ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಹಂಪಿ ಉತ್ಸವಕ್ಕೆ ಆಗಮಿಸುವ ಸಿಎಂಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಲಾಗುವುದು
ಹೊಸಪೇಟೆ: ಮೈಸೂರ ದಸರಾದಲ್ಲಿ ನಂದಿ ಪೂಜೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ದಲಿತ ಸಚಿವರನ್ನು ತಡೆದು ಅವಮಾನ ಮಾಡಲಾಗಿದೆ ಎಂದು ಆರೋಪಿ ಅಂಬೇಡ್ಕರ್ ಸೇನೆಯ ವಿಜಯನಗರ ಜಿಲ್ಲಾ ಯುವ ಘಟಕದ ನೇತೃತ್ವದಲ್ಲಿ ಶುಕ್ರವಾರ ತಹಸೀಲ್ದಾರ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅಂಬೇಡ್ಕರ್ ಸೇನೆ ಯುವ ಘಟಕದ ಜಿಲ್ಲಾಧ್ಯಕ್ಷ ಎಚ್.ಈರಣ್ಣ, ಎಚ್.ಎಸ್. ವೆಂಕಪ್ಪ, ಎಚ್.ಶೇಷು, ಶೇಕ್ಷಾವಲಿ, ಎನ್.ವೆಂಕಟೇಶ್, ಭರತ್ ಕುಮಾರ್ ಸಿ.ಆರ್.ಮರಿದಾಸ್ ಮಾತನಾಡಿ, ದಲಿತ ಸಚಿವರಾದ ಕೆ.ಎಸ್. ಬಸವಂತಪ್ಪ, ನರೇಂದ್ರಸ್ವಾಮಿ, ಶಿವರಾಜ ತಂಗಡಗಿ ಅವರನ್ನು ಮೈಸೂರು ದಸರಾ ಜಂಬೂ ಸವಾರಿ ನಂದಿ ಪೂಜೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಜತೆ ತೆರಳುತ್ತಿದ್ದ ಸಂದರ್ಭದಲ್ಲಿ ತಡೆದು ನಿಲ್ಲಿಸಿ ಅವಮಾನ ಮಾಡಿರುವ ಪೊಲೀಸ್ ಅಧಿಕಾರಿ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ದಲಿತರ ಮತಗಳಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಿಂದ ದಲಿತರಿಗೆ ಅವಮಾನ ಮಾಡುವುದು, ದೌರ್ಜನ್ಯ ಹಾಗೂ ದಬ್ಬಾಳಿಕೆ ನಡೆಸುವ ಪ್ರಕರಣ ಹೆಚ್ಚಾಗಿವೆ. ಇದನ್ನು ದಲಿತಪರ ಸಂಘಟನೆ ತೀವ್ರವಾಗಿ ಖಂಡಿಸುತ್ತವೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಹಂಪಿ ಉತ್ಸವಕ್ಕೆ ಆಗಮಿಸುವ ಸಿಎಂಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವೈ.ರುದ್ರಪ್ಪ, ಎಚ್. ಹನುಮಂತ, ಕೆ. ರವಿಕುಮಾರ್, ಹೊನ್ನೂರುಸ್ವಾಮಿ, ರಾಘವೇಂದ್ರ, ಎಸೂಪ್, ಜಗದೀಶ, ಗಿರೀಶ, ಶ್ರೀನಿವಾಸ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ನಗರದ ಡಾ. ಬಿ.ಅರ್.ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಅಂಬೇಡ್ಕರ್ ಸೇನೆ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಡಾ. ಪುನೀತ್ ರಾಜ್ ಕುಮಾರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.