ಕನ್ನಡಪ್ರಭ ವಾರ್ತೆ ಮುಧೋಳ
ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಗೆ ಆಗ್ರಹಿಸಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿನಾಕಾರಣ 307ರಂತಹ ಗಂಭೀರ ಕಲಂಗಳ ಅಡಿ ಪ್ರಕರಣ ದಾಖಲಿಸಿರುವುದನ್ನು ಕೈಬಿಡುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಮುಧೋಳದ ಗೃಹ ಕಚೇರಿ ಮುಂಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದರು.ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಮಾತನಾಡಿ, ಕಳೆದ 2025-26ನೇ ಸಾಲಿನ ಕಬ್ಬಿನ ಬಾಕಿ ಹಣ ನೀಡುವಂತೆ ರೈತರು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಎಸ್‌ಪಿ ಆಗಿದ್ದ ಅಮರನಾಥ ರೆಡ್ಡಿಯವರು ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸುತ್ತಿದ್ದರು. ಆದರೆ ಈಗಿನ ಪೊಲೀಸ್ ವರಿಷ್ಠಾಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕಾರಣ ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಅಹಿತಕರ ಘಟನೆ ಸಂಭವಿಸಿದೆ. ನಮ್ಮ ರೈತರು ಹೊರಗಿದ್ದಾಗಲೇ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ರೈತರ ತಲೆಗೆ ಕಟ್ಟಲಾಗುತ್ತಿದೆ ಎಂದು ದೂರಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 81 ರೈತರ ಮೇಲೆ 307 ಸೇರಿದಂತೆ ವಿವಿಧ ಕಠಿಣ ಕಲಂಗಳನ್ನು ಹಾಕಿ ಜೈಲಿಗೆ ಅಟ್ಟಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ 17 ಜನರ ಮೇಲೆ ಕೇಸ್ ದಾಖಲಾಗಿದ್ದು, ಈಗ ಮತ್ತೆ 13 ಜನರನ್ನು ಬಂಧಿಸಲಾಗಿದೆ. ಕಳೆದ ವಾರ 64 ರೈತರ ಮೇಲೆ ಕೇಸ್ ಹಾಕಿದ್ದಾರೆ. ಹೀಗೆ ಒಟ್ಟು 81 ರೈತರನ್ನು ಗುರಿಯಾಗಿಸಿಕೊಂಡು ಸರ್ಕಾರ ದೌರ್ಜನ್ಯ ಎಸಗುತ್ತಿದೆ. ಆದರೆ ಮಹಾಲಿಂಗಪುರ ಮತ್ತು ಮುಧೋಳ ಠಾಣೆಗಳಲ್ಲಿ ರೈತರು ಕಾರ್ಖಾನೆ ಮಾಲೀಕರ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಕಾರ್ಖಾನೆ ಮಾಲೀಕರೊಂದಿಗೆ ಶಾಮೀಲಾಗಿದೆ ಎಂದು ಆರೋಪಿಸಿದರು.ಮುಧೋಳ ತಾಲೂಕಿನ ರೈತರ ಹೋರಾಟವು ಸಂಪೂರ್ಣವಾಗಿ ಗಾಂಧಿವಾದಿ ಹಾಗೂ ಶಾಂತಿಯುತ ಮಾರ್ಗದಲ್ಲಿದೆ. ಇದು ಯಾವುದೇ ರಾಜಕೀಯ ಪಕ್ಷದ (ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್) ಪ್ರೇರಿತ ಹೋರಾಟವಲ್ಲ ಎಂದು ಕಿಡಿಕಾರಿದರು.
ರೈತ ಮುಖಂಡ ಈರಪ್ಪ ಹಂಚಿನಾಳ ಮಾತನಾಡಿ, ರೈತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಜತೆಗೆ ಬಾಕಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಈ ಬೇಡಿಕೆ ಈಡೇರಿಸಲು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಪ್ರಯತ್ನಿಸಬೇಕು. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲೆಯಾದ್ಯಂತ ರೈತರು ಬೀದಿಗಿಳಿದು ''''ಜೈಲ್ ಭರೋ'''' ಚಳವಳಿ ಹಮ್ಮಿಕೊಳ್ಳಲಾಗುವುದು ಅವರು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಬಸವಂತಪ್ಪ ಕಾಂಬಳೆ, ಸುಭಾಸ ಶಿರಬೂರ, ಈರಪ್ಪ ಹಂಚಿನಾಳ, ದುಂಡಪ್ಪ ಯರಗಟ್ಟಿ, ಹಣಮಂತ ನಬಾಬ, ಮಹೇಶ ಪಾಟೀಲ, ಸುರೇಶ ಚಿಂಚಲಿ, ಮುತ್ತಪ್ಪ ಕೋಮಾರ, ಹನಮಂತಗೌಡ ಪಾಟೀಲ, ತುಳಜಪ್ಪ ವಾಲಿಮರದ, ಪರಸು ಮುರನಾಳ, ಮಲ್ಲು ದೇಸಾಯಿ, ಮುತ್ತಪ್ಪ ಪಿಚೇಲಿ, ಸಿದ್ದು ನಾಗರಡ್ಡಿ, ರುದ್ರಪ್ಪ ಅಡವಿ, ಉದಯ ಬಡಕಲಿ, ನಿಂಗಪ್ಪ ಹೊಸಕೋಟೆ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
-------------ಕೋಟ್....
ಏ.9ರ ನಂತರ ಮುಖ್ಯಮಂತ್ರಿಗಳ ಜೊತೆ ರೈತ ಮುಖಂಡರ ಸಭೆ ನಡೆಸಿ ಈ ಕುರಿತು ಚರ್ಚಿಸಲಾಗುವುದು. ತಾವು ನಡೆಸುತ್ತಿರುವ ಪ್ರತಿಭಟನೆ ನಿಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ದೂರವಾಣಿ ಮೂಲಕ ತಿಳಿಸಿದ್ದರಿಂದ ತಾವು ನಡೆಸುತ್ತಿದ್ದ ಪ್ರತಿಭಟನೆ ಹಿಂಪಡೆದಿದ್ದೇವೆ.- ಬಸವಂತಪ್ಪ ಕಾಂಬಳೆ, ಜಿಲ್ಲಾಧ್ಯಕ್ಷರು, ರೈತ