ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಜ್ಯ ಸರ್ಕಾರದ ವೈಫಲ್ಯದಿಂದಲೇ ಅಂಜಲಿ ಅಂಬಿಗೇರ ಹತ್ಯೆಯಾಗಿದೆ ಎಂದು ಆರೋಪಿಸಿ ನಗರದಲ್ಲಿ ಗುರುವಾರ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿತು. ಪ್ರತಿಭಟನೆ ವೇಳೆ ಠಾಣೆಗೆ ನುಗ್ಗಲೆತ್ನಿಸಿದ ಶಾಸಕ ಮಹೇಶ ಟೆಂಗಿನಕಾಯಿ ಸೇರಿ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.ಪ್ರೀತಿ ನಿರಾಕರಿಸಿದ್ದಕ್ಕಾಗಿ ಇಲ್ಲಿನ ವೀರಾಪುರ ಓಣಿಯ ನಿವಾಸಿ ಅಂಜಲಿಯನ್ನು ವಿಶ್ವನಾಥ ಅಲಿಯಾಸ್ ಗಿರೀಶ್ ಸಾವಂತ್ ಮನೆಗೇ ನುಗ್ಗಿ ಬುಧವಾರ ಬೆಳಗಿನ ಜಾವ ಹತ್ಯೆ ಮಾಡಿದ್ದ. ಈ ಘಟನೆ ಖಂಡಿಸಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ನಗರದ ವೀರಾಪುರ ಓಣಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಹರ ಪೊಲೀಸ್ ಠಾಣೆ ತಲುಪಿತು. ಠಾಣೆ ಎದುರಿಗೆ ಧರಣಿ ನಡೆಸಿದ ಪ್ರತಿಭಟನಾಕಾರರು, ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಶಾಸಕ ಟೆಂಗಿನಕಾಯಿ, ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅಂಜಲಿ ಹತ್ಯೆ ನಡೆದಿದೆ. ಕೂಡಲೇ ಆರೋಪಿ ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಜನರೇ ಕಾನೂನು ಕೈಗೆತ್ತಿಕೊಳ್ಳುವ ಮುನ್ನ ಸರ್ಕಾರವೇ ಸರಿಯಾದ ಕಾನೂನು ಕ್ರಮ ಜರುಗಿಸಬೇಕು. ನಿರ್ಲಕ್ಷ್ಯ ಮುಂದುವರಿಸಿದರೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಂಧನ ಬಿಡುಗಡೆ: ಒಂದು ಗಂಟೆಗೂ ಹೆಚ್ಚುಕಾಲ ಶಹರ ಪೊಲೀಸ್ ಠಾಣೆ ಎದುರಿನ ರಸ್ತೆ ಮೇಲೆ ಕುಳಿತು ಧರಣಿ ನಡೆಸಿದ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ, ಗೃಹ ಸಚಿವರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಠಾಣೆಗೆ ನುಗ್ಗಲೆತ್ನಿಸಿದರು. ಆಗ ಪೊಲೀಸರ ನಡುವೆ ವಾಗ್ವಾದ, ತಳ್ಳಾಟ, ನೂಕಾಟ ನಡೆಯಿತು. ಈ ವೇಳೆ ಪೊಲೀಸರು ಶಾಸಕ ಮಹೇಶ ಟೆಂಗಿನಕಾಯಿ ಸೇರಿ 30ಕ್ಕೂ ಹೆಚ್ಚು ಜನರನ್ನು ಬಂಧಿಸಿ ಕರೆದುಕೊಂಡು ಹೋದರು. ಬಳಿಕ ಅವರೆಲ್ಲರನ್ನೂ ಬಿಡುಗಡೆ ಮಾಡಲಾಯಿತು. ನಮ್ಮ ಮಕ್ಕಳ ಜೀವಕ್ಕೆ ಗ್ಯಾರಂಟಿ ಕೊಡಿ:
ಪ್ರತಿಭಟನಾ ನಿರತ ಬಿಜೆಪಿ ಮಹಿಳಾ ಕಾರ್ಯಕರ್ತೆಯರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಗ್ಯಾರಂಟಿ ಯೋಜನೆ ನೀಡಿರುವುದಾಗಿ ಜಂಬ ಕೊಚ್ಚಿಕೊಳ್ಳುತ್ತಿದೆ. ನಮಗೆ ನಿಮ್ಮ ಈ ಗ್ಯಾರಂಟಿಗಳೆಲ್ಲ ಬೇಕಿಲ್ಲ, ನಮ್ಮ ಮಕ್ಕಳ ಜೀವನಕ್ಕೆ ಗ್ಯಾರಂಟಿ ಕೊಡಿ. ನಿರ್ಲಕ್ಷ್ಯ ವಹಿಸಿದ ಸ್ಥಳೀಯ ಪೊಲೀಸರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.ಅಂಜಲಿ ನಿವಾಸಕ್ಕೆ ಮಠಾಧೀಶರ ಭೇಟಿ:ಮೃತ ಅಂಜಲಿ ಅಂಬಿಗೇರ ಮನೆಗೆ ಗುರುವಾರ ವಿವಿಧ ಮಠಾಧೀಶರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇಲ್ಲಿನ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಶ್ರೀ, ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ಸಿದ್ಧರಾಮ ಶ್ರೀ, ಹಾವೇರಿ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀ, ರುದ್ರಾಕ್ಷಿ ಮಠದ ಬಸವಲಿಂಗ ಶ್ರೀ, ಬಿಜಕಲ್ಲ ವಿರಕ್ತ ಮಠದ ಶಿವಲಿಂಗ ಶ್ರೀ, ಬೊಮ್ಮನಹಳ್ಳಿಯ ಶಿವಯೋಗೀಶ್ವರ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಹಲವು ಮಠಾಧೀಶರು, ಸರ್ಕಾರವು ಆದಷ್ಟು ಬೇಗ ಕೊಲೆ ಆರೋಪಿಯನ್ನು ಬಂಧಿಸಿ ಅವನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ಅಂಜಲಿ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು. ಮತ್ತೆ ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಂಜಲಿ ಕುಟುಂಬಕ್ಕೆ ಶ್ರೀಗಳು ಅಭಯ ಹಸ್ತ ನೀಡಿದರು.ಹತ್ಯೆಯಾದ ಅಂಜಲಿ ಸಹೋದರಿಯರ ದತ್ತು ಸ್ವೀಕಾರ: ದಿಂಗಾಲೇಶ್ವರ ಶ್ರೀಮೃತ ಅಂಜಲಿ ಕುಟುಂಬದ ಜತೆಗೆ ನಾವಿದ್ದೇವೆ. ಅಂಜಲಿ ಸಹೋದರಿಯರ ಸಂಪೂರ್ಣ ಓದಿನ ಜವಾಬ್ದಾರಿಯನ್ನು ಬಾಲೆಹೊಸೂರು ಹಾಗೂ ಶಿರಹಟ್ಟಿ ಸಂಸ್ಥಾನ ಮಠಗಳು ಹೊರಲಿವೆ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಮೃತ ಅಂಜಲಿ ಅಂಬಿಗೇರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಈ ಇಬ್ಬರೂ ಯುವತಿಯರ ಭವಿಷ್ಯದ ಹಿತದೃಷ್ಟಿಯಿಂದ ಅವರನ್ನು ದತ್ತು ಪಡೆಯುತ್ತೇವೆ ಎಂದು ಭರವಸೆ ನೀಡಿದರು. ಅಂಜಲಿ ಸಾವಿಗೆ ನ್ಯಾಯ ಕೊಡಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು. ಈ ನಿಟ್ಟಿನಲ್ಲಿ ಶುಕ್ರವಾರ ನಗರದಲ್ಲಿ ದೊಡ್ಡಮಟ್ಟದ ಪ್ರತಿಭಟನೆ ಕೂಡ ಹಮ್ಮಿಕೊಳ್ಳಲಾಗಿದೆ. ರಾಜಕೀಯಕ್ಕಾಗಿ ನೇಹಾ ಕೊಲೆಯನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ರಾಜಕಾರಣಿಗಳು ಈಗ ಎಲ್ಲಿ ಹೋಗಿದ್ದಾರೆ ಎಂದರು.
====
ಅಂಜಲಿ ಕುಟುಂಬಕ್ಕೆ ನ್ಯಾಯ ಕೊಡಿಸುವಲ್ಲಿ ರಾಜ್ಯದ ನಾಯಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.