ಸಾರಾಂಶ
ಮೈಸೂರು : ದೇಶದ ಸೈನಿಕರೊಂದಿಗೆ ದೇಶವಾಸಿಗಳು ಎಂಬ ಶೀರ್ಷಿಕೆಯಡಿ ಮೇ 17 ರಂದು ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಆಪರೇಷನ್ ಸಿಂಧೂರ ಯಶಸ್ವಿ ಹಿನ್ನಲೆ ಸೇನಾ ಯೋಧರಿಗೆ ಶಕ್ತಿ, ಆತ್ಮ ಸ್ಥೈರ್ಯ ತುಂಬಲು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಖಾಸಗಿ ಆಸ್ಪತ್ರೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಲ್ಯಾಣಗಿರಿಯ ಬೀಡಿ ಕಾರ್ಮಿಕರ ಆಸ್ಪತ್ರೆಯಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಸುಮಾರು 1 ಸಾವಿರಕ್ಕೂ ಹೆಚ್ಚು ಜನ ರಕ್ತದಾನ ಮಾಡುವರು. 100 ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪುರುಷರು, ಮಹಿಳೆಯರಿಗೆ ತಲಾ ಒಂದೊಂದು ತುರ್ತು ವಾರ್ಡ್, 50 ವೈದ್ಯಕೀಯ ಸಿಬ್ಬಂದಿ, 18 ವೈದ್ಯರು ಭಾಗವಹಿಸುವುದಾಗಿ ಅವರು ಮಾಹಿತಿ ನೀಡಿದರು.
ಶಿಬಿರದಲ್ಲಿ ಸಂಗ್ರಹವಾಗುವ ರಕ್ತವನ್ನು ಸೇನೆಗೆ ಕಳುಹಿಸಲು ಸಂಬಂಧಪಟ್ಟವರನ್ನು ಸಂಪರ್ಕಿಸಲಾಗಿದೆ. ಈ ಬಗ್ಗೆ ಸೇನೆಯ ಅಧಿಕಾರಿಗಳು ಪರಿಶೀಲನೆ ಮಾಡುವರು. ಶಿಬಿರಗಳಲ್ಲಿ ಸಂಗ್ರಹವಾಗುವ ರಕ್ತದಲ್ಲಿ ಶೇ. 25 ಅನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೀಡಬೇಕಿದೆ ಎಂದರು.
ಯಾವುದೇ ಜಾತಿ, ಧರ್ಮ, ಪಕ್ಷ ಇಲ್ಲದೆ ಕಾರ್ಯಕ್ರಮ ರೂಪಿಸಿದ್ದೇವೆ. ನಾವೆಲ್ಲರೂ ಭಾರತೀಯ ಸೇನೆಯೊಂದಿಗೆ ಇದ್ದೇವೆ ಎಂಬ ಸಂದೇಶ ರವಾನಿಸುವ ಈ ಶಿಬಿರಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಅವರು ನುಡಿದರು.
ನಿಗಮ ಮಂಡಳಿ ನೇಮಕ, ಹಿರಿಯ ಶಾಸಕರಿಗೆ ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ, ಹಿರಿಯ ಶಾಸಕರಿಗೆ ಸಚಿವರಾಗುವ ಆಸೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕಾರ್ಯಕರ್ತರಿಗೆ ಅಧಿಕಾರ ಸಿಗಬೇಕು. ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿವೆ. ಸದ್ಯದಲ್ಲಿ ಕಾರ್ಯಕರ್ತರ ಆಸೆ ನೆರವೇರಲಿದೆ ಎಂದರು.
ಹೈದರಾಲಿ ರಸ್ತೆಯಲ್ಲಿ 40 ಮರಗಳ ಕಟಾವು ನಿಯಮ ಬದ್ಧವಾಗಿ ನಡೆದಿದೆ. ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನು ಕಟಾವು ಮಾಡಲಾಗಿದೆ. 1 ಮರಕ್ಕೆ 10 ಮರಗಳನ್ನು ಬೆಳೆಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಸಮಿತಿ ಮಾಡಿದ್ದು, ವರದಿ ಬಂದ ಬಳಿಕ ಚರ್ಚೆ ಮಾಡುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮುಖಂಡರಾದ ಎಸ್. ಚಂದ್ರಶೇಖರ್, ಡಾ. ಜಯಂತ್, ಶೌಕತ್ ಪಾಷ ಮೊದಲಾದವರು ಇದ್ದರು.
ದೇಶದ ವಿಚಾರದ ಹೇಳಿಕೆಗೆ ಕಡಿವಾಣ ಅಗತ್ಯ
ಮೈಸೂರು : ದೇಶದ ವಿಷಯದಲ್ಲಿ ನಮ್ಮ ಹೇಳಿಕೆಗೆ ಕಡಿವಾಣ ಹಾಕಿಕೊಳ್ಳಬೇಕು. ಒಳ್ಳೆಯದಾಗಲಿ ಕೆಟ್ಟದಾಗಲಿ ಯಾರೂ ಅಧಿಕಾರದಲ್ಲಿರುತ್ತಾರೋ ಅವರಿಗೆ ಕ್ರೆಡಿಟ್ ಸಲ್ಲುತ್ತದೆ. ಇದಕ್ಕಾಗಿ ಪೈಪೋಟಿ ಸರಿಯಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಅಮೆರಿಕ ನಮ್ಮ ಆಂತರಿಕ ವಿಚಾರದಲ್ಲಿ ಪ್ರವೇಶ ಮಾಡುವುದು ಭದ್ರತಾ ದೃಷ್ಟಿಯಿಂದ ಒಳ್ಳೆಯದಲ್ಲ. ಯುದ್ದ ವಿರಾಮ ವಿಚಾರ ಘೋಷಣೆಯಾದ ಮೇಲೂ ಫೈರಿಂಗ್ ಆಗಿದೆ. ಯುದ್ದ ವಿರಾಮದ ಚರ್ಚೆ ಎಲ್ಲಿ ಆಯ್ತು ಅನ್ನೋ ಬಗ್ಗೆ ಮಾಹಿತಿ ಇಲ್ಲ. ಈಗೀಗ ಒಂದೊಂದೆ ಮಾಹಿತಿ ಹೊರ ಬರುತ್ತಿದೆ.
ಕೇಂದ್ರ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡಿದ್ದೇವೆ. ಬೇಷರತ್ ಬೆಂಬಲ ಕೊಟ್ಟಿದ್ದೇವೆ. ಹೀಗಾಗಿ ಅವರು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ನಮಗೆ ತಿಳಿಸಿದರೆ ಒಳ್ಳೆಯದು. ಭದ್ರತೆ ದೃಷ್ಟಿಯಿಂದ ಕೇಂದ್ರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಒಳ್ಳೆಯದು ಎಂದು ಅವರು ತಿಳಿಸಿದರು.