ಬೃಹತ್‌ ರಕ್ತದಾನ ಶಿಬಿರ, ಜಾಗೃತಿಗಾಗಿ ನಡಿಗೆ

| Published : Jun 16 2024, 01:45 AM IST

ಸಾರಾಂಶ

ಪ್ರತಿಯೊಬ್ಬ ನಾಗರಿಕರು 3 ತಿಂಗಳಿಗೊಮ್ಮೆ ತಮ್ಮ ರಕ್ತ ದಾನ ಮಾಡಬೇಕು, ಇದು ಅಗತ್ಯವಿರುವ ರೋಗಿಗಳ ಜೀವ ಉಳಿಸಲು ಅವಶ್ಯಕವಾಗಿದೆ. ಒಂದು ಯೂನಿಟ್ ರಕ್ತದಾನವು 3 ಜೀವಗಳನ್ನು ಉಳಿಸುತ್ತದೆ.

ಹುಬ್ಬಳ್ಳಿ:

ವಿಶ್ವ ರಕ್ತದಾನ ದಿನದ ಅಂಗವಾಗಿ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತಕೇಂದ್ರದ ವತಿಯಿಂದ ನಗರದಲ್ಲಿ ಶುಕ್ರವಾರ ಬೃಹತ್ ರಕ್ತದಾನ ಶಿಬಿರ ಹಾಗೂ ಜಾಗೃತಿಗಾಗಿ ನಡಿಗೆ ಕಾರ್ಯಕ್ರಮ ಜರುಗಿತು. ಮಜೇಥಿಯಾ ಫೌಂಡೇಶನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ಕಾರ್ಯಕ್ರಮ ಉದ್ಘಾಟಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರಕ್ತದಾನದಿಂದ 48 ಗಂಟೆಗಳಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಿಸಬೇಕು. ಈ ಕುರಿತು ಜಾಗೃತಿ ಹೊಂದುವ ಮೂಲಕ ಪ್ರತಿಯೊಬ್ಬರೂ ರಕ್ತದಾನಕ್ಕೆ ಮುಂದಾಗುವಂತೆ ಕರೆ ನೀಡಿದರು.

ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ. ಪ್ರಸಾದ ಮಾತನಾಡಿ, ಪ್ರತಿಯೊಬ್ಬ ನಾಗರಿಕರು 3 ತಿಂಗಳಿಗೊಮ್ಮೆ ತಮ್ಮ ರಕ್ತ ದಾನ ಮಾಡಬೇಕು, ಇದು ಅಗತ್ಯವಿರುವ ರೋಗಿಗಳ ಜೀವ ಉಳಿಸಲು ಅವಶ್ಯಕವಾಗಿದೆ. ಒಂದು ಯೂನಿಟ್ ರಕ್ತದಾನವು 3 ಜೀವಗಳನ್ನು ಉಳಿಸುತ್ತದೆ. ಇಂದು ಭಾರತದಲ್ಲಿ 4 ಕೋಟಿ ಯೂನಿಟ್‌ಗಳ ರಕ್ತದ ಕೊರತೆಯಿದೆ ಎಂದರು.

ರಕ್ತದಾನ ಶ್ರೇಷ್ಠ ದಾನ ಎಂದೂ ಹೇಳಲಾಗುತ್ತದೆ. ಆದ್ದರಿಂದ ಲಕ್ಷಾಂತರ ಜೀವ ಉಳಿಸಲು ನಿಯತಕಾಲಿಕವಾಗಿ ರಕ್ತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ನೈತಿಕ ಜವಾಬ್ದಾರಿಯಾಗಿದೆ. ವೈದ್ಯರ ಅಭಿಪ್ರಾಯದಂತೆ, ಒಬ್ಬ ವ್ಯಕ್ತಿಯು ದಾನ ಮಾಡಿದ ರಕ್ತದ ಪ್ರಮಾಣವು 48 ಗಂಟೆಗಳಲ್ಲಿ ಪುನರುತ್ಪಾದನೆಯಾಗುತ್ತದೆ ಮತ್ತು ರಕ್ತದಾನ ಮಾಡಿದ ವ್ಯಕ್ತಿಯ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದರು.

ರಾಷ್ಟ್ರೋತ್ಥಾನ ರಕ್ತಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ, ಡೆಪ್ಯುಟಿ ಡ್ರಗ್ ಕಂಟ್ರೋಲರ್ ಡಾ. ಬಸವರಾಜ ಅಸಂಗಿ ಮಾತನಾಡಿದರು. ಗೋಪಾಲಕೃಷ್ಣ ನಾಯಕ, ಡಾ. ನೀಲಕಂಠ ರಾಥೋಡ, ಡಾ. ರಾಹುಲ್ ಮುಂಗೆಕರ, ಡಾ. ಕ್ರಾಂತಿ ಕಿರಣ, ವಿನೋದಕುಮಾರ ಪಟ್ಟಾ, ರಕ್ತಕೇಂದ್ರದ ವೈದ್ಯಾಧಿಕಾರಿ ಡಾ. ಎಸ್. ಎಸ್. ಸಂಗೊಳ್ಳಿ, ಸುಭಾಸಸಿಂಗ್ ಜಮಾದಾರ, ಮಹೇಂದ್ರ ಕೌತಾಳ, ರವಿ ನಾಯಕ, ಹನುಮಂತ ಶಿಗ್ಗಾವ್, ವಿಶ್ವನಾಥ ರಾನಡೆ, ಲಕ್ಷ್ಮಣ ಕುಲಕರ್ಣಿ, ಸಂಜೀವ ಜೋಶಿ, ಹರೀಶ ಜೋಶಿ, ಸಂದೀಪ ಬುದಿಹಾಳ ಸೇರಿದಂತೆ ಹಲವರಿದ್ದರು.

ರಕ್ತದಾನ ಶಿಬಿರದಲ್ಲಿ ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ. ಪ್ರಸಾದ ಅವರು 83ನೇ ಬಾರಿ, ದತ್ತಮೂರ್ತಿ ಕುಲಕರ್ಣಿ 69ನೇ ಬಾರಿ ಮತ್ತು ಕೇಶವ ವಿದ್ಯಾಲಯದ ಮುಖ್ಯಸ್ಥ ಶ್ರೀಧರ್ ಜೋಶಿ ಅವರು 52ನೇ ಬಾರಿ ರಕ್ತದಾನ ಮಾಡಿದರು. ನಂತರ ನಡೆದ ಜಾಗೃತಿಗಾಗಿ ನಡಿಗೆ ಕಾರ್ಯಕ್ರಮದಲ್ಲಿ ಸುಮಾರು 25 ಶಾಲಾ, ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.