ಅಂಗನವಾಡಿ ಕಾರ್ಯಕರ್ತೆಯರ ಬೃಹತ್‌ ಪ್ರತಿಭಟನೆ

| Published : Sep 20 2024, 01:37 AM IST

ಸಾರಾಂಶ

ವಿವಿಧ ಬೇಡಿಕೆ ಈಡೇರಿಕೆಗಾಗಿ ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಿವೃತ್ತರಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ನಿವೃತ್ತಿ ಉಪಧನ (ಗ್ರಾಚ್ಯುಟಿ) ನೀಡಬೇಕು ಹಾಗೂ ಕನಿಷ್ಠ ವೇತನ ಹೆಚ್ಚಿಸಬೇಕು ಎಂಬುದು ಸೇರಿ ಇನ್ನಿತರ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ಗುರುವಾರ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಮಹಿಳೆಯರು ಧರಣಿಯಲ್ಲಿ ಪಾಲ್ಗೊಂಡು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ, ನಿರ್ದೇಶಕರು ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಕೆಯ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದರು.

ಎಐಟಿಯುಸಿ ಎಂ.ಜಯಮ್ಮ ಮಾತನಾಡಿ, ‘1975ರಿಂದ ಸೇವೆ ಸಲ್ಲಿಸಿ ಕಾಲಕಾಲಕ್ಕೆ ನಿವೃತ್ತಿಯಾದ ಎಲ್ಲಾ ಅಂಗನಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕಡ್ಡಾಯವಾಗಿ ಗ್ರಾಚ್ಯುಟಿ ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಆದರೆ, ಕರ್ನಾಟಕ ಸರ್ಕಾರ 2023ರ ಏ.1ರಿಂದ ನಿವೃತ್ತಿಯಾದವರಿಗೆ ಅನ್ವಯವಾಗುವಂತೆ ಗ್ರಾಚ್ಯುಟಿ ನೀಡುವ ಕುರಿತು ಆದೇಶಿರುವುದು ಸಮಂಜಸವಲ್ಲ. ಸರ್ಕಾರ ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಗ್ರಾಚ್ಯುಟಿ ನೀಡುವ ಆದೇಶ ಮಾಡಬೇಕು’ ಎಂದು ಒತ್ತಾಯಿಸಿದರು.

‘ಬೆಲೆಯೇರಿಕೆಗೆ ತಕ್ಕಂತೆ ಕಾರ್ಯಕರ್ತೆಯರಿಗೆ ಮಾಸಿಕ ₹15,000 ಸಹಾಯಕಿಯರಿಗೆ ₹10,000 ಗೌರವಧನ ಹೆಚ್ಚಿಸಬೇಕು. ಹಾಗೂ ನಿವೃತ್ತರಾದವರಿಗೆ ₹3 ಲಕ್ಷ ಇಡುಗಂಟು ನೀಡುವ ಯೋಜನೆ ಜಾರಿಗೊಳಿಸಬೇಕು’ ಎಂದರು.

‘ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವ ಬಗ್ಗೆ ಕೂಡಲೇ ತಜ್ಞರ ಸಮಿತಿ ರಚಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರ ಪೂರೈಸಬೇಕು. ಅದಕ್ಕಾಗಿ ಜಿಲ್ಲಾಧಿಕಾರಿ ಉಸ್ತುವಾರಿಯಲ್ಲಿ ಸಮಿತಿ ರಚಿಸುವ ಮೂಲಕ ಆಹಾರದ ಗುಣಮಟ್ಟವನ್ನು ಕಾಪಾಡಬೇಕು. ಇಲಾಖೆ ಜೊತೆಗೆ ಕಾಲಕಾಲಕ್ಕೆ ಅಂಗನವಾಡಿ ಸಂಘಟನೆಗಳ ಮುಖಂಡರ ಜತೆ ಸಭೆ ನಡೆಸಿ ಅಹವಾಲು ಆಲಿಸಬೇಕು ಎಂದರು.

ಈ ವೇಳೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ವಿ.ನಾಗರತ್ನ, ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಎಂ.ಉಮಾದೇವಿ ಇದ್ದರು.