಿ ಸುಧಾರಿಸುವವರೆಗೆ ಬ್ಯಾಂಕುಗಳು ಹಾಗೂ ಮೈಕ್ರೋಫೈನಾನ್ಸ್ ಸಂಸ್ಥೆಗಳ ಸಾಲ ವಸೂಲಾತಿಗೆ ತಡೆ ನೀಡಬೇಕು ಎಂದು ಒತ್ತಾಯಿಸಿದರು.

ಕೃಷಿಗೆ ಪ್ರಥಮ ಆದ್ಯತೆ ನೀಡಿ ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ ಏಳು ಗಂಟೆಗಳ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಬರ ಹಾಗೂ ಬೆಳೆ ಹಾನಿಯ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ ಅರ್ಹ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು. ಬೆಳೆ ವಿಮೆ ವ್ಯಾಪ್ತಿಯ ರೈತರಿಗೆ ವಿಮಾ ಪರಿಹಾರ ಸಂಪೂರ್ಣ ಖಾತೆಗೆ ಜಮಾ ಮಾಡಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಾಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ತುಂಗಭದ್ರಾ ಅಣೆಕಟ್ಟು ಮತ್ತು ಹಿನ್ನೀರಿನ ಪ್ರದೇಶದ ಸದುಪಯೋಗ ಪಡೆದು ವಿಜಯನಗರ ಜಿಲ್ಲೆಯ ಸಂಬಂಧಿಸಿದ ತಾಲೂಕುಗಳ ಕೆರೆ​ಕಟ್ಟೆ ತುಂಬಿಸುವ ಶಾಶ್ವತ ನೀರಾವರಿ ಯೋಜನೆ ರೂಪಿಸಬೇಕು. ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಸಮರ್ಪಕ ಮೇವು ಒದಗಿಸಬೇಕು ಎಂದು ಹೇಳಿದರು.

ವಕೀಲ ಕುಂಚೂರ್‌ ಕಲೀಂ ಸಭೆಯಲ್ಲಿ ಮಾತನಾಡಿದರು.

ರೈತ ಸಂಘದ ಮುಖಂಡ ಶಿವರಾಜ್ ಹೊಳಗುಂದಿ, ರಮೇಶ್ ನಾಯಕ್, ಹುಸೇನ್ ಸಾಬ್, ಎಚ್.ದುರ್ಗಪ್ಪ, ಶೇಖರ್ ನಾಯಕ್, ಕಾಸಿಂ, ಕೆ. ಯಮನೂರಪ್ಪ, ಟಿ. ಹನುಮಂತಪ್ಪ, ಹುಚ್ಚು ಸಾಹೇಬ್, ಕರಿಯಪ್ಪ, ಗಂಟೆ ಸೋಮಶೇಖರ, ಅಂಗಡಿ ಹುಲಗಪ್ಪ, ಕಾಶಿಪೀರಾ ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ಅನೇಕ ಮಹಿಳಾ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮರಿಯಮ್ಮನಹಳ್ಳಿಯ ನಾರಾಯಣದೇವರಕೆರೆ ವೃತ್ತದಿಂದ ಆರಂಭವಾದ ಬೈಕ್ ರ‍್ಯಾಲಿ ನಗರದ ಎಪಿಎಂಸಿ ಮಾರ್ಗವಾಗಿ ಪುನೀತ್‌ ರಾಜ್ ಕುಮಾರ್‌ ವೃತ್ತ, ತಾಲೂಕು ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು.