ಸಾರಾಂಶ
ಕನ್ನಡಪ್ರಭವಾರ್ತೆ ಮಂಡ್ಯ/ಶ್ರೀರಂಗಪಟ್ಟಣ
ಸರ್ವೀಸ್ ರಸ್ತೆಯನ್ನೇ ನಿರ್ಮಿಸದೆ ಶ್ರೀರಂಗಪಟ್ಟಣದಿಂದ ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಬೊಮ್ಮೂರು ಅಗ್ರಹಾರ ಬಳಿ ರೈತರು ಹಾಗೂ ಸಾರ್ವಜನಿಕರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.ಬೊಮ್ಮೂರು ಅಗ್ರಹಾರ, ಬೆಳಗೊಳ, ಪಾಲಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು, ಮಹಿಳೆಯರು ಹಾಗೂ ಸಾರ್ವಜನಿಕರು ಹೆದ್ದಾರಿ ನಿರ್ಮಾಣದಲ್ಲಿ ರೈತರು, ಜನಸಾಮಾನ್ಯರು ಹಾಗೂ ಪ್ರವಾಸಿಗರ ಹಿತವನ್ನು ಅಧಿಕಾರಿಗಳು ಕಡೆಗಣಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
೨೦೧೯ರಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿಕೊಡುವುದಾಗಿ ಮಾತುಕೊಟ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರೈತರಿಂದ ಸ್ವಾಧೀನಪಡಿಸಿಕೊಂಡರು. ಇದೀಗ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸದೆ ಅನ್ನದಾತರನ್ನು ವಂಚಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲನೆಗೆ ಆಗಮಿಸಿದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಬಳಿ ತಮ್ಮ ಅಳಲು ತೋಡಿಕೊಂಡ ರೈತರು, ಸರ್ವಿಸ್ ರಸ್ತೆಯ ಅಗತ್ಯತೆ ಬಗ್ಗೆ ಹಾಲಿ ಶಾಸಕರು ಹಾಗೂ ಅಧಿಕಾರಿಗಳ ಬಳಿ ರೈತರು ಹಾಗೂ ಸಾರ್ವಜನಿಕರು ಸಮಸ್ಯೆ ಹೇಳಿಕೊಂಡರೆ ಬೇಜವಾಬ್ದಾರಿ ನಡವಳಿಕೆ ಪ್ರದರ್ಶಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಖಂಡರಾದ ಬೆಳಗೊಳ ಲೋಕೇಶ್, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ದಶರಥ, ಯುವ ಘಟಕದ ಅಧ್ಯಕ್ಷ ಸಂಜಯ್, ಪುರಸಭೆ ಮಾಜಿ ಸದಸ್ಯ ಸಾಯಿಕುಮಾರ್, ಕೆಆರ್‌ಎಸ್ ವಿಜಯ್‌ಕುಮಾರ್, ಪಾಲಹಳ್ಳಿ ರಮೇಶ್, ಭರತ್ ಕುಮಾರ್, ಸುನೀಲ್ ಇತರರಿದ್ದರು.ಸರ್ವೀಸ್ ರಸ್ತೆ ಬೇಕೆಂಬ ಸಾಮಾನ್ಯ ಜ್ಞಾನವಿಲ್ಲವೇ?: ರವೀಂದ್ರ ಶ್ರೀಕಂಠಯ್ಯಸಮಸ್ಯೆಯ ಗಂಭೀರತೆ ನನಗೆ ಅರ್ಥವಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಭೂಮಿ ಕಳೆದುಕೊಂಡಿರುವ ರೈತರ ಬಗ್ಗೆ ಶಾಸಕರು, ಅಧಿಕಾರಿಗಳಿಗೆ ಸಹಾನುಭೂತಿ ಇಲ್ಲದಿರುವುದಕ್ಕೆ ಆಕ್ರೋಶವಿದೆ. ಪ್ರಸ್ತುತ ರೈತರ ಜಮೀನು ಹೋಳಾಗಿದೆ. ರಸ್ತೆಯ ಇಕ್ಕೆಲಗಳಲ್ಲಿರುವ ಜಮೀನುಗಳಿಗೆ ಕೃಷಿ ಕೆಲಸಕ್ಕೆ ರೈತರು ಹೋಗುವುದು ಹೇಗೆ. ಜನ-ಜಾನುವಾರು, ಟ್ರ್ಯಾಕ್ಟರ್, ಇನ್ನಿತರ ಕೃಷಿ ಉಪಕರಣಗಳು ಹಾಗೂ ಬೆಳೆದ ದವಸ-ಧಾನ್ಯಗಳನ್ನು ಸಾಗಿಸಲು ಅಗತ್ಯವಿರುವ ವಾಹನಗಳು ಸಂಚರಿಸಲು ಸರ್ವಿಸ್ ರಸ್ತೆಬೇಕೆಂಬ ಸಾಮಾನ್ಯ ಜ್ಞಾನ ಶಾಸಕರು ಹಾಗೂ ಅಧಿಕಾರಿಗಳಿಗೆ ಇರದಿರುವುದು ಬೇಸರದ ಸಂಗತಿ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ದೂಷಿಸಿದರು.
ಮುಂದಿನ ವಾರ ಗಡ್ಕರಿ ಬಳಿಗೆ ರೈತರ ನಿಯೋಗ:ಸರ್ವಿಸ್ ರಸ್ತೆ ನಿರ್ಮಾಣ ಸಂಬಂಧ ಈಗಾಗಲೇ ಕೇಂದ್ರ ಕೈಗಾರಿಕಾ ಸಚಿವ ಕುಮಾರಸ್ವಾಮಿ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಲಾಗಿದ್ದು, ಮುಂದಿನ ವಾರ ದೆಹಲಿಗೆ ಸ್ಥಳೀಯ ರೈತರ ನಿಯೋಗ ಕೊಂಡೊಯ್ದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಬಳಿ ಮನವಿ ಮಾಡಿ, ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಹಸಿರು ನಿಶಾನೆ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.ಹೋರಾಟ ನಿರಂತರ
ಅಭಿವೃದ್ಧಿ ಹೆಸರಿನಲ್ಲಿ ಜಮೀನು ಕಳೆದುಕೊಂಡ ನಮ್ಮ ಕುಟುಂಬಕ್ಕೆ ಹಣ ಬಂದು ನಮ್ಮ ಮನೆ ಇಬ್ಬಾಗವಾಗಿದೆ. ಸರ್ವೀಸ್ ರಸ್ತೆ ಬೇಕೆಂಬ ನಮ್ಮ ಮನವಿಗೆ ಶಾಸಕರು, ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಮಾಜಿ ಶಾಸಕರು ಕೇಂದ್ರ ಸಚಿವರೊಂದಿಗೆ ಮಾತನಾಡಿಸಿ ನ್ಯಾಯ ದೊರಕಿಸುವ ಭರವಸೆ ನೀಡಿದ್ದಾರೆ. ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡುವವರೆಗೆ ನಮ್ಮ ಹೋರಾಟ ನಿರಂತರವಾಗಿರಲಿದೆ.- ಸುನಿಲ್, ಬೆಳಗೊಳಜಮೀನು ಖರೀದಿಸುವಾಗ ಭರವಸೆ
ರೈತರಿಂದ ಜಮೀನು ಖರೀದಿಸುವ ವೇಳೆ ಸರ್ವಿಸ್ ರಸ್ತೆ ನಿರ್ಮಿಸುವುದಾಗಿ ನಂಬಿಸಿ ಮೋಸಮಾಡಿದ್ದಾರೆ. ರೈತರು ಸಹ ನಮ್ಮ ಜಮೀನುಗಳಿಗೆ ಒಳ್ಳೆಯ ಬೆಲೆ ಬರಲಿದೆ ಎಂದು ಜಮೀನು ನೀಡಿದ್ದಾರೆ. ಒಂದು ವೇಳೆ ಸರ್ವೀಸ್ ರಸ್ತೆ ಮಾಡಿಕೊಡದಿದ್ದರೆ ಹೆದ್ದಾರಿ ಕಾಮಗಾರಿ ನಡೆಸಲು ನಾವು ಬಿಡುವುದಿಲ್ಲ.-ಪ್ರದೀಪ್, ರೈತಅವೈಜ್ಞಾನಿಕ ಕಾಮಗಾರಿ
ಸರ್ವೀಸ್ ರಸ್ತೆಯನ್ನೇ ಕೊಡದೆ ಹೆದ್ದಾರಿ ಕಾಮಗಾರಿ ನಡೆಸುತ್ತಿರುವುದೇ ಅವೈಜ್ಞಾನಿಕ. ಇದು ರೈತರ ಮೇಲೆ ನಡೆಸುವ ದೌರ್ಜನ್ಯ. ಹೆದ್ದಾರಿ ನಿರ್ಮಾಣಕ್ಕೆ ನಮ್ಮ ಭೂಮಿಯನ್ನು ಕಸಿದು ಇದೀಗ ನಮ್ಮ ಜಮೀನುಗಳಿಗೆ ಹೋಗುವುದಕ್ಕೆ ರಸ್ತೆ ಕೊಡದಿರುವುದು ರೈತರಿಗೆ ಮಾಡುವ ದ್ರೋಹ. ಅಭಿವೃದ್ಧಿ ಯೋಜನೆಗಳು ರೈತರು, ಜನರಿಗೆ ಪೂರಕವಾಗಿರಬೇಕು. ಮಾರಕವಾಗಬಾರದು.- ಚಂದನ್, ಶ್ರೀರಂಗಪಟ್ಟಣ 10 ಕಿ.ಮೀ. ಬಳಸಿ ಬರಬೇಕು
ನಮ್ಮ ಜಮೀನಿಗೆ ಹೊಂದಿಕೊಂಡಂತೆ ಹೆದ್ದಾರಿ ರಸ್ತೆ ಸುಮಾರು ೨೦ ಅಡಿ ಎತ್ತರದಲ್ಲಿ ಹಾದು ಹೋಗುತ್ತಿದೆ. ಮೇಲಿಂದ ಟಿಲ್ಲರ್, ಟ್ರ್ಯಾಕ್ಟರ್ ಸೇರಿದಂತೆ ಯಾವ ಸಾಮಗ್ರಿಗಳನ್ನು ಕೆಳಗಿಳಿಸಲು ಸಾಧ್ಯವಿಲ್ಲ. ನಮ್ಮ ಜಮೀನಿಗೆ ಬರಬೇಕೆಂದರೆ ಕನಿಷ್ಠ ೧೦ ಕಿ.ಮೀ ಬಳಸಿಕೊಂಡು ಬರಬೇಕು. ಆದ್ದರಿಂದ ಈ ಎರಡು ಕಡೆ ಸರ್ವಿಸ್ ರಸ್ತೆ ಮಾಡಿಕೊಡಬೇಕು.- ಭಾಸ್ಕರ್, ಬೆಳಗೊಳಪರಿಹಾರದಲ್ಲಿ ತಾರತಮ್ಯ
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ೧ ಗುಂಟೆಗೆ ೩.೮೦ ಲಕ್ಷ ರು. ನೀಡಿದ್ದಾರೆ. ಆದರೆ, ಇಲ್ಲಿ ೨.೪೦ ಲಕ್ಷ ರು. ಕೊಟ್ಟಿದ್ದಾರೆ. ಭೂ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಿದ್ದಾರೆ. ಪ್ರಶ್ನಿಸಿದರೆ ಕೋರ್ಟ್‌ಗೆ ಹೋಗಿ ಎನ್ನುತ್ತಿದ್ದಾರೆ. ನ್ಯಾಯಾಲಯಕ್ಕೆ ಹೋಗಿ ವರ್ಷಾನುಗಟ್ಟಲೆ ಹೋರಾಟ ಮಾಡುವಷ್ಟು ರೈತರಿಂದ ಸಾಧ್ಯವೇ. ಇವರ ಮೋಸ ಎದ್ದು ಕಾಣುತ್ತಿದೆ.- ಪ್ರಕಾಶ್, ಬೊಮ್ಮೂರು ಅಗ್ರಹಾರ