ದಿ ಆಕ್ಟಾ ಟ್ರೇಡಿಂಗ್ ಆ್ಯಪ್‌ ಎಂಬ ಟ್ರೇಡಿಂಗ್ ಅಪ್ಲೀಕೇಶನಲ್ಲಿ ಹಣ ಹೂಡಿಕೆ ಮಾಡಿದರೇ ಅಂತಾರಾಷ್ಟ್ರೀಯ ಮಟ್ಟದ ಡಾಲರ್, ಗೋಲ್ಡ್, ಕ್ರೂಡ್ ಆಯಿಲ್, ಕರೆನ್ಸಿ ಪೇರ್, ಟ್ರೇಡ್ ಮಾಡಿ ಹೂಡಿಕೆ ಮಾಡಿದ ಹಣಕ್ಕೆ ಪ್ರತಿದಿನ ಶೇ.4 ಲಾಭಾಂಶ ಮಾಡಿಕೊಡುತ್ತೇವೆಂದು ನಗರದ ವ್ಯಾಪಾರಿಯೊಬ್ಬರಿಗೆ ವಂಚಿಸಿದ್ದ ಪ್ರಕರಣ ಬೇಧಿಸಲಾಗಿದೆ ಎಂದು ವಿಜಯಪುರ ಎಸ್.ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದಿ ಆಕ್ಟಾ ಟ್ರೇಡಿಂಗ್ ಆ್ಯಪ್‌ ಎಂಬ ಟ್ರೇಡಿಂಗ್ ಅಪ್ಲೀಕೇಶನಲ್ಲಿ ಹಣ ಹೂಡಿಕೆ ಮಾಡಿದರೇ ಅಂತಾರಾಷ್ಟ್ರೀಯ ಮಟ್ಟದ ಡಾಲರ್, ಗೋಲ್ಡ್, ಕ್ರೂಡ್ ಆಯಿಲ್, ಕರೆನ್ಸಿ ಪೇರ್, ಟ್ರೇಡ್ ಮಾಡಿ ಹೂಡಿಕೆ ಮಾಡಿದ ಹಣಕ್ಕೆ ಪ್ರತಿದಿನ ಶೇ.4 ಲಾಭಾಂಶ ಮಾಡಿಕೊಡುತ್ತೇವೆಂದು ನಗರದ ವ್ಯಾಪಾರಿಯೊಬ್ಬರಿಗೆ ವಂಚಿಸಿದ್ದ ಪ್ರಕರಣ ಬೇಧಿಸಲಾಗಿದೆ ಎಂದು ವಿಜಯಪುರ ಎಸ್.ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ನಗರದ ಪೊಲೀಸ್ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಳ್ಳು ಹೇಳಿ ನಂಬಿಸಿ, ಇವರ ಕಡೆಯಿಂದ ಒಟ್ಟು ₹2,04,71,500‌ ಗಳನ್ನು ಹಾಕಿಸಿಕೊಂಡು ಟ್ರೇಡಿಂಗ್ ಹೆಸರಿನಲ್ಲಿ ಆನ್‌ಲೈನ್‌ ಮೂಲಕ ವಂಚನೆ ಮಾಡಲಾಗಿತ್ತು. ಈ‌ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿತರಿಗೆ ಪತ್ತೆ ಮಾಡಿ, ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ, ಈ ಮೊದಲು ₹70,00,000‌ ಗಳನ್ನು ದೂರುದಾರರ ಖಾತೆಗೆ ಜಮಾ ಮಾಡಿಸಲಾಗಿತ್ತು. ಪ್ರಸ್ತುತ ₹65,64,000‌ ಗಳನ್ನು ದೂರುದಾರರ ಖಾತೆಗೆ ಜಮಾ ಮಾಡಿಸಿದ್ದು, ಪ್ರಕರಣದಲ್ಲಿ ಒಟ್ಟು ₹1,35,64,000 ಗಳನ್ನು ಆರೋಪಿತರಿಂದ ದೂರುದಾರರಿಗೆ ಮರಳಿಸಲಾಗಿದೆ ಎಂದರು.ಎರಡನೇ ಪ್ರಕರಣ:

ಬಿ.ಆರ್.ಅಂಬೇಡ್ಕರ್‌ ಅಭಿವೃದ್ಧಿ ಜಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ, ತಾಲೂಕು ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಮಣಿಗಿರಿ (ನಿವೃತ್ತ) ಹಾಗೂ ಮುಧೋಳ.ಎಂ.ಟಿ (ಮರಣ ಹೊಂದಿದ್ದಾರೆ) (ಖರೀದಿ ಸಂದರ್ಭದಲ್ಲಿದ್ದವರು) ಇವರುಗಳು 2018-19ರಲ್ಲಿ ಕರ್ತವ್ಯಲೋಪ ಮಾಡಿ ಸರ್ಕಾರಕ್ಕೆ ₹75,90,000‌ ಗಳನ್ನು ಹಣವನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದರು. ಈ ಕುರಿತು ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು ₹27,55,183 ಗಳನ್ನು ಮರಳಿಸಲು ಆದೇಶ ಮಾಡುವಂತೆ ನ್ಯಾಯಾಲಯಕ್ಕೆ ವರದಿ ನೀಡಲಾಗಿದೆ‌ ಎಂದರು.ಮೂರನೇ ಪ್ರಕರಣ:

ಜಿಲ್ಲೆಯ ವೈದ್ಯರೊಬ್ಬರಿಗೆ ಡಿವೋರ್ಸ್‌ ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ, http://m.bitcoin-vt.com ಎಂಬ ವೆಬ್‌ಸೈಟ್‌ಗಳಲ್ಲಿ ಹಣ ಹೂಡಿಕೆ ಮಾಡಿ ಕ್ರಿಪ್ಟೋ ಟ್ರೇಡಿಂಗ್ ಮಾಡಿ ಲಾಭಾಂಶ ಮಾಡಿಕೊಟ್ಟು ದೂರುದಾರರ ಸಾಲ ತೀರಿಸುವುದಾಗಿ ಸುಳ್ಳು ಹೇಳಿ ನಂಬಿಸಿ ದೂರುದಾರರ ಕಡೆಯಿಂದ ತಮ್ಮ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಒಟ್ಟು ₹2,15,50,000 ಹಾಕಿಸಿಕೊಂಡು ಮೋಸ ವಂಚನೆ ಮಾಡಿದ್ದರು. ಈ‌ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಂಚಿಸಿದ ಆರೋಪಿತರಿಂದ ಮತ್ತು ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು ₹25,11,000 ಗಳನ್ನು ಆರೋಪಿತರಿಂದ ದೂರುದಾರರಿಗೆ ಮರಳಿಸಲಾಗಿದೆ ಎಂದರು.ನಾಲ್ಕನೇ ಪ್ರಕರಣ:

ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ Jet Serve Aviation Private Ltd. (Flyola) ಎಂಬ ವೆಬ್‌ಸೈಟ್‌ನಲ್ಲಿ ಪ್ರಯಾಗರಾಜ ವಿಮಾನ ನಿಲ್ದಾಣದಿಂದ ಪ್ರಯಾಗರಾಜ ಕುಂಭಮೇಳ ಸ್ಥಳಕ್ಕೆ ಹೆಲಿಕಾಪ್ಟರ್ ಮೂಲಕ ಹೋಗಲು ಸರ್ವಿಸ್ ಕೊಡುತ್ತೇವೆ ಎಂದು ಹೆಲಿಕಾಪ್ಟರ್ ಸರ್ವಿಸ್ ಕೊಡದೇ ₹4,08,000 ಹಣವನ್ನು ವಂಚಿಸಲಾಗಿತ್ತು. ಈ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಂಚಿಸಿದ ಆರೋಪಿತರಿಂದ ಮತ್ತು ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು ₹4,08,000 ಗಳನ್ನು ಆರೋಪಿತರಿಂದ ದೂರುದಾರರಿಗೆ ಮರಳಿಸಲಾಗಿದೆ ಎಂದರು.ಐದನೇ ಪ್ರಕರಣ:

ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ ಹಾಗೂ ಅವರ ಪರಿಚಯದ 09 ಜನರಿಗೆ ಇಕಾಮ್ ಡೆಲಿವರಿ ಪ್ರಾಂಚೈಸಿ ಕೊಡುತ್ತೇವೆಂದು ನಂಬಿಸಿ ಅವರಿಂದ ಒಟ್ಟು ₹58,00,000‌ ಗಳನ್ನು ಪಡೆದುಕೊಂಡು ಯಾವುದೇ ಫ್ರಾಂಚೈಸಿ ಕೊಡದೆ ವಂಚಿಸಲಾಗಿತ್ತು. ಈ‌ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಂಚಿಸಿದ ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು ₹10,00,000 ಗಳನ್ನು ಪಿರ್ಯಾದಿ ಮತ್ತು ಸಾಕ್ಷಿದಾರರಿಗೆ ಮರಳಿಸಲಾಗಿದೆ. ಅದರಂತೆ ಉಳಿದ ಆರೋಪಿತರ ಬ್ಯಾಂಕ್ ಖಾತೆಗಳಲ್ಲಿ ಒಟ್ಟು ₹12,00,000 ಗಳನ್ನು ಫ್ರೀಜ್ ಮಾಡಿಸಿ, ನ್ಯಾಯಾಲಯದ ಆದೇಶ ಪಡೆದುಕೊಂಡಿದ್ದು, ಬ್ಯಾಂಕಿನಿಂದ ಸಾಕ್ಷಿದಾರರಿಗೆ ರಿಫಂಡ್ ಮಾಡಿಸುವ ಕೆಲಸ ಪ್ರಕ್ರಿಯೆಯಲ್ಲಿದೆ ಎಂದರು.ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೇಲ್ಕಂಡ ಒಟ್ಟು 05 ಪ್ರಕರಣಗಳಲ್ಲಿ ಆರೋಪಿತರು ವಂಚನೆ ಮಾಡಿದ ಹಣದಲ್ಲಿ ಸುಮಾರು ₹1,32,38,183 ಹಣವನ್ನು ದೂರುದಾರರಿಗೆ ಮರಳಿಸಲಾಗಿದೆ. ಅಲ್ಲದೇ ವಿಜಯಪುರ ನಗರ ಹಾಗೂ ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೊಬೈಲ್ ಗಳನ್ನು ಸಿ.ಇ.ಐ.ಆರ್‌ ಪೋರ್ಟಲ್ ಮೂಲಕ ವಿವಿಧ ಕಂಪನಿಯ ಒಟ್ಟು ₹2,40,000‌ ಮೌಲ್ಯದ 10 ಮೊಬೈಲ್‌ಗಳನ್ನು ಪತ್ತೆ ಮಾಡಿ, ಅವುಗಳ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದರು.ಇದೇ ವೇಳೆ ಈ ಪ್ರಕರಣಗಳಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಗೋಷ್ಠಿಯಲ್ಲಿ ಫ್ರೊಬೆಷನರಿ ಎಸ್.ಪಿ ಇಶಿತಾ ಗುಪ್ತಾ, ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಸುನೀಲ ಕಾಂಬಳೆ, ಪಿಐ ರವಿ ಯಡವಣ್ಣವರ ಇದ್ದರು.