ಕೊಪ್ಪಕೇಂದ್ರ ಚುನಾವಣಾ ಆಯೋಗ ನಡೆಸಿದ ಮತದಾರರ ವಿಶೇಷ ಪರಿಷ್ಕರಣೆ (SIR) ಮೂಲಕ ಸಂವಿಧಾನಬದ್ಧ ಮತದಾನದ ಹಕ್ಕು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಕೊಪ್ಪ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಾಗೂ ಜಾಗೃತಿ ಸಮಾವೇಶ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಕೊಪ್ಪ
ಕೇಂದ್ರ ಚುನಾವಣಾ ಆಯೋಗ ನಡೆಸಿದ ಮತದಾರರ ವಿಶೇಷ ಪರಿಷ್ಕರಣೆ (SIR) ಮೂಲಕ ಸಂವಿಧಾನಬದ್ಧ ಮತದಾನದ ಹಕ್ಕು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಕೊಪ್ಪ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಾಗೂ ಜಾಗೃತಿ ಸಮಾವೇಶ ನಡೆಸಲಾಯಿತು.ರಾಘವೇಂದ್ರ ನಗರದ ಶ್ರೀ ಚೌಡೇಶ್ವರಿ ದೇವಾಲಯದಿಂದ ಆರಂಭವಾದ ಪಾದಯಾತ್ರೆ ಪ್ರಮುಖ ರಸ್ತೆ ಹಾಗೂ ಬಸ್ ನಿಲ್ದಾಣದ ಮಾರ್ಗವಾಗಿ ತಾಲೂಕು ಕಚೇರಿಗೆ ಬಂದ ಕಾರ್ಯಕರ್ತರು ಕೇಂದ್ರ ಹಾಗೂ ಚುನಾವಣಾ ಆಯೋಗದ ಧೋರಣೆ ಖಂಡಿಸಿ ಘೋಷಣೆ ಕೂಗಿದರು. ಬಳಿಕ ತಹಸೀಲ್ದಾರ್ ಕಛೇರಿಯಲ್ಲಿ ಪ್ರತಿಭಟಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ವಿವಿಧ ಬೇಡಿಕೆ ಒಳಗೊಂಡ ಮನವಿ ಪತ್ರ ಸಲ್ಲಿಸಲಾಯಿತು.
ಮತ ಕದಿವ ಹುನ್ನಾರದಿಂದ ಚುನಾವಣೆ ಗೆಲ್ಲಲು ಅಸಾಧ್ಯ:ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ರವೀಂದ್ರ ಕುಡ್ಕುಡಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 5 ವರ್ಷಕ್ಕೊಮ್ಮೆ ಮತ ಚಲಾ ಯಿಸಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಜೆಗಳ ಸಂವಿಧಾನಬದ್ಧ ಹಕ್ಕನ್ನೇ ಬಿಜೆಪಿ ಕಸಿಯಲು ಹೊರಟಿದೆ. ಕಾಂಗ್ರೆಸ್ ಎಲ್ಲ ಅರ್ಹ ನಾಗರಿಕರ ಹೆಸರನ್ನು ಪಟ್ಟಿಗೆ ಸೇರಿಸಲು ಶ್ರಮಿಸುತ್ತಿದ್ದರೆ, ಬಿಜೆಪಿ ಮುಖಂಡರು ಕಾಂಗ್ರೆಸ್ ಬೆಂಬಲಿಗರ ಮತ ಗಳನ್ನು ಆಕ್ಷೇಪಣೆ ಸಲ್ಲಿಸುವ ಮೂಲಕ ಪಟ್ಟಿಯಿಂದ ತೆಗೆಸುವ ಹೀನ ಕೃತ್ಯಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿದರು.
ಇಂತಹ ಕೀಳು ತಂತ್ರಗಳಿಂದ 2028ರ ವಿಧಾನಸಭಾ ಚುನಾವಣೆ ಗೆಲ್ಲಲು ಬಿಜೆಪಿಗೆ ಎಂದಿಗೂ ಸಾಧ್ಯವಿಲ್ಲ. ಶೃಂಗೇರಿ ಕ್ಷೇತ್ರದ ಮರು ಮತಎಣಿಕೆ ವೇಳೆ ಮತಗಳನ್ನು ಅಕ್ರಮವಾಗಿ ತಿದ್ದಿಸಿ ದೇಶದಲ್ಲೇ ಕ್ಷೇತ್ರಕ್ಕೆ ಕಪ್ಪುಚುಕ್ಕೆ ತಂದ ಇತಿಹಾಸ ಬಿಜೆಪಿಯದ್ದು ಎಂದರು. ಬಿಸಿಲನ್ನೂ ಲೆಕ್ಕಿಸದೆ ಪಾದಯಾತ್ರೆಯಲ್ಲಿ ಭಾಗವಹಿಸಿದ ಎಲ್ಲ ಕಾರ್ಯಕರ್ತರು ಪ್ರಜಾಪ್ರಭುತ್ವದ ರಕ್ಷಣೆಗೆ ಸದಾ ಸನ್ನದ್ಧರಾಗಿರಬೇಕು ಎಂದು ಕರೆ ನೀಡಿದರು.ಸಾಂವಿಧಾನಿಕ ಸಂಸ್ಥೆಗಳು ಸರ್ಕಾರದ ಕೈಗೊಂಬೆ:
ಜಿಪಂ ಮಾಜಿ ಅಧ್ಯಕ್ಷ ಎಚ್.ಎಂ. ಸತೀಶ್ ಕರ್ನಾಟಕದಲ್ಲಿ ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ ಸುಮಾರು ಒಂದು ಕೋಟಿಗೂ ಹತ್ತಿರ (99 ಲಕ್ಷಕ್ಕೂ ಅಧಿಕ) ಮತದಾರರನ್ನು ವ್ಯವಸ್ಥಿತವಾಗಿ ಕೈಬಿಡಲಾಗಿದೆ. ಪಶ್ಚಿಮ ಬಂಗಾಳ, ಮಹಾ ರಾಷ್ಟ್ರ ಹಾಗೂ ರಾಜಸ್ಥಾನಗಳ ಮಾದರಿಯಲ್ಲೇ ರಾಜ್ಯದಲ್ಲೂ ಮತ ಕಳ್ಳತನದ ಹುನ್ನಾರ ನಡೆಸಲಾಗುತ್ತಿದೆ. ಚುನಾ ವಣಾ ಆಯೋಗ ಕೇಂದ್ರದ ಕೈಗೊಂಬೆಯಂತಿದೆ ಎಂದು ಕಿಡಿಕಾರಿದರು.ಈ ಅನ್ಯಾಯದ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಮಟ್ಟದ ನಿರಂತರ ಹೋರಾಟ ನಡೆಯುತ್ತಿದ್ದು, ನ. 1 ರಂದು ದೆಹಲಿ ರಾಮಲೀಲಾ ಮೈದಾನದಲ್ಲಿ ಬೃಹತ್ ಐತಿಹಾಸಿಕ ಪ್ರತಿಭಟನೆ ನಡೆಯಲಿದೆ. ತಾಲೂಕಿನಲ್ಲಿ ಕೈಬಿಟ್ಟು ಹೋದ 500 - 600 ಅರ್ಹ ಮತದಾರರನ್ನು ಗುರುತಿಸಿ, ಪ್ರತಿ ಪಂಚಾಯಿತಿ ಮತ್ತು ಬೂತ್ ಮಟ್ಟದಲ್ಲಿ ಬಿಎಲ್ಒ (BLO) ಸಂಪರ್ಕ ದೊಂದಿಗೆ ಫಾರಂ ನಂ. 6 ಮೂಲಕ ಮರುಸೇರ್ಪಡೆಗೊಳಿಸಬೇಕು. ಗ್ಯಾರಂಟಿ ಯೋಜನೆಗಳ ಬಲದಿಂದ ಕಾಂಗ್ರೆಸ್ 2028ರ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ , ಕಾಂಗ್ರೆಸ್ಸಿನ ಹಿರಿಯ ಮುಖಂಡ ಅಸಗೋಡು ನಾಗೇಶ್, ಅಕ್ರಮ-ಸಕ್ರಮ ಸಮಿತಿ ಸದಸ್ಯ ಅನ್ನಪೂರ್ಣ ನರೇಶ್, ಕೆಡಿಪಿ ಸದಸ್ಯರಾದ ನಾರ್ವೆ ಅಶೋಕ್, ಚಿಂತನ್ ಬೆಳಗೊಳ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮದ್ ಸಾಧಿಕ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್, ವಿಜಯಾನಂದ, ವಾಸಂತಿ, ನವೀನ್ ಕರುವಾನೆ, ಸಂದೇಶ್, ಆನಂದ್, ಸಂತೋಷ್, ನವೀನ್, ಭಾಸ್ಕರ್, ಸುಮ, ಪಪಂ ಮಾಜಿ ಅಧ್ಯಕ್ಷೆ ಮಾಲತಿ ಉಪಸ್ಥಿತರಿದ್ದರು.