ಲೋಕಪಾವನಿ ಮಹಿಳಾ ಬ್ಯಾಂಕ್‌ನಲ್ಲಿ ಭಾರೀ ಅವ್ಯವಹಾರ: ಆರೋಪ

| Published : Sep 20 2024, 01:31 AM IST

ಸಾರಾಂಶ

ಪ್ರಸ್ತುತ ಆಡಳಿತ ಮಂಡಳಿ ನಿರ್ದೇಶಕರಾಗಿರುವ ವಿಜಯಲಕ್ಷ್ಮಿ ರಘುನಂದನ್, ಪ್ರಮೀಳಾ ಧರಣೇಂದ್ರಯ್ಯ, ಗೀತಾ ರಾಜಶೇಖರ್, ಸೌಭಾಗ್ಯ, ಆಶಾ ಪುಟ್ಟೇಗೌಡ, ವಸಂತ ಅವರು ತಲಾ 10 ಲಕ್ಷ ರು. ಸುಸ್ತಿದಾರರಾಗಿದ್ದಾರೆ. ಇವರೂ ಸೇರಿದಂತೆ 16 ಮಂದಿ ಸಾಲ ಪಡೆದು ಈವರೆವಿಗೂ ಹಣ ಪಾವತಿಸಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಪಾವನಿ ಮಹಿಳಾ ಬ್ಯಾಂಕ್‌ನ 2008-09ನೇ ಸಾಲಿನ ಆಡಳಿತ ಮಂಡಳಿ ಕೇಂದ್ರ ಸರ್ಕಾರದ ಕೃಷಿ ಸಾಲಮನ್ನಾ ಯೋಜನೆ ಮೂಲಕ 82 ಲಕ್ಷ ರು. ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಬ್ಯಾಂಕ್‌ನ ಸದಸ್ಯೆ ಸುಜಾತ ಕೃಷ್ಣ ಗಂಭೀರ ಆರೋಪ ಮಾಡಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕ್‌ನಲ್ಲಿ ನಡೆದಿರುವ ಹಣ ದುರುಪಯೋಗವನ್ನು ಭಾರತದ ಲೆಕ್ಕ ಪರಿಶೋಧಕರು ಹಾಗೂ ರಿಸರ್ವ್ ಬ್ಯಾಂಕ್‌ನ ಅಧಿಕಾರಿಗಳು ಪತ್ತೆ ಹಚ್ಚಿ ಅಕ್ರಮವಾಗಿ ಪಡೆದಿದ್ದ ಹಣವನ್ನು ತಕ್ಷಣ ವಾಪಸ್‌ ಮಾಡುವಂತೆ ಆಡಳಿತ ಮಂಡಳಿಗೆ ಸೂಚಿಸಿತ್ತು ಎಂದರು.

ಅಧಿಕಾರಿಗಳ ಸೂಚನೆಯಿಂದ ಆತಂಕಗೊಂಡ ಆಡಳಿತ ಮಂಡಳಿ ನಿರ್ದೇಶಕರು ಸಾರ್ವಜನಿಕರ ಠೇವಣಿ ಹಣವನ್ನು ರಿಸರ್ವ್ ಬ್ಯಾಂಕ್‌ಗೆ ಪಾವತಿ ಮಾಡಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ಬ್ಯಾಂಕ್‌ನ ವ್ಯವಸ್ಥಾಪಕರಿಂದ ರಾಜೀನಾಮೆ ಪಡೆದಿದ್ದರು ಎಂದು ಆರೋಪಿಸಿದರು.

ಪ್ರಸ್ತುತ ಆಡಳಿತ ಮಂಡಳಿ ನಿರ್ದೇಶಕರಾಗಿರುವ ವಿಜಯಲಕ್ಷ್ಮಿ ರಘುನಂದನ್, ಪ್ರಮೀಳಾ ಧರಣೇಂದ್ರಯ್ಯ, ಗೀತಾ ರಾಜಶೇಖರ್, ಸೌಭಾಗ್ಯ, ಆಶಾ ಪುಟ್ಟೇಗೌಡ, ವಸಂತ ಅವರು ತಲಾ 10 ಲಕ್ಷ ರು. ಸುಸ್ತಿದಾರರಾಗಿದ್ದಾರೆ. ಇವರೂ ಸೇರಿದಂತೆ 16 ಮಂದಿ ಸಾಲ ಪಡೆದು ಈವರೆವಿಗೂ ಹಣ ಪಾವತಿಸಿಲ್ಲ ಎಂದು ದೂರಿದರು.

ಇದಲ್ಲದೇ, 247 ಮಂದಿಗೆ 20 ಸಾವಿರ ರು. ಗಳಿಂದ 50 ಸಾವಿರ ರು.ಗಳವರೆಗೆ ಸಾಲ ನೀಡಿರುವ ಆಡಳಿತ ಮಂಡಳಿ, ಅವರಿಂದ ಒಂದು ನಯಾ ಪೈಸೆಯನ್ನೂ ವಸೂಲಿ ಮಾಡಿಲ್ಲ. ಸುಸ್ತಿದಾರರಿಂದ ಹಣ ಪಾವತಿಸುವಂತೆ ನೋಟಿಸ್ ನೀಡಿದ್ದರೂ ಸಹ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎಂದರು.

ಜಿಲ್ಲೆಯಲ್ಲಿರುವ ಏಕೈಕ ಮಹಿಳಾ ಬ್ಯಾಂಕ್‌ನ್ನು ಸರ್ವ ಸದಸ್ಯರ ವಿರೋಧದ ನಡುವೆ ವಿಕಾಸ ಸೌಹಾರ್ದ ಬ್ಯಾಂಕ್‌ನೊಂದಿಗೆ ವಿಲೀನ ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವರು ಜಾಮೀನು ಪಡೆದುಕೊಂಡು ನಂತರ ರಾಜಕೀಯ ಪ್ರಭಾವ ಬೀರಿ ‘ಬಿ’ ರಿಪೋರ್ಟ್ ಹಾಕಿಸಿದ್ದಾರೆ. ಪ್ರಕರಣದ ವಿಚಾರಣೆಯು ಸಹಕಾರ ಇಲಾಖೆ ವಿವಿಧ ಹಂತಗಳಲ್ಲಿ ಇನ್ನೂ ನಡೆಯುತ್ತಿರುವುದರ ಜೊತೆಗೆ ಸಹಕಾರ ಸಚಿವರ ನ್ಯಾಯಾಲಯದಲ್ಲೂ ಬಾಕಿ ಉಳಿದಿದೆ ಎಂದರು.

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಜಿಲ್ಲೆಯ ಏಕೈಕ ಮಹಿಳಾ ಸಹಕಾರ ಬ್ಯಾಂಕ್ ಇದಾಗಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಸದಸ್ಯರು ಕಾನೂನು ಹೋರಾಟ ಮಾಡಿದ್ದಾರೆ. ನಾವೂ ಸಹ ಇವರಿಗೆ ಬೆಂಬಲವಾಗಿ ನಿಂತಿದ್ದೇವೆ ಎಂದರು.

ಜಿಲ್ಲೆಯ ಹೊರಗಿನ ಸಹಕಾರ ಬ್ಯಾಂಕ್‌ನೊಂದಿಗೆ ವಿಲೀನ ಮಾಡುವುದು ನಮ್ಮ ಜಿಲ್ಲೆಗೆ ಗೌರವ ತಂದುಕೊಡುವುದಿಲ್ಲ. ಬದಲಿಗೆ ಇಲ್ಲೇ ಡಿಸಿಸಿ ಬ್ಯಾಂಕ್ ಸಹ ಇದೆ. ಅದರೊಂದಿಗೆ ವ್ಯವಹರಿಸಿ ಲೋಕಪಾವನಿ ಮಹಿಳಾ ಬ್ಯಾಂಕನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್‍ಯ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಮಾಜಿ ಅಧ್ಯಕ್ಷ ಸೌಭಾಗ್ಯ ಮಹದೇವು, ಸದಸ್ಯರಾದ ಕೆ.ಸಿ.ನಾಗಮ್ಮ, ಎ.ಜೆ. ವತ್ಸಲ, ಜಯಶೀಲಮ್ಮ ಸೇರಿದಂತೆ ಹಲವರು ಇದ್ದರು.