ಚಿಕ್ಕಮಗಳೂರುದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಹಾಗೂ ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಹೋರಾಟ ನಿರಂತರವಾಗಿರಲಿದೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಮತದಾರರ ಹಕ್ಕುಗಳನ್ನು ಸಂರಕ್ಷಿಸುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಹೇಳಿದರು.
ಆಜಾದ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ನಿಂದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಹಾಗೂ ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಹೋರಾಟ ನಿರಂತರವಾಗಿರಲಿದೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಮತದಾರರ ಹಕ್ಕುಗಳನ್ನು ಸಂರಕ್ಷಿಸುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಹೇಳಿದರು.ನಗರದ ಆಜಾದ್ ವೃತ್ತದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ನಿಂದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು. ದೇಶದ ನೈಜ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ಚುನಾವಣಾ ವ್ಯವಸ್ಥೆ ಸ್ವಾಯತ್ತತೆಯನ್ನು ದುರುಪಯೋಗಪಡಿಸಿಕೊಂಡು ದೇಶಾದ್ಯಂತ ಸುಮಾರು 13 ಕೋಟಿ ಮತದಾರರ ಹಕ್ಕುಗಳಿಗೆ ಧಕ್ಕೆಯುಂಟುಮಾಡಲಾಗುತ್ತಿದೆ ಎಂದು ಆರೋಪಿಸಿದರು.ಕರ್ನಾಟಕದಲ್ಲೂ ಸುಮಾರು 90 ಲಕ್ಷಕ್ಕೂ ಅಧಿಕ ಮತದಾರರ ಹಕ್ಕುಗಳಿಗೆ ಧಕ್ಕೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಯೂ ಸುಮಾರು 85 ಸಾವಿರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಪ್ರಯತ್ನ ನಡೆದಿದೆ ಎಂಬ ಆತಂಕವಿದೆ. ಇಂತಹ ವಾಮಮಾರ್ಗದ ರಾಜಕಾರಣ ಬಿಜೆಪಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಮತದಾರರ ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರಂತರ ಹೋರಾಟ ನಡೆಸುತ್ತಿದ್ದು, ಯುವಜನತೆ ಸೇರಿದಂತೆ ವಿವಿಧ ವರ್ಗಗಳ ನಾಯಕರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ನ.1ರಂದು ನವದೆಹಲಿಯಲ್ಲಿ ನಡೆದ ಬೃಹತ್ ಹೋರಾಟದಲ್ಲಿ ಲಕ್ಷಾಂತರ ಜನರು ಭಾಗವಹಿಸಿರುವುದು ಪ್ರಜಾಪ್ರಭುತ್ವ ಉಳಿಸುವ ಹೋರಾಟದ ತೀವ್ರತೆ ತೋರಿಸುತ್ತದೆ ಎಂದರು.ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನ ಉಳಿಸುವುದು, ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವುದು ಹಾಗೂ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕು ರಕ್ಷಿಸುವುದು ಹೋರಾಟದ ಮುಖ್ಯ ಉದ್ದೇಶ. ಇದರ ಭಾಗವಾಗಿ ನ.20ರಿಂದ 27ರವರೆಗೆ ಜಿಲ್ಲೆಯ ಎಲ್ಲ ಬ್ಲಾಕ್ಗಳಲ್ಲಿಯೂ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಮತದಾನದ ಹಕ್ಕು ಕಳೆದುಕೊಂಡರೆ ನಾಗರಿಕರಿಗೆ ಗುರುತಿನ ದಾಖಲೆಗಳು ಹಾಗೂ ಸರ್ಕಾರದ ವಿವಿಧ ಸೌಲಭ್ಯ ಪಡೆಯು ವಲ್ಲಿಯೂ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಅರ್ಹ ಮತದಾರರ ಹೆಸರನ್ನು ಯಾವುದೇ ಕಾರಣಕ್ಕೂ ಪಟ್ಟಿಯಿಂದ ಕೈಬಿಡಬಾರದು. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎಲ್. ಮೂರ್ತಿ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಚಳವಳಿಗೆ ಹೋಲಿಸಬಹುದು. ಸಂವಿಧಾನ, ಮತದಾನದ ಹಕ್ಕು ಮತ್ತು ಜನಸಾಮಾನ್ಯರ ಅಧಿಕಾರ ರಕ್ಷಿಸುವುದು ಇಂದಿನ ಅಗತ್ಯ ಎಂದರು.ಮಾಜಿ ಸಿಬಿಐ ನಿರ್ದೇಶಕ ನಾಗೇಶ್ ರಾವ್ ಅವರ ಹೇಳಿಕೆಉಲ್ಲೇಖಿಸಿದ ಅವರು, ಕೇಂದ್ರ ಸರ್ಕಾರದ ಅವಧಿಯಲ್ಲಿ ಸಿಬಿಐ ಸೇರಿದಂತೆ ಸ್ವಾಯತ್ತ ತನಿಖಾ ಸಂಸ್ಥೆಗಳ ಕಾರ್ಯವೈಖರಿ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಬಿಜೆಪಿ ಸೇರಿರುವ ಆರೋ ಪಿತ ನಾಯಕರ ವಿರುದ್ಧದ ತನಿಖೆಗಳು ದುರ್ಬಲವಾಗುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇದೇ ರೀತಿ ಚುನಾವಣಾ ಆಯೋಗದ ಸ್ವಾಯತ್ತತೆ ಬಗ್ಗೆ ಜನರಲ್ಲಿ ಅನುಮಾನ ಮೂಡಿದೆ ಎಂದು ಟೀಕಿಸಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ನಾಗರಿಕನೇ ನಿಜವಾದ ಮಾಲೀಕ. ಯಾರು ಆಡಳಿತ ನಡೆಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಮತದಾರನಿಗಿದೆ. ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿ, ಅನರ್ಹರನ್ನು ಸೇರಿ ಸುವ ಮೂಲಕ ಜನರ ಹಕ್ಕುಗಳಿಗೆ ಧಕ್ಕೆಯುಂಟುಮಾಡಬಾರದು ಎಂದು ಹೇಳಿದರು.ಅಕ್ರಮ ವಲಸಿಗರನ್ನು ಗುರುತಿಸುವುದು ಮತ್ತು ಅರ್ಹ ಭಾರತೀಯ ಮತದಾರರ ಹಕ್ಕುಗಳನ್ನು ರಕ್ಷಿಸುವುದು ಪ್ರತ್ಯೇಕ ವಿಚಾರ. ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ಅಕ್ರಮ ವಲಸಿಗರ ಹೆಸರಿನಲ್ಲಿ ಮತದಾರರ ಹಕ್ಕುಗಳ ಪರಿಷ್ಕರಣೆ ಸಮರ್ಥಿಸಿಕೊಳ್ಳಲಾಗುತ್ತಿದೆ. ಆದರೆ ಈ ಪ್ರಕ್ರಿಯೆಯಲ್ಲಿ ದೇಶದ ಅರ್ಹ ನಾಗರಿಕರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ಈ ಹೋರಾಟ ನಡೆಸುತ್ತಿಲ್ಲ. ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಅದನ್ನು ನಿರ್ಧರಿಸುವುದು ಜನರ ಮತವಾಗಿರಬೇಕು. ಜನರು ಬಯಸಿದ ವರು ಪ್ರಜಾಸತ್ತಾತ್ಮಕವಾಗಿ ಆಡಳಿತ ನಡೆಸುವಂತಾಗಬೇಕು. ಅದಕ್ಕಾಗಿ ಸಂವಿಧಾನ ಮತ್ತು ಮತದಾನದ ಹಕ್ಕುಗಳನ್ನು ರಕ್ಷಿಸುವುದು ಅತ್ಯಗತ್ಯ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಡಾ. ವಿಜಯಕುಮಾರ್, ಎಚ್.ಎಚ್. ದೇವರಾಜ್, ಬಿ.ಎಚ್. ಹರೀಶ್, ಹನೀಫ್, ತನೋಜ್ ನಾಯ್ಡು, ಪರಮೇಶ್ ರಾಜ್ ಅರಸ್, ರೇಖಾ ಹುಲಿಯಪ್ಪಗೌಡ, ರೂಬೆನ್ ಮೋಸಸ್, ನಯಾಜ್ ಅಹ್ಮದ್, ಜಯರಾಜ್ ಅರಸ್, ಪ್ರವೀಣ್ ಬೆಟ್ಟಗೆರೆ, ಶಿವು ಹಿರೇಗೌಜ, ನಾಗಭೂಷಣ್, ಪ್ರಸಾದ್ ಅಮಿನ್, ಕುಸುಮಭರತ್ ಸೇರಿದಂತೆ ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಮುಖಂಡರು, ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
