ಹಾಸನದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

| Published : Feb 24 2024, 02:37 AM IST

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಶುಕ್ರವಾರ ಹಾಸನದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಎನ್.ಆರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎನ್.ಆರ್.ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ । ದಲಿತ ವಿರೋಧಿ ನೀತಿ ಎಂದು ಆಕ್ರೋಶಕನ್ನಡಪ್ರಭ ವಾರ್ತೆ ಹಾಸನ

ರಾಜ್ಯ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಎನ್.ಆರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮತ್ತು ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಮಾತನಾಡಿ, ಕಳೆದ ಒಂಬತ್ತು ತಿಂಗಳಲ್ಲಿ ಕಾಂಗ್ರೆಸ್ ಆಡಳಿತವು ದಲಿತ ಸಮುದಾಯದ ವಿಚಾರದಲ್ಲಿ ಕೇವಲ ಮಾತಿನಲ್ಲಿ ಮಾತ್ರ ಕಾಳಜಿಯನ್ನು ತೋರಿ ದಲಿತ ಸಮುದಾಯವನ್ನು ವಂಚಿಸುತ್ತಿದ್ದಾರೆ. ಚುನಾವಣೆಯಲ್ಲಿ ತಮ್ಮ ಗೆಲುವಿನ ಸಲುವಾಗಿ ದಲಿತರಿಗೆ ಮೀಸಲಿಟ್ಟಿದ್ದ ೧೧,೧೪೪ ಎಸ್‌ಸಿ, ಎಸ್‌ಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ವರ್ಗಾಯಿಸಿ ದಲಿತರನ್ನು ಬಲಿಕೊಟ್ಟು ತಮ್ಮ ಸ್ವಾರ್ಥ ಸಾಧನೆ ಪೂರೈಸಿಕೊಂಡಿದ್ದಾರೆ. ದಲಿತರ ಹಿತದ ರಕ್ಷಣೆ ಮಾಡಬೇಕಿದ್ದ ಸಮಾಜಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಈ ಅನ್ಯಾಯದ ವಿರುದ್ಧ ಸೊಲ್ಲೆತ್ತದೆ ಕಾಂಗ್ರೆಸ್‌ ಹಿತಕ್ಕೆ ದಲಿತ ಸಮುದಾಯದ ಹಿತವನ್ನು ರಾಜಿ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಮೊರಾರ್ಜಿ ಶಾಲೆಯ ಅಭಿವೃದ್ಧಿ ಮತ್ತು ಹೊಸ ಶಾಲೆಗಳ ಆರಂಭಕ್ಕೆ ಮೀಸಲಾದ ಹಣವು ಇತರ ಯೋಜನೆಗಳಿಗೆ ಬಳಕೆಯಾಗಿ ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ಇದಲ್ಲದೆ ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ ಹಣ ದುರ್ಬಳಕೆಯಾಗಿ ಉನ್ನತ ಶಿಕ್ಷಣದಿಂದ ದಲಿತ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಸಲುವಾಗಿ ಶಿಕ್ಷಣವನ್ನು ನಿರ್ಲಕ್ಷಿಸುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಎಂಟು ತಿಂಗಳಿನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಗೃಹ ನಿರ್ಮಾಣ ಯೋಜನೆಯು ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಿ ಹಂಚುತ್ತಿದ್ದರೆ. ರಾಜ್ಯ ಸರ್ಕಾರದ ಯೋಜನೆಯು ಕೋಮಾ ಸ್ಥಿತಿಗೆ ತಲುಪಿದೆ ಎಂದು ಟೀಕಿಸಿದರು.

ರೈತ ನಿಧಿ ಯೋಜನೆಯಲ್ಲಿ ದಲಿತ ಕುಟುಂಬದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವು ಸ್ಥಗಿತಗೊಂಡಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ಹೆಚ್ಚುವರಿಯಾಗಿ ನೀಡುತ್ತಿದ್ದ ೪ ಸಾವಿರ ರು,ಗೆ ಕತ್ತರಿ ಪ್ರಯೋಗವಾಗಿದೆ. ಸಿದ್ದರಾಮಯ್ಯ ಅವರು ದಲಿತ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ಮಾತನಾಡಲು ಅವರ ಹಿತಾಸಕ್ತಿಯನ್ನು ಸಿಮೀತಗೊಳಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಲ್ಲಿ ಉದ್ಯಮಶೀಲತೆ ಉತ್ತೇಜಿಸುವ ಯೋಜನೆ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಆಸಕ್ತಿಯಿಲ್ಲದಂತಾಗಿದೆ ಎಂದರು.

ಗ್ಯಾರಂಟಿಗೆ ಹಣ ನೀಡಬೇಕಾದ ಕಾರಣ ೨೦೨೪-೨೫ ಮುಂಗಡ ಪತ್ರದಲ್ಲಿ ಮತ್ತೆ ಹನ್ನೊಂದು ಸಾವಿರ ಕೋಟಿ ಅನುದಾನ ಕಡಿತವಾಗಿದೆ. ಸಂವಿಧಾನ ಜಾಥಾ ಮಾಡುತ್ತಿರುವ ಸರ್ಕಾರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ದಲಿತರಿಗೆ ಸೇರಬೇಕಾದ ಅನುದಾನವನ್ನು ನಿರಾಕರಿಸಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ಪರ್ವತಯ್ಯ, ವೇಣುಗೋಪಾಲ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮಿತ್ ಶೆಟ್ಟಿ, ರತ್ನ ಪ್ರಕಾಶ್, ಶ್ರೀಕಾಂತ್, ಎಸ್.ಡಿ. ಚಂದ್ರು, ರಾಮೇಗೌಡ, ಚನ್ನಕೇಶವ ಇದ್ದರು.ರಾಜ್ಯ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.