ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿದ್ಯುತ್ ವಿತರಣಾ ಕಂಪನಿಗಳನ್ನು ಟಾಟಾ ಪವರ್ ಕಂಪನಿಗಳಿಗೆ ನೀಡುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದವರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾನಿರತ ರೈತರು ಕರ್ನಾಟಕ ಸರ್ಕಾರ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ವಿದ್ಯುತ್ ಕಂಪನಿಗಳ 19 ಜಿಲ್ಲೆಗಳ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಯವರಿಗೆ ವಹಿಸುತ್ತಿರುವುದನ್ನು ನಾವುಗಳು ವಿರೋಧಿಸುತ್ತೇವೆ. ಸಾವಿರಾರು ಕೋಟಿ ರು. ಮೌಲ್ಯದ ವಿತರಣಾ ಕಂಪನಿಗಳು, ಉಪ ಕೇಂದ್ರಗಳು, ಯಂತ್ರೋಪಕರಣ ಬೃಹತ್ ಸೌಕರ್ಯ ಹೊಂದಿರುವ ಸಾರ್ವಜನಿಕ ಆಸ್ತಿ. ಕಂಪನಿಗಳು ಮತ್ತು ನೌಕರರು ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಆದರೂ ಖಾಸಗಿ ಕಂಪನಿಯವರಿಗೆ ವಹಿಸುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.

ಕೆಲವು ರಾಜ್ಯಗಳಲ್ಲಿ ಖಾಸಗಿ ಕಂಪನಿಗಳು ನಿರ್ವಹಣೆ ಮಾಡಲಾರದೆ ಅರ್ಧದಲ್ಲಿ ಬಿಟ್ಟು ಹೋಗಿವೆ. ಖಾಸಗಿ ಸಂಸ್ಥೆಗಳಿಗೆ ನೀಡಿದರೆ ಖಾಸಗಿ ಕಂಪನಿಗಳು ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಿ ಮೊಬೈಲ್ ಕಂಪನಿಗಳ ಪೋಸ್ಟ್ ಪೇಯ್ಡೆ ಮಾದರಿಯಲ್ಲಿ ಹಣ ವಸೂಲು ಮಾಡುವುದರಿಂದ ಬಡ ರೈತರು ಕೂಲಿ ಕಾರ್ಮಿಕರು, ವೃದ್ಧರು, ರೈತರ ಐಪಿ ಸೆಟ್‍ಗಳಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳು ರದ್ದಾಗಲಿದೆ, ಹಾಗಾಗಿ ವಿದ್ಯುತ್ ವಿತರಣಾ ಕಂಪನಿಗಳನ್ನು ಟಾಟಾ ಪವರ್ ಕಂಪನಿಗಳಿಗೆ ನೀಡಬಾರದೆಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಈ.ಎನ್.ಲಕ್ಷ್ಮಿಕಾಂತ್ ಲಿಂಗಾವರಹಟ್ಟಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲೋಲಾಕ್ಷಮ್ಮ, ಚಿತ್ರದುರ್ಗ ತಾಲೂಕು ಅಧ್ಯಕ್ಷೆ ಪವಿತ್ರ, ಮಂಜುಳ ಕೊಳಹಾಳ್, ಜಯಲಕ್ಷ್ಮಿ, ಶಕುಂತಲ, ಓಬಳೇಶ್, ಕಾಂತರಾಜ್ ಎಸ್, ನಾಗರಾಜ್, ರಂಗಸ್ವಾಮಿ, ಹೇಮಾರೆಡ್ಡಿ ಕರಿಕೆರೆ, ತಿಪ್ಪೇಸ್ವಾಮಿ, ಗುಂಡ್ಲೂರು ರಮೇಶ್ ಇನ್ನೂ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.