ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಒಳಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಮಾ. 25ರಂದು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಜಿಲ್ಲೆಯಿಂದ ಸ್ವಯಂಪ್ರೇರಿತರಾಗಿ ಸಾವಿರಾರು ಬಲಗೈ ಸಮುದಾಯದ ಬಂಧುಗಳು ಭಾಗವಹಿಸಬೇಕು ಎಂದು ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಕೈವಾರ ಮಂಜುನಾಥ್ ಛಲವಾದಿ ಮನವಿ ಮಾಡಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಬಲಗೈ ಜಾತಿ ಸಮುದಾಯಗಳ ಒಕ್ಕೂಟದಿಂದ ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಸಂಬಂಧಿಸಿದಂತೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ಅವೈಜ್ಞಾನಿಕ ವರದಿ ಕೂಡಲೇ ತಿರಸ್ಕರಿಸಬೇಕು. ಇಷ್ಟು ದಿವಸ ಹೊಲೆಯ ಹಾಗೂ ಮಾದಿಗರು ಸಹೋದರರೆಂದು ಭಾವಿಸಿದ್ದೇವು. ಆದರೆ ಅವರ ಮನಸ್ಸುಗಳ ಮಧ್ಯೆ ಬೆಂಕಿ ಇಡುವ ಕೆಲಸವನ್ನು ಮಾಡಿದ್ದಾರೆ. ಒಳಮೀಸಲಾತಿ ಆಯೋಗದ ವರದಿ ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ರಾಜ್ಯದಲ್ಲಿ ಸುಮಾರು 30 ಲಕ್ಷ ಇದ್ದ ಬಲಗೈ ಸಮಾಜದ ಜನಸಂಖ್ಯೆಯನ್ನು 24 ಲಕ್ಷಕ್ಕೆ ತಂದಿದ್ದಾರೆ. ಒಳಮೀಸಲಾತಿ ಹಂಚಿಕೆ ಮುನ್ನೆಲೆಗೆ ಬಂದ ಮೇಲೆ ಅದು ಸುಳ್ಳೆಂಬುದು ಸಾಬೀತಾಗಿದೆ. ಸಮೀಕ್ಷೆಯಲ್ಲಿ ಹೊಲೆಯ ಜನಾಂಗದವರು ಸರಿಯಾಗಿ ಪಾಲ್ಗೊಳ್ಳದೇ ವ್ಯತ್ಯಾಸವಾಗಿದೆ. ಪ್ರಾದೇಶಿಕವಾರು ಭಿನ್ನಭಿನ್ನವಾಗಿ ಜಾತಿಯನ್ನು ನಮೂದಿಸಿ ತೊಂದರೆಗೆ ಸಿಲಿಕಿದ್ದಾರೆ. ಇದು ಮಕ್ಕಳ ಭವಿಷ್ಯಕ್ಕೆ ಕಂಟಕವಾಗಿದೆ. ಮುಂಬರುವ ಮಾರ್ಚ್ 27ರ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ತಿರಸ್ಕರಿಸಬೇಕು. ಮಾ.. 25 ರ ಬುಧವಾರದಂದು ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯಿಂದ ಸುಮಾರು 50 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಸಿ.ವಿ.ಕೃಷ್ಣಪ್ಪ ಮಾತನಾಡಿ, ನಾಗಮೋಹನ್ ದಾಸ್ ಅವರ ಆಯೋಗದ ವರದಿಯನ್ನು ರಾಜ್ಯ ಸರ್ಕಾರವು ತಿರಸ್ಕರಿಸ ಬೇಕು. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಕುಟುಂಬಗಳ ಸಮೀಕ್ಷೆಯ ಅಂಕಿ ಅಂಶಗಳೊಂದಿಗೆ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ಆಯೋಗದ ಅಂಕಿ ಅಂಶಗಳನ್ನು ಹೋಲಿಕೆ ಮಾಡುವುದು, ವ್ಯತ್ಯಾಸಗಳು ಕಂಡುಬಂದಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಳ್ಳುಬೇಕು. ರಾಜ್ಯ ಸರ್ಕಾರವು 2025ರ ಸೆ. 3ರಂದು ಯಾವುದೇ ಮಾನದಂಡವನ್ನು ಅನುಸರಿಸದೇ ಅವೈಜ್ಞಾನಿಕವಾಗಿ ಹೊರಡಿಸಿರುವ ಮೀಸಲಾತಿ ಆದೇಶವನ್ನು ಹಿಂಪಡೆಬೇಕು. 2025ರ ಅಕ್ಟೋಬರ್ 08 ರಂದು ಸಮಾಜ ಕಲ್ಯಾಣ ಇಲಾಖೆಯ ಸುತ್ತೋಲೆಯಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪ್ರವರ್ಗ ಎ.ಬಿ ಮತ್ತು ಸಿ ಎಂದು ವರ್ಗೀಕರಿಸಿರುವುದನ್ನು ಹಿಂಪಡೆದು, ಮೂಲ ಜಾತಿಗಳನ್ನು ನಮೂದಿಸಿ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಸೂಕ್ತ ಆದೇಶ ಹೊರಡಿಸಬೇಕು. ಪರಿಶಿಷ್ಟ ಜಾತಿ ಸಮುದಾಯಕ್ಕೆ ಈಗಾಗಲೇ ನೀಡಿರುವ ಖಾಯಂ ವಾತಿ ಪ್ರಮಾಣ ಪತ್ರಗಳನ್ನು ಹೊಸ ಜಾತಿ ಪ್ರಮಾಣ ಪತ್ರಗಳೊಂದಿಗೆ ಪರಿಗಣಿಸಲು ಸೂಕ್ತ ಆದೇಶ ಹೊರಡಿಸಬೇಕು. ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿರುವ 63 ಜಾತಿಗಳನ್ನು ಬಬಗ್ಗೆ ಗುಂಪಿನಲ್ಲಿ ಉದ್ಯೋಗ, ಶಿಕ್ಷಣ ಮತ್ತು ಇತರೆ ಸೌಲಭ್ಯ ಪಡೆಯಲು ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಬಲಗೈ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳಾದ ಇ.ಓ.ರಡ್ಡಪ್ಪ, ಮುನಿಆಂಜಿನಪ್ಪ, ಪಿ.ರಾಮಪ್ಪ, ಜಿ.ಸಿ.ವೆಂಕಟೇಶಪ್ಪ, ದೇವರಾಜ್, ಎಂ.ಸಿ.ನರಸಿಂಹಪ್ಪ, ಮುನಿರಾಜು, ಅರಿಕೆರೆ ಮುನಿರಾಜು, ಆನಂದ್, ರಮೇಶ್ ಕುಮಾರ್, ಈರಪ್ಪ,ಕೃಷ್ಣಪ್ಪ, ಲಕ್ಷ್ಮಣ, ಪ್ರಭಾಕರ್, ವೆಂಕಟೇಶ್, ಮತ್ತಿತರರು ಇದ್ದರು.


ಸಿಕೆಬಿ-1 ಸುದ್ದಿಗೋಷ್ಟಿಯಲ್ಲಿ ಬಲಗೈ ಸಮುದಾಯಗಳ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಕೈವಾರ ಮಂಜುನಾಥ್ ಛಲವಾದಿ ಮಾತನಾಡಿದರು.