ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸರ್ಕಾರ 56 ಸಾವಿರ ಸರ್ಕಾರಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವ ವೇಳೆ ನಾಯಕ( ಎಸ್ ಟಿ) ಸಮಾಜಕ್ಕೆ ಶೇಕಡಾ 7ರಷ್ಟು ಮೀಸಲಾತಿಯಲ್ಲಿಯೇ ನೇಮಕ ಮಾಡಿಕೊಳ್ಳಬೇಕು, ಶೇ.3ರ ಮೀಸಲಾತಿಯಲ್ಲಿ ನೇಮಕಾತಿ ಪ್ರಕ್ರಿಯೆ ಮಾಡಿಕೊಳ್ಳಬಾರದು, ಇದರಿಂದ ನಾಯಕ ಸಮಾಜಕ್ಕೆ ಅನ್ಯಾಯವಾಗಲಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ನಾಯಕ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದ ಮುಖಂಡರು, ವಿವಿಧ ರಸ್ತೆಗಳಲ್ಲಿ ಸಾಗಿ ತಮ್ಮ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಆಕ್ರೋಶ ಹೊರಹಾಕಿದರಲ್ಲದೆ, ಸರ್ಕಾರ ನಾಯಕ ಸಮಾಜದ ಹಕ್ಕೊತ್ತಾಯಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಮಾಜಿ ಸದಸ್ಯರಾದ ಕೊಪ್ಪಾಳಿ ಮಹದೇವನಾಯಕ ಮಾತನಾಡಿ, ಸರ್ಕಾರ ನಾಯಕ ಸಮಾಜಕ್ಕೆ ಅನ್ಯಾಯವಾಗದಂತೆ ಕ್ರಮವಹಿಸಬೇಕು, 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಎಸ್ ಟಿ ಸಮಾಜಕ್ಕೆ ಶೇಕಡಾ 7ರಷ್ಟು ಮೀಸಲಾತಿ ನೀಡಬೇಕು, ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಸಮಾಜಕ್ಕೆ ಅನ್ಯಾಯವಾದರೆ ಸಹಿಸಲ್ಲ, ಈ ನಿಟ್ಟಿನಲ್ಲಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕು, ಇಲ್ಲದಿದ್ದರೆ ನಾವು ಸುಮ್ಮನಾಗುವುದಿಲ್ಲ, ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ, ಇಲ್ಲದಿದ್ದರೆ ಸಾವಿರಾರು ಮಂದಿ ಒಗ್ಗೂಡಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬಿಜೆಪಿ ನಾಯಕ ಪಾಳ್ಯ ಜಯಸುಂದರ್ ಮಾತನಾಡಿ, 56 ಸಾವಿರ ಸರ್ಕಾರಿ ಹುದ್ದೆಗಳಲ್ಲಿ ಈಗಿನ ಮೀಸಲಾತಿಯಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಶೇ.3ರಷ್ಟು ಬೇಡ, ಶೇ.7ರಷ್ಟು ಮೀಸಲಾತಿಯಡಿ ನೇಮಕಗೊಳಿಸಬೇಕು, ಇಲ್ಲದಿದ್ದರೆ ಸಮಾಜ ಎದ್ದು ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಮ್ಮ ಹಕ್ಕಿಗಾಗಿ ನಾಯಕ ಸಮಾಜ ಎಂತಹ ಹೋರಾಟಕ್ಕೂ ಸಿದ್ಧವಾಗಿದೆ. ಹಿಂದಿನ ಆದೇಶದಂತೆ ನೇಮಕವಾದರೆ ಸಮಾಜಕ್ಕೆ 2,257 ಸಾವಿರ ಹುದ್ದೆಗಳು ನಷ್ಟವಾಗಲಿವೆ ಎಂಬುದನ್ನು ಸರ್ಕಾರ ಮನಗಾಣಬೇಕು , ಸರ್ಕಾರದ ಈ ಬೆಳವಣಿಗೆ ಸರಿಯಲ್ಲ, ಇದು ಸಮಾಜಕ್ಕೆ ಮಾಡುವ ಐತಿಹಾಸಿಕ ದ್ರೋಹ ಎಂದರು.
ಈ ಸಂದರ್ಭದಲ್ಲಿ ಪಾಳ್ಯ ಕೃಷ್ಣ, ಚಿಕ್ಕಮಾದನಾಯಕ, ಉದ್ದನೂರು ಸಿದ್ದರಾಜು ಸೇರಿ ನೂರಾರು ಮುಖಂಡರು ಹಾಜರಿದ್ದರು.
------------------