ಸಾರಾಂಶ
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ರವರ ಆರ್.ಬಿ ಶುಗರ್ ಲಿಮಿಟೆಡ್ ಕಂಪನಿ ವಿರುದ್ಧ ರೈತರು ಕರ್ನಾಟಕ ರೈತ ಸಂಘ (ಎಐಕೆಕೆಎಸ್)ದ ನೇತೃತ್ವದಲ್ಲಿ ಸಹಾಯಕ ಆಯುಕ್ತರ ಕಚೇರಿ ಮುಂದೆ 48 ಗಂಟೆಗಳ ಬೃಹತ್ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.ಸಿಪಿಐ(ಎಂಎಲ್) ರೆಡ್ ಸ್ಟಾರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಮಾತನಾಡಿ, ಸುಣಕಲ್, ಚಿಕ್ಕ ಉಪ್ಪೇರಿ ಗ್ರಾಮಗಳ ಜಮೀನಿನಲ್ಲಿ ಅಬಕಾರಿ ಸಚಿವರ ಆರ್.ಬಿ ತಿಮ್ಮಾಪುರ ರವರು ಆರ್.ಬಿ.ಶುಗರ್ ಕಾರ್ಖಾನೆ ಸ್ಥಾಪನೆಗೆ ರೈತರ ಭೂಮಿಯನ್ನು ಒಕ್ಕಲೆಬ್ಬಿಸಿ ಸರ್ಕಾರಿ ಭೂಮಿ ಕಬಳಿಸಿದ್ದಾರೆ. ಸರ್ವೆ ನಂಬರ್ 62ರಲ್ಲಿ ಸರ್ಕಾರಿ ಭೂಮಿ ಕಬಳಿಸಿದ ಸ್ಪಷ್ಟ ಕುರುಹು ಇದೆ, ಆದರೆ ತಹಸೀಲ್ದಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಚಿವರ ಒತ್ತಡಕ್ಕೆ ಮಣಿದು ನಿಯಮ ಉಲ್ಲಂಘಿಸಿ ನಿಯಮಗಳ ಪಾಲನೆ ಮಾಡದೇ ಸರ್ಕಾರಿ ಭೂಮಿ ಕಬಳಿಸಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ತಾಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿ ದಿವ್ಯಾಶ್ರೀ ಯವರ ದೌರ್ಜನ್ಯ ಅತೀಯಾಗಿದೆ. 2015ರ ಅರಣ್ಯ ಇಲಾಖೆ ಕಾಯ್ದೆ ಉಲ್ಲಂಘಿಸಿ ರೈತರ ಒಕ್ಕೆಲೆಬ್ಬಿಸುತ್ತಿದ್ದಾರೆ. ಮೂರ್ನಾಲ್ಕು ಎಕರೆ ಭೂಮಿ ಹೊಂದಿದ ರೈತರನ್ನು ಒಕ್ಕೆಲೆಬ್ಬಿಸಿ ಅವರ ಮೇಲೆ ಕೇಸು ದಾಖಲು ಮಾಡಿ ರೈತರಿಗೆ ಕಂಟಕವಾಗಿದ್ದಾರೆ.ಅರಣ್ಯ ನಿಯಮಗಳ ಪಾಲನೆ ಮಾಡುತ್ತಿಲ್ಲ ಇದರಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ಭೂ ಹೀನ ರೈತರ ಸಾಗುವಳಿಗೆ ಕಂಟಕವಾಗಿದ್ದಾರೆ. ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರ ಎಂದು ಪಪ್ಪಾಯಿ ಬೆಳೆದ ರೈತರ ಮೇಲೆ ದೌರ್ಜನ್ಯ ಎಸಗಿ ಅವರನ್ನು ಒಕ್ಕಲೆಬ್ಬಿಸಿದ್ದಾರೆ. ಈ ಕೂಡಲೇ ಅವರ ಮೇಲೆ ಕಠಿಣ ಕಾನೂನು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ತಹಸೀಲ್ದಾರ ಎನ್.ಶಂಶಾಲ, ಸಿಪಿಐ ಪುಂಡಲೀಕ ಪಟಾತರ್, ಅರಣ್ಯ ಅಧಿಕಾರಿ ದಿವ್ಯಶ್ರೀ ಇದ್ದರು.ಪ್ರತಿಭಟನೆಯಲ್ಲಿ ಮೈಸೂರಿನ ಶ್ರೀನಿವಾಸ ಕಂದೇಗಾಲ, ಕೊಡಗಿನ ಮಂಜುನಾಥ, ಸಣ್ಣಪ್ಪ, ಎಂ.ಗಂಗಾಧರ, ತಾಲೂಕ ಅಧ್ಯಕ್ಷ ವೀರಭದ್ರಪ್ಪ ಹಡಪದ, ತಿಪ್ಪಣ್ಣ ಚಿಕ್ಕಹೆಸರೂರು, ಬಸವರಾಜ ಬಡಿಗೇರ, ಗಂಗಾಧರ ಗುಂತಗೋಳ, ಆದೇಶ ನಗನೂರು, ಎಂ.ನಿಸರ್ಗ ಸೇರಿದಂತೆ ಸುಣಕಲ್, ಚಿಕ್ಕಉಪ್ಪೇರಿ, ಗೌಡೂರು, ಗೌಡೂರು ತಾಂಡ, ತೋರಲಬೆಂಚಿ, ಚಿಕ್ಕಹೆಸರೂರು, ವಂದಲಿ ಹೊಸೂರು ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ಅವದಿ ಮುಗಿದರು ಸ್ಥಾಪನೆಯಾಗದ ಕಾರ್ಖಾನೆ
2018ರಲ್ಲಿ ಆರ್.ಬಿ.ತಿಮ್ಮಾಪುರ ರವರು ಲಿಂಗಸುಗೂರು ತಾಲೂಕಿನಲ್ಲಿ ಕಬ್ಬಿನ ಸಿಪ್ಪೆ ಸುಟ್ಟು ವಿದ್ಯುತ್ ಉತ್ಪಾದನೆ ಮಾಡಲು ಕಾರ್ಖಾನೆ ಸ್ಥಾಪಿಸಲು ಪರವಾನಗಿ ಪಡೆದಿದ್ದಾರೆ. ನಿಗದಿತ ಅವದಿ ಮುಗಿದರು ಕಾರ್ಖಾನೆ ಸ್ಥಾಪನೆ ಮಾಡಿಲ್ಲ. ಇದರಲ್ಲಿ ಕಂದಾಯ, ಅರಣ್ಯ ಹಾಗೂ ರೈತರು ಭೂಮಿ ನುಂಗುವ ಷಡ್ಯಂತ್ರವಿದೆ. ಕೂಡಲೇ ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.