ಮಹಾನಗರ ಪಾಲಿಕೆಯಿಂದ ಹಸ್ತಾಂತರಗೊಂಡಿರುವ ವಾಣಿಜ್ಯ ಸಂಕೀರ್ಣಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡದೆ ಕೋಟ್ಯಾಂತರ ರು. ನಷ್ಟ ಮಾಡುತ್ತಿರುವುದನ್ನು ವಿರೋಧಿಸಿ ಮತ್ತು ಪಾಲಿಕೆಯ ಅಧಿಕಾರಿಗಳ ದುರಾಡಳಿತದಿಂದ ನಾಗರೀಕರಿಗೆ ಆಗುತ್ತಿರುವ ತೊಂದರೆಗಳನ್ನು ಖಂಡಿಸಿ ರಾಷ್ಟ್ರಭಕ್ತರ ಬಳಗವು ಕೆ.ಎಸ್. ಈಶ್ವರಪ್ಪ ಮತ್ತು ಕೆ.ಈ. ಕಾಂತೇಶ್ ನೇತೃತ್ವದಲ್ಲಿ ಶನಿವಾರ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಮಹಾನಗರ ಪಾಲಿಕೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಹಾನಗರ ಪಾಲಿಕೆಯಿಂದ ಹಸ್ತಾಂತರಗೊಂಡಿರುವ ವಾಣಿಜ್ಯ ಸಂಕೀರ್ಣಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡದೆ ಕೋಟ್ಯಾಂತರ ರು. ನಷ್ಟ ಮಾಡುತ್ತಿರುವುದನ್ನು ವಿರೋಧಿಸಿ ಮತ್ತು ಪಾಲಿಕೆಯ ಅಧಿಕಾರಿಗಳ ದುರಾಡಳಿತದಿಂದ ನಾಗರೀಕರಿಗೆ ಆಗುತ್ತಿರುವ ತೊಂದರೆಗಳನ್ನು ಖಂಡಿಸಿ ರಾಷ್ಟ್ರಭಕ್ತರ ಬಳಗವು ಕೆ.ಎಸ್. ಈಶ್ವರಪ್ಪ ಮತ್ತು ಕೆ.ಈ. ಕಾಂತೇಶ್ ನೇತೃತ್ವದಲ್ಲಿ ಶನಿವಾರ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಮಹಾನಗರ ಪಾಲಿಕೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ರಾಷ್ಟ್ರಭಕ್ತರ ಬಳಗದ ಕೆ.ಈ. ಕಾಂತೇಶ್ ಮಾತನಾಡಿ, ಬಡವರಿಗೆ ನೀಡುವ ಆಶ್ರಯ ಯೋಜನೆಯ ಮನೆಗಳನ್ನು ಆದಷ್ಟುಬೇಗ ವಿತರಿಸಬೇಕು. ಇ-ಸ್ವತ್ತು ನೋಂದಾವಣೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ನೀರಿನ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಬೇಕು. ಬೀದಿದೀಪ ಮತ್ತು ನಗರದ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಕೊಳಚೆ ಪ್ರದೇಶದ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆ ತಲುಪಬೇಕು ಮತ್ತು ಪೌರಕಾರ್ಮಿಕರ ಭವನ ನಿರ್ಮಿಸಬೇಕು. ರೋಟರಿ ಅನಿಲ ಚಿತಾಗಾರವನ್ನು ದುರಸ್ತಿ ಮಾಡಬೇಕು. ಪಶುವೈದ್ಯಕೀಯ ಆ್ಯಂಬುಲೆನ್ಸ್ ಸೇವೆಯು ಸಾರ್ವಜನಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಮಹಾನಗರ ಪಾಲಿಕೆ ಆಯುಕ್ತರು ರಾಷ್ಟ್ರಭಕ್ತರ ಬಳಗದ ಹೋರಾಟದಲ್ಲಿ ವಾಸ್ತವಾಂಶವಿದೆ. ಇ-ಸ್ವತ್ತು ಸಿಗಲು ಸೂಕ್ತಕ್ರಮ ಕೈಗೊಳ್ಳಲಾಗಿದೆ. ಪಾಲಿಕೆಯಲ್ಲಿ ಯಾರೇ ಭ್ರಷ್ಟಾಚಾರ ಮಾಡಿದರೂ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ. ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಿ ಎಂದರು.

ಆರು ತಿಂಗಳಲ್ಲಿ ನಾನು ಬಂದ ಬಳಿಕ 30,000 ಇ-ಸ್ವತ್ತನ್ನು ನೀಡಲಾಗಿದೆ. ಇನ್ನೂ 70,000 ಬಾಕಿ ಇದೆ. ವಾರದಲ್ಲಿ ಮೂರು ದಿನಗಳ ಕಾಲ ನಾನೇ ಖುದ್ದಾಗಿ ಕಂದಾಯ ವಿಭಾಗಗಳಲ್ಲಿ ಭೇಟಿ ನೀಡುತ್ತಿದ್ದೇನೆ. ಯಾವುದೇ ಲೋಪ ಪಾಲಿಕೆಯಿಂದ ಆಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದರು.

ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದ ಆಶ್ರಯ ಮನೆಗಳಲ್ಲಿ 1250 ಮನೆಗಳು ಪೂರ್ಣಗೊಂಡಿದ್ದು, ಬರುವ ಎರಡು ತಿಂಗಳೊಳಗೆ ಅದರಲ್ಲಿ 900 ಮನೆಗಳ ಕೀಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಸರ್ಕಾರದಿಂದ ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗಿದೆ. ವಿಳಂಬಕ್ಕಾಗಿ ವಿಷಾದಿಸುತ್ತೇನೆ ಎಂದರು.

ಕಾನೂನಿನ ತೊಡಕಿನಿಂದಾಗಿ ಮಳಿಗೆಗಳು ಮತ್ತು ವಾಣಿಜ್ಯ ಸಂಕೀರ್ಣದ ವಿತರಣೆಯಲ್ಲಿ ವಿಳಂಬವಾಗಿದೆ. ಅದನ್ನು ಕೂಡ ಸರಿಪಡಿಸಿದ್ದೇವೆ. ಪಶುವೈದ್ಯಕೀಯ ವಿಭಾಗದಲ್ಲಿ ವಾಹನ ಬಳಕೆ ಸಂಬಂಧಿಸಿದಂತೆ ಕೂಡ ಸಮಸ್ಯೆ ಬಗೆಹರಿಸಿದ್ದೇವೆ. ರೋಟರಿ ಚಿತಾಗಾರದ ತಾಂತ್ರಿಕ ಸಮಸ್ಯೆಯನ್ನು ಕೂಡ ಬಗೆಹರಿಸಿದ್ದೇವೆ. ಡಿಸಿ ಕಚೇರಿ ಮುಂಭಾಗದ ಮೈದಾನದ ವಿವಾದ ಕೂಡ ಜ್ಯೂಡಿಷಿಯಲ್ ನಿಯಮದ ಪ್ರಕಾರವೇ ಮುಂದುವರಿದಿದ್ದು, ಶೀಘ್ರವಾಗಿ ಅದನ್ನು ಕೂಡ ಬಗೆಹರಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ರಾಷ್ಟ್ರಭಕ್ತರ ಬಳಗ ಸದಾ ಜನಪರ ಹೋರಾಟಕ್ಕೆ ಮುಂಚೂಣಿಯಲ್ಲಿದ್ದು, ಮೇಲಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಆಯುಕ್ತರ ಬಗ್ಗೆ ವಿಶ್ವಾಸವಿದೆ. ನ್ಯಾಯಾಲಯಕ್ಕೆ ವಿವಾದಿತ ಮೈದಾನದ ಎಲ್ಲಾ ದಾಖಲೆಗಳನ್ನು ಕೂಡಲೇ ಪಾಲಿಕೆ ಒದಗಿಸಬೇಕು ಮತ್ತು ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಮಾಜಿ ಸದಸ್ಯ ಈ. ವಿಶ್ವಾಸ್ ಮಾತನಾಡಿ, ಮಹಾನಗರ ಪಾಲಿಕೆಯ ಅವಾಂತರಗಳ ಬಗ್ಗೆ ಈ ಹಿಂದೆಯೇ ಗಮನ ಸೆಳೆಯಲಾಗಿತ್ತು. ಪಾಲಿಕೆಗೆ ಈಗಾಗಲೇ ವಾಣಿಜ್ಯ ಸಂಕೀರ್ಣಗಳಾದ ಶಿವಪ್ಪನಾಯಕ ಹೂವಿನ ಮಾರುಕಟ್ಟೆ, ಗಾರ್ಡನ್ ಏರಿಯಾ ವಾಣಿಜ್ಯ ಸಂಕಿರ್ಣ, ಗಾಂಧಿನಗರದ ವಾಣಿಜ್ಯ ಸಂಕೀರ್ಣಗಳಲ್ಲಿ ನಿರ್ಮಾಣವಾದ ಮಳಿಗೆಗಳನ್ನು ಇದುವರೆಗೂ ಬಾಡಿಗೆ ನೀಡಿಲ್ಲ. ಇದರಿಂದ ಮಹಾನಗರ ಪಾಲಿಕೆಗೆ ಸುಮಾರು 11.51 ಕೋಟಿಯಷ್ಟು ನಷ್ಟವಾಗುತ್ತದೆ ಎಂದು ರಾಷ್ಟ್ರಭಕ್ತರ ಬಳಗ ಆರೋಪಿಸಿ ಪಾಲಿಕೆ ಮುತ್ತಿಗೆ ಪ್ರಕಟಿಸಿದ ಮೇಲೆ ಈಗ ಹೂವಿನ ಮಾರುಕಟ್ಟೆಯ ಫಲಾನುಭವಿಗಳಿಗೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಇನ್ನೂ ಉಳಿದ ಪಾಲಿಕೆ ವಾಣಿಜ್ಯ ಸಂಕೀರ್ಣಗಳನ್ನು ಕೂಡಲೇ ನೀಡುವಂತೆ ಹಾಗೂ ಪಾಲಿಕೆ ಆದಾಯ ಹೆಚ್ಚಿಸಿಕೊಳ್ಳುವಂತೆ ಮನವಿ ಮಾಡಿದರು.

ಬೊಮ್ಮನಕಟ್ಟೆಯಿಂದ ಪ್ರತಿನಿತ್ಯ ಕೂಲಿನಾಲಿ ಬಿಟ್ಟು 500 ರು. ಖರ್ಚುಮಾಡಿ, ಇ-ಖಾತೆ ಮಾಡಿಕೊಳ್ಳಲು ತಿಂಗಳುಗಟ್ಟಲೆ ಬಡವರು ಓಡಾಡುತ್ತಿದ್ದಾರೆ. ಆಶ್ರಯ ಮನೆಗಾಗಿ ತಾಳಿ ಅಡವಿಟ್ಟು ಕಂತು ಕಟ್ಟಿದ್ದರೂ ಕೂಡ ಇನ್ನೂ ಫಲಾನುಭವಿಗಳಿಗೆ ಮನೆಯ ಕೀ ವಿತರಣೆ ಆಗಿಲ್ಲ. ನೀರಿನ ಸಮಸ್ಯೆ ಹೆಚ್ಚಾಗಿದೆ. ಯಾವ ಅಭಿವೃದ್ಧಿ ಕಾರ್ಯ ಮಾಡಲು ಪಾಲಿಕೆ ಬಳಿ ಹಣವಿಲ್ಲ ಎಂದು ದೂರಿದರು.

ಜಿಲ್ಲಾಧಿಕಾರಿ ಕಚೇರಿ ಎದುರಿನ ಆಟದ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹಾನಗರ ಪಾಲಿಕೆಗೆ ಕೂಡಲೇ ವರದಿ ಕೊಡುವಂತೆ ತಿಳಿಸಿತ್ತು. ಹೈಕೋರ್ಟ್ ನೀಡಿದ ಸಮಯದ ಅವಧಿ ಮುಗಿದು ಐದು ತಿಂಗಳಾದರೂ ಕೂಡ ಮಹಾನಗರ ಪಾಲಿಕೆ ಆಯುಕ್ತರು ಯಾವುದೇ ಮೂಲ ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸಿಲ್ಲ. ಕೂಡಲೇ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಲಕ್ಷ್ಮೀ ಶಂಕರ್‌ನಾಯ್ಕ, ಆರತಿ ಆ.ಮ ಪ್ರಕಾಶ್, ಈ. ವಿಶ್ವಾಸ್, ಬಾಲು, ಶ್ರೀಕಾಂತ್, ಮೋಹನ್ ಜಾದವ್, ಶಕುಂತಲಾ, ಶಶಿಕಲಾ, ಚಿದಾನಂದ, ಕುಬೇರಪ್ಪ, ನಾಗರತ್ನಮ್ಮ, ರಾಜೇಶ್ವರಿ, ಜಯಲಕ್ಷ್ಮೀ, ಎಸ್‌ಟಿಡಿ ರಾಜು, ಆಶಾ ಚನ್ನಬಸಪ್ಪ, ಸೀತಾಲಕ್ಷ್ಮೀ, ಅನಿತಾ, ಇಂದಿರಾನಗರ ರಾಜು ಸೇರಿದಂತೆ ಮೊದಲಾವರಿದ್ದರು.