ಸುಕ್ಷೇತ್ರ ಬಗ್ಗೆ ಅಪಪ್ರಚಾರ ಖಂಡಿಸಿ ಬೃಹತ್ ಪ್ರತಿಭಟನೆ

| Published : Aug 19 2025, 01:00 AM IST

ಸುಕ್ಷೇತ್ರ ಬಗ್ಗೆ ಅಪಪ್ರಚಾರ ಖಂಡಿಸಿ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ದೇಶವೇ ಶ್ರದ್ಧಾಭಕ್ತಿಯಿಂದ ಕಾಣುವ ದೇವರ ಸನ್ನದ್ಧಿಗೆ ಕಳಂಕ ತರುವ ಕೆಲಸ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ

ಕಲಘಟಗಿ: ಸುಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಕೃತ್ಯ ಖಂಡಿಸಿ ಪಟ್ಟಣದಲ್ಲಿ ಸೋಮವಾರ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ಸರ್ವ ಸಮಾಜ, ಪಕ್ಷದ ಮುಖಂಡರು ಸೇರಿ ಸುಕ್ಷೇತ್ರ ಧರ್ಮಸ್ಥಳ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಪಟ್ಟಣದ ಗ್ರಾಮದೇವಿ ದೇಗುಲದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಜೋಳದ ಓಣಿ, ಮಾರುಕಟ್ಟೆ, ಅಕ್ಕಿಓಣಿ, ಬಮ್ಮಿಗಟ್ಟಿ ರಸ್ತೆ, ಬಸ್ ನಿಲ್ದಾಣ, ಆಂಜನೇಯ ವೃತ್ತ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಉಪತಹಸೀಲ್ದಾರ್ ಬಸವರಾಜ ಅಂಗಡಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಇಡೀ ದೇಶವೇ ಶ್ರದ್ಧಾಭಕ್ತಿಯಿಂದ ಕಾಣುವ ದೇವರ ಸನ್ನದ್ಧಿಗೆ ಕಳಂಕ ತರುವ ಕೆಲಸ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಇದರ ಹಿಂದೆ ಕಾಣದ ಕೈಗಳ ಕೆಲಸ ನಡೆದಿದೆ. ಯಾರೋ ಒಬ್ಬ ವ್ಯಕ್ತಿ ಬಂದು ಸುಕ್ಷೇತ್ರದ ಘನತೆಗೆ ಅಪಪ್ರಚಾರ ಮಾಡುವ ನಿಟ್ಟಿನಲ್ಲಿ ಹೇಳಿಕೆ ನೀಡಿ ತನಿಖೆ ನಡೆಸುವ ಹಿಂದೆ ಬಹಳಷ್ಟು ಕುತಂತ್ರ ನಡೆದಿದೆ. ಧರ್ಮಸ್ಥಳ ಮಂಜುನಾಥನ ಮೇಲೆ ಅಪಾರ ಭಕ್ತಿ ಹೊಂದಿರುವ ಅಸಂಖ್ಯಾತ ಭಕ್ತರು ಯಾವತ್ತು ದುಷ್ಟ ನಡೆವಳಿಕೆಗಳಿಗೆ ಕಠಿಣ ಪ್ರತಿಕ್ರಿಯೆ ನೀಡುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹೇಶ್ ಶೆಟ್ಟಿ ತಿಮರೋಡಿ, ಸಮೀರ್, ಗಿರೀಶ್ ಮಟ್ಟಣ್ಣವರ, ಸಂತೋಷ್ ಶೆಟ್ಟಿ, ಜಯಂತ್ ಶೆಟ್ಟಿ ಹಾಗೂ ಇವರ ಸಹಚರರು ಸೇರಿ ಮಂಜುನಾಥ ಸ್ವಾಮಿ ದೇವಾಲಯ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಕ್ಷೇತ್ರವನ್ನು ನಂಬಿರುವ ಭಕ್ತರಿಗೆ ವೃಥಾ ಕಳಂಕ ತರುವ ಪಿತೂರಿ ನಡೆಸುತ್ತಿದ್ದು ಇದರ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು. ಸುಕ್ಷೇತ್ರದ ಮೇಲೆ ನಂಬಿಕೆ ಇರುವ ಅಪಾರ ಭಕ್ತರ ನಂಬಿಕೆಗೆ ಗೌರವ ಸಿಗಬೇಕು ಎಂದು ಆಗ್ರಹಿಸಿದರು.

ಧರ್ಮಾಧಿಕಾರಿ ಕೆಲಸ ಕಾರ್ಯಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಾ ಅದೆಷ್ಟೋ ಲಕ್ಷಾಂತರ ಭಕ್ತಾದಿ ಹೊಂದಿರುವ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಅಪಪ್ರಚಾರ ನಡೆಯುತ್ತಿದೆ. ಧರ್ಮಸ್ಥಳದ ಭಕ್ತರನ್ನು ಸಮಾಜದಲ್ಲಿ ಕೀಳಾಗಿ ಬಿಂಬಿಸುವ ಕೆಲಸ ನಡೆಯುತ್ತಿದೆ. ತನಿಖಾ ತಂಡದಿಂದ ಸೂಕ್ತ ತನಿಖೆ ಮೂಲಕ ನಿಜವಾದ ಸತ್ಯ ಹೊರೆಗೆ ಬರಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸರ್ವ ಧರ್ಮ ಮುಖಂಡರು, ಪಕ್ಷಾತೀತ ನಾಯಕರು ಸೇರಿದಂತೆ ಶ್ರೀಧರ್ಮಸ್ಥಳ ಸುಕ್ಷೇತ್ರದ ಭಕ್ತಾಧಿಗಳು, ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.