ಸಾರಾಂಶ
ಚಿತ್ರದುರ್ಗ: ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಆಯೋಜಿಸಿರುವ ಶೋಷಿತರ ಜಾಗೃತಿ ಸಮಾವೇಶಕ್ಕೆ ಚಿತ್ರದುರ್ಗ ಸಜ್ಜಾಗಿದೆ. ಇದಕ್ಕಾಗಿ ಮಾದಾರ ಗುರುಪೀಠದ ಪಕ್ಕದಲ್ಲಿರುವ ಸುಮಾರು 100 ಎಕರೆ ವಿಶಾಲವಾದ ಜಾಗದಲ್ಲಿ ವೇದಿಕೆ ಸೇರಿದಂತೆ ಪೆಂಡಾಲ್ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಹಲವು ಸಚಿವರು ಹಾಗೂ ಶೋಷಿತ ಸಮುದಾಯದ ಮಾಜಿ ಸಚಿವರು, ಶಾಸಕರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ 10 ಸಾವಿರಕ್ಕೂ ಹೆಚ್ಚು ವಾಹನಗಳು ಜಮಾವಣೆಗೊಳ್ಳುವ ಸಾಧ್ಯತೆಗಳಿವೆ.
ಕಾರ್ಯಕ್ರಮಕ್ಕೆ 5 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, 3 ಲಕ್ಷ ಜನತೆಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಸಮಾವೇಶ ವೇದಿಕೆ ಮೇಲೆ 200ಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದ್ದು, 3 ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಿದೆ. ಸಮಾವೇಶಕ್ಕೆ ಬರುವವರಿಗೆ ವೆಜ್ ಮತ್ತು ನಾನ್ ವೆಜ್ ಊಟ ಸಿದ್ಧಪಡಿಸಲಾಗುತ್ತಿದೆ.ಜಾತಿ ಜನಗಣತಿ ವರದಿ ಜಾರಿ ಮುಖ್ಯ ಉದ್ದೇಶವಾಗಿಟ್ಟುಕೊಂಡು ಸಮಾವೇಶ ಸಂಘಟಿಸಲಾಗಿದೆ. ಕಾಂತರಾಜ ವರದಿ ತ್ವರಿತವಾಗಿ ಜಾರಿ ಆಗಬೇಕು ಎಂಬ ಪ್ರಮುಖ ಹಕ್ಕೊತ್ತಾಯವ ಸಮಾವೇಶ ಅಂಗೀಕರಿಸಲಿದೆ. ರಾಜ್ಯದ ಶೋಷಿತ ಸಮುದಾಯದ ಸಮಾವೇಶ ಎಂದು ಹೇಳಲಾಗಿದ್ದರೂ ಕಾಂಗ್ರೆಸ್ ನ ನಾಯಕರು ಮಾತ್ರ ಸಂಘಟನೆಯಲ್ಲಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನವರು ಎಲ್ಲಿಯೂ ಸುಳಿದಾಡಿಲ್ಲ.
ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ: ಶೋಷಿತರ ಜಾಗೃತಿ ಸಮಾವೇಶದ ಹಿನ್ನಲೆ ಸಾರ್ವಜನಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಭಾನುವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಚಿತ್ರದುರ್ಗ ನಗರಕ್ಕೆ ವಿವಿಧೆಡೆಯಿಂದ ಆಗಮಿಸುವ ಭಾರಿ ಹಾಗೂ ಲಘು ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆಗೊಳಿಸಿ ಜಿಲ್ಲಾಧಿಕಾರಿ ವೆಂಕಟೇಶ್.ಟಿ ಆದೇಶ ಹೊರಡಿಸಿದ್ದಾರೆ.ದಾವಣಗೆರೆ ಮಾರ್ಗದಿಂದ ಬರುವ ವಾಹನಗಳು ಹೊಸ ಎನ್‌ಎಚ್ 48 (ಬೈಪಾಸ್) ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ 13ರ ಮೂಲಕ ಮುಂದುವರೆದು ಮದಕರಿಪುರ ಗ್ರಾಮದ ಬಳಿಯ ಸರ್ವಿಸ್ ರಸ್ತೆಯ ಮೂಲಕ ಇಳಿದು ಚಳ್ಳಕೆರೆ ರಸ್ತೆಯ ಮೂಲಕ ನಗರಕ್ಕೆ ಪ್ರವೇಶಿಸಬೇಕು.ಹೊಸಪೇಟೆ ಮಾರ್ಗದಿಂದ ಎನ್‌ಎಚ್ 50 ಬರುವ ಪ್ರಯಾಣಿಕರ ವಾಹನಗಳು ಎನ್‌ಎಚ್ 48ರ ಬೈಪಾಸ್ ರಸ್ತೆ ಮುಖಾಂತರ ಮದಕರಿಪುರ ಗ್ರಾಮದ ಬಳಿಯ ರಸ್ತೆಯ ಮೂಲಕ ಇಳಿದು ಚಳ್ಳಕೆರೆ ರಸ್ತೆಯ ಮೂಲಕ ನಗರಕ್ಕೆ ಪ್ರವೇಶಿಸಬೇಕು.
ಶಿವಮೊಗ್ಗ ಹಾಗೂ ಭೀಮಸಮುದ್ರ ಮಾರ್ಗದಿಂದ ಬರುವ ವಾಹನಗಳು ಕಣಿವೆ ಕ್ರಾಸ್ ಮುಖಾಂತರ ನಗರಕ್ಕೆ ಪ್ರವೇಶಿಸಬೇಕು. ಶಿವಮೊಗ್ಗ ಕಡೆಯಿಂದ ಚನ್ನಗಿರಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಸಂಚರಿಸುವ ಸರಕು ಸಾಗಣೆಯ ಭಾರಿ ವಾಹನಗಳು ಚನ್ನಗಿರಿ ಪಟ್ಟಣದಿಂದ ಸಂತೆಬೆನ್ನೂರು ಕ್ರಾಸ್ ಮುಖಾಂತರ ಸಂಚರಿಸಿ, ಸಂತೆಬೆನ್ನೂರು ಮಾರ್ಗವಾಗಿ ಎನ್‌ಎಚ್ 48 ರಸ್ತೆ ಮುಖಾತರ ಸಂಚರಿಸಬೇಕು.ಮುರುಘರಾಜೇಂದ್ರ ಬೃಹನ್ಮಠದ ಮುಂಭಾಗದಿಂದ ಸೀಬಾರ ಅಂಡರ್ ಪಾಸ್ ವರೆಗಿನ ಎನ್‌ಎಚ್ 48 ರಸ್ತೆಯಲ್ಲಿ ಎಲ್ಲಾ ಬಗೆಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಆದೇಶದಲ್ಲಿ ತಿಳಿಸಿದ್ದಾರೆ.