೨೦೨೬ರ ಏಪ್ರಿಲ್ನಲ್ಲಿ ಕರ್ತವ್ಯಕ್ಕೆ ಹಾಜರಾದಾಗಿನಿಂದ ಎಬಿ-ಆರ್ಕೆ ಯೋಜನೆಯಡಿ ದಾಖಲಾಗುವ ಬಡ ರೋಗಿಗಳಿಗೆ ಸಮರ್ಪಕ ಉಚಿತ ಚಿಕಿತ್ಸೆ ದೊರೆಯದಿರುವುದನ್ನು ಗಮನಿಸಿದ್ದೇನೆ. ಬಿಪಿಎಲ್ ಕಾರ್ಡ್ದಾರರು ಉಚಿತ ಚಿಕಿತ್ಸೆ ಪಡೆಯುವ ಹಕ್ಕಿನ ಬಗ್ಗೆ ರೋಗಿಗಳಿಗೆ ಅರಿವು ಮೂಡಿಸುತ್ತಿದ್ದೆ. ಆದರೆ ಈ ವಿಚಾರವಾಗಿ ಮಾತನಾಡದಂತೆ ದೂರವಾಣಿ ಮೂಲಕ ಬೆದರಿಕೆ ಹಾಕಲಾಗಿತ್ತು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ಆಡಳಿತಾತ್ಮಕ ಲೋಪ, ಹಣಕಾಸು ಅವ್ಯವಹಾರ, ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನಿರಾಕರಣೆ ಹಾಗೂ ಯೋಜನೆಗಳ ದುರುಪಯೋಗ ನಡೆಯುತ್ತಿದ್ದು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಹಾಗೂ ಸಾಮಾಜಿಕ ಪ್ರಗತಿಪರ ಹೋರಾಟಗಾರರು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ದಲಿತ ಹಾಗೂ ಸಾಮಾಜಿಕ ಪ್ರಗತಿಪರ ಹೋರಾಟಗಾರರ ಸಂಘದ ಅಧ್ಯಕ್ಷ ದಿನೇಶ್ ಮಾಧ್ಯಮದೊಂದಿಗೆ ಮಾತನಾಡಿ, ಆಸ್ಪತ್ರೆ ಇಂದು ಕೆಲವರ ಸ್ವಾರ್ಥ ಮತ್ತು ಭ್ರಷ್ಟಾಚಾರಕ್ಕೆ ತುತ್ತಾಗಿದೆ. ೨೦೧೮ರಿಂದ ಈಚೆಗೆ ಆಸ್ಪತ್ರೆಯ ಹಣಕಾಸು ವ್ಯವಹಾರಗಳ ಸಮಗ್ರ ಲೆಕ್ಕಪರಿಶೋಧನೆ ನಡೆಸಬೇಕು. ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಚಿಕಿತ್ಸೆ ಸೌಲಭ್ಯವಿದ್ದರೂ ಶೇ.೫೦ ರಷ್ಟು ಹಣ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಪಾರದರ್ಶಕ ಲೆಕ್ಕ ನೀಡಬೇಕು ಎಂದು ಒತ್ತಾಯಿಸಿದರು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿ-ಆರ್ಕೆ) ಹಾಗೂ ಎಸ್ಸಿ, ಎಸ್ಟಿ ಯೋಜನೆಗಳಡಿ ಒಂದೇ ಚಿಕಿತ್ಸೆಗೆ ಎರಡು ಬಾರಿ ಬಿಲ್ ಪಡೆಯಲಾಗುತ್ತಿದೆ. ಆಂಬುಲೆನ್ಸ್ ಸೇವೆಯಲ್ಲಿಯೂ ಅವ್ಯವಹಾರ ನಡೆಯುತ್ತಿದೆ. ಆಸ್ಪತ್ರೆ ಪ್ರಭಾರ ವೈದ್ಯಕೀಯ ಅಧೀಕ್ಷಕ ಕೃಷ್ಣಮೂರ್ತಿ ಅವರ ನೇಮಕಾತಿ ಮತ್ತು ಆಡಳಿತಾತ್ಮಕ ನಿರ್ಧಾರಗಳ ಬಗ್ಗೆಯೂ ತನಿಖೆಯಾಗಬೇಕು. ಹೊರಗುತ್ತಿಗೆ ಏಜೆನ್ಸಿಗಳ ನೇಮಕಾತಿ ಹಾಗೂ ನಿರ್ವಹಣೆಯಲ್ಲಿ ಮಹೇಶ್ ಎಂಬುವವರ ಹಸ್ತಕ್ಷೇಪ ಕುರಿತು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಆಸ್ಪತ್ರೆಯಲ್ಲಿ ಆರೋಗ್ಯ ಮಿತ್ರನಾಗಿ ಕಾರ್ಯನಿರ್ವಹಿಸಿದ್ದ ಎಂ.ಸಿ. ವಿರಭದ್ರಪ್ಪ ಮಾತನಾಡಿ, ೨೦೨೬ರ ಏಪ್ರಿಲ್ನಲ್ಲಿ ಕರ್ತವ್ಯಕ್ಕೆ ಹಾಜರಾದಾಗಿನಿಂದ ಎಬಿ-ಆರ್ಕೆ ಯೋಜನೆಯಡಿ ದಾಖಲಾಗುವ ಬಡ ರೋಗಿಗಳಿಗೆ ಸಮರ್ಪಕ ಉಚಿತ ಚಿಕಿತ್ಸೆ ದೊರೆಯದಿರುವುದನ್ನು ಗಮನಿಸಿದ್ದೇನೆ. ಬಿಪಿಎಲ್ ಕಾರ್ಡ್ದಾರರು ಉಚಿತ ಚಿಕಿತ್ಸೆ ಪಡೆಯುವ ಹಕ್ಕಿನ ಬಗ್ಗೆ ರೋಗಿಗಳಿಗೆ ಅರಿವು ಮೂಡಿಸುತ್ತಿದ್ದೆ. ಆದರೆ ಈ ವಿಚಾರವಾಗಿ ಮಾತನಾಡದಂತೆ ದೂರವಾಣಿ ಮೂಲಕ ಬೆದರಿಕೆ ಹಾಕಲಾಗಿತ್ತು. ಕಾರಣ ಕೇಳಿ ಎರಡು ನೋಟಿಸ್ ನೀಡಿದರೂ ಸಮರ್ಪಕ ಉತ್ತರ ಸಲ್ಲಿಸಿದ್ದೆ. ಆದರೂ ಇದೀಗ ತಮ್ಮನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಈ ಎಲ್ಲ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ರೋಗಿಗಳಿಗೆ ನ್ಯಾಯ ಒದಗಿಸಬೇಕು ಎಂದು ವಿರಭದ್ರಪ್ಪ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದೇವರಾಜು, ಮಂಜುನಾಥ, ಚಂದ್ರಶೇಖರ, ವೀರಪ್ಪ, ಪುಟ್ರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.