ಕ್ರೈಸ್ತ ಸನ್ಯಾಸಿನಿಯರ ಬಂಧನ ವಿರೋಧಿಸಿ ಬೃಹತ್‌ ಪ್ರತಿಭಟನೆ

| Published : Aug 05 2025, 11:49 PM IST

ಸಾರಾಂಶ

ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ವತಿಯಿಂದ ಸೋಮವಾರ ನಗರದ ಮಿನಿ ವಿಧಾನಸೌಧದ ಹೊರಗೆ ಬೃಹತ್‌ ಪ್ರತಿಭಟನೆ ನಡೆಯಿತು. ನೂರಾರು ಮಂದಿ ನಾಗರಿಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಛತ್ತೀಸ್‌ಗಡದಲ್ಲಿ ಸಂಶಯಾಸ್ಪದ ಆರೋಪಗಳ ಮೇಲೆ ಬಂಧಿಸಲ್ಪಟ್ಟ ಇಬ್ಬರು ಕೆಥೋಲಿಕ್‌ ಸನ್ಯಾಸಿನಿಯರು ಮತ್ತು ಬುಡಕಟ್ಟು ಯುವಕನಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಲು ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ವತಿಯಿಂದ ಸೋಮವಾರ ನಗರದ ಮಿನಿ ವಿಧಾನಸೌಧದ ಹೊರಗೆ ಬೃಹತ್‌ ಪ್ರತಿಭಟನೆ ನಡೆಯಿತು. ನೂರಾರು ಮಂದಿ ನಾಗರಿಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.

ಸ್ವಾತಂತ್ರ್ಯದ ಹಕ್ಕು ಬಹುಸಂಖ್ಯಾತರಿಗೆ ಮಾತ್ರವಲ್ಲ, ಅಲ್ಪಸಂಖ್ಯಾತರಿಗೂ ಸಮಾನವಾಗಿದೆ, ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ನರ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸಿ ಎಂದು ಘೋಷಿಸುವ ಬ್ಯಾನರ್‌ಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು.

ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟೆಲಿನೊ ಮಾತನಾಡಿ, ದೂರು ದಾಖಲಿಸಿದ ಮಹಿಳೆ ಕಣ್ಮರೆಯಾಗಿದ್ದಾರೆ. ಆದರೂ ಸಹೋದರಿಯರನ್ನು ಬೇಗನೆ ಬಂಧಿಸಲಾಯಿತು. ಇದು ನ್ಯಾಯವಲ್ಲ. ಸುಳ್ಳು, ದುರುದ್ದೇಶಪೂರಿತ ದೂರು ದಾಖಲಿಸಲಾಗಿದೆ. ಕೂಡಲೆ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಕ್ಯಾಥೋಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿಸೋಜ, ಧರ್ಮಪ್ರಾಂತ್ಯದ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ರೋಫಿ ಡಿಕೋಸ್ಟಾ, ಮಂಗಳೂರಿನ ಸಿಆರ್‌ಐ ಮಾಜಿ ಅಧ್ಯಕ್ಷ ಸೆವೆರಿನ್ ಮೆನೆಜೆಸ್‌, ಬಿಕರ್ನಕಟ್ಟೆ ಸೇಂಟ್ ಮೇರಿ ಚರ್ಚ್‌ನ ಸಿಆರ್‌ಐ ಅಧ್ಯಕ್ಷ ಮತ್ತು ಪ್ಯಾರಿಷ್ ಪಾದ್ರಿ ಡೊಮಿನಿಕ್ ವಾಸ್, ಸ್ಟ್ಯಾನಿ ಲೋಬೊ, ಆಲ್ವಿನ್ ಡಿಸೋಜ, ವಿಲ್ಮಾ ಮೊಂತೆರೊ, ಮಾಜಿ ಶಾಸಕ ಜೆ.ಆರ್‌. ಲೋಬೊ ಮತ್ತಿತರರು ಭಾಗವಹಿಸಿದ್ದರು.