ಸಾರಾಂಶ
ಕೊಪ್ಪಳ: ಕೇಂದ್ರ ಸರ್ಕಾರ ಜಾರಿ ಮಾಡಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ರದ್ಧು ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕೊಪ್ಪಳ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿತು.
ನಗರದ ಅಶೋಕ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬೀದಿಯುದ್ದಕ್ಕೂ ಸಾಗಿದರು. ವಕ್ಫ್ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ವಕ್ಫ್ ತಿದ್ದುಪಡಿ ಕಾಯ್ದೆ ಸ್ವೀಕಾರ್ಹವಲ್ಲ ಎನ್ನುವ ಬೋರ್ಡ್ ಗಳನ್ನು ಪ್ರದರ್ಶನ ಮಾಡಲಾಯಿತು.ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ದೇಶದಲ್ಲಿ ಹಲವಾರು ಸಮಸ್ಯೆ ಇದ್ದರೂ ಅವುಗಳ ಕಡೆ ಗಮನ ಹರಿಸದ ಕೇಂದ್ರ ಸರ್ಕಾರ ಇಂತಹ ಸಮಾಜ ಒಡೆಯುವ, ಜಾತಿಯ ವಿಷ ಬೀಜ ಬಿತ್ತುವ, ಧರ್ಮದ ನಡುವೆ ಕಂದಕ ಸೃಷ್ಟಿ ಮಾಡುವ ಕಾಯ್ದೆ ಜಾರಿ ಮಾಡುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಹಣಕಾಸಿನ ಸಮಸ್ಯೆ, ರೂಪಾಯಿ ಮೌಲ್ಯ ಕುಸಿತ ಹೆಚ್ಚಳವಾಗುತ್ತಿದೆ. ಬೆಲೆ ಏರಿಕೆ ವಿಪರೀತವಾಗಿದೆ. ಹೀಗಿರುವಾಗ ಅವುಗಳನ್ನು ನಿಯಂತ್ರಣ ಮಾಡುವ ದಿಸೆಯಲ್ಲಿ ಕ್ರಮ ವಹಿಸುತ್ತಿಲ್ಲ. ಬದಲಾಗಿ ಅವುಗಳನ್ನು ಮರೆಮಾಚಲು ದೇಶದಲ್ಲಿ ಐಕ್ಯತೆಗೆ ಧಕ್ಕೆ ತರುತ್ತಿದೆ ಎಂದರು.
ಇಂಥ ಕಾಯ್ದೆ ತರುವಂತೆ ಯಾರು ಮನವಿ ಮಾಡಿರಲಿಲ್ಲ. ಆದರೂ ಜಾರಿ ಮಾಡಿದ್ದಾರೆ. ಕೆಲವೇ ಕೆಲವರನ್ನು ಕೂಡ್ರಿಸಿಕೊಂಡು ಈ ಕಾಯ್ದೆ ಬೇಕು ಎಂದು ಹೇಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಸ್ಲಿಂ ಧರ್ಮಗುರು ಮೌಲಾನ ಮುಫ್ತಿ ನಜೀರ್ ಅಹ್ಮದ್ ಮಾತನಾಡಿ, ಇದು ವಕ್ಫ್ ಕಾಯ್ದೆ ವಿರುದ್ಧ ಹೋರಾಟದ ಆರಂಭ ಅಷ್ಟೇ, ಇನ್ನು ಹೋರಾಟ ತೀವ್ರಗೊಳಿಸಬೇಕಾಗಿದೆ. ನಮ್ಮ ಸಮುದಾಯದ ಮೇಲೆ ಅನಗತ್ಯವಾಗಿ ತೊಂದರೆ ಕೊಡಲಾಗುತ್ತದೆ.ಇದನ್ನು ಸಹಿಸಿಕೊಂಡು ಸುಮ್ಮನೇ ಇರಲು ಆಗದು ಎಂದರು.
ಬಾಕ್ಸಪ್ರತಿಭಟನಾ ರ್‍ಯಾಲಿಯಲ್ಲಿ ಕಾಶ್ಮೀರದ ಪಹಲ್ಗಾಂ ನಲ್ಲಿ ನಡೆದ ಹತ್ಯೆ ಖಂಡಿಸಿ ಮೃತರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ದೇಶದಲ್ಲಿ ಸಾಕಷ್ಟು ಸಮಸ್ಯೆ ಇದ್ದರೂ ಕೇಂದ್ರ ಸರ್ಕಾರ ಸ್ಪಂದಿಸದೆ ಮುಸ್ಲಿಂರು ವಿರೋಧಿಸಿದರೂ ವಕ್ಫ್ ಕಾಯ್ದೆ ಜಾರಿ ಮಾಡುತ್ತಿದೆ ಎಂದು ಆರೋಪಿಸಿದರು.ಮುಖಂಡರಾದ ಅಮ್ಜದ್ ಪಟೇಲ್, ಆಸಿಫ್ ಅಲಿ, ಅಲ್ಲಮಪ್ರಭು ಬೆಟ್ಟದೂರು, ಯಮನೂರಪ್ಪ ನಾಯಕ, ಕೆ.ಎಂ.ಸಯ್ಯದ್, ಮಹೇಂದ್ರ ಛೋಪ್ರಾ, ಕಾಟನ್ ಪಾಶಾ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.
ಮಹಾಂತೇಶ ಕೊತ್ಬಾಳ, ಡಿ.ಎಚ್. ಪೂಜಾರ, ಮೌಲಾನ ಅಲಿ, ಕಾಟನ್ ಪಾಶಾ ಸೇರಿದಂತೆ ಮೊದಲಾದವರು ಇದ್ದರು.ವಕ್ಫ್ ಕಾಯ್ದೆ ವಿರುದ್ಧ ದೇಶಾದ್ಯಂತ ದಂಗೆ ಏಳಿ: ರಾಘವೇಂದ್ರ ಹಿಟ್ನಾಳ
ಕೊಪ್ಪಳ: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಬಿಜೆಪಿ ಮುಸ್ಲೀಂ ಸಮುದಾಯವನ್ನು ದ್ವೇಷ ಮಾಡುತ್ತಾ ಬಂದಿದೆ.ಇವರನ್ನು ದೂಷಿಸಿ ದೇಶದಲ್ಲಿ ನಿರಂತರವಾಗಿ ಅಧಿಕಾರ ಮಾಡಬೇಕು ಅಂದುಕೊಂಡಿದ್ದಾರೆ. ವಕ್ಫ್ ಕಾಯ್ದೆ ವಿರೋಧಿಸಿ ದೇಶದಲ್ಲಿ ದಂಗೆ ಏಳಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಕ್ಫ್ ಕಾಯ್ದೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಎನ್ ಆರ್ ಸಿ ವಿರುದ್ಧವೂ ಹೋರಾಟ ನಡೆದಿದೆ.ಈಗ ವಕ್ಫ್ ಕಾಯ್ದೆ ವಿರುದ್ಧ ದೇಶದಲ್ಲಿ ದಂಗೆ ಏಳಬೇಕು ಎಂದು ಕರೆ ನೀಡಿದರು.ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹಣ ನೀಡುವುದಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದಂತೆ ಅಲ್ಪಸಂಖ್ಯಾತರ ಹಿತ ಕಾಯಲ್ಲ. ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮಿಕ್ಷೆ ಬಿಜೆಪಿ ವಿರೋಧ ಮಾಡುತ್ತಿದೆ. ಆದರೆ, ಈಗ ಕೇಂದ್ರ ಸರ್ಕಾರವೇ ಜಾತಿ ಗಣತಿ ಮಾಡುವುದಾಗಿ ಹೇಳಿದೆ. ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗಿಯೇ ಇರಬೇಕು, ಬಡವರು ಬಡವರಾಗಿ ಇರಬೇಕು ಎನ್ನುವ ನೀತಿ ಕೇಂದ್ರ ಸರ್ಕಾರದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.