ಸಾರಾಂಶ
ವೇತನ ನಿಗದಿ ಪಡಿಸುವಂತೆ ಆಗ್ರಹಿಸಿ ಗ್ರಾಮ ಸಹಾಯಕರ ಸಂಘವು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ರಾಮ ಸೇವಕರಿಗೆ ಗೌರವ ಧನದ ಬದಲಾಗಿ ವೇತನ ನಿಗದಿಪಡಿಸಬೇಕು, ಡಿ ದರ್ಜೆಗೆ ಸೇರ್ಪಡೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಸಂಘದ ರಾಜ್ಯಾಧ್ಯಕ್ಷ ದೇವರಾಜ್ ಮಾತನಾಡಿ, ರಾಜ್ಯದಲ್ಲಿ 10450 ಗ್ರಾಮಸೇವಕರಿದ್ದಾರೆ. ಕಂದಾಯ ಇಲಾಖೆಯಲ್ಲಿ ಕಳೆದ 46 ವರ್ಷದಿಂದ ಈ ಹುದ್ದೆಯಲ್ಲಿ ಹಲವು ರೀತಿಯ ಕರ್ತವ್ಯ ನಿಭಾಯಿಸುತ್ತಿದ್ದೇವೆ. ಹಲವು ವರ್ಷಗಳಿಂದ ದುಡಿಯುತ್ತಿದ್ದರೂ ಕೇವಲ 13ಸಾವಿರ ವೇತನ ದೊರೆಯುತ್ತಿದೆ. ಹಿಂದೆ ಬೆಳಗಾವಿ ಅಧಿವೇಶನದ ವೇಳೆ ಧರಣಿ ನಡೆಸಿದಾಗ ಗ್ರಾಮಸೇವಕರಿಗೆ ಸೇವಾಭದ್ರತೆಯ ಭರವಸೆಯನ್ನು ಕಂದಾಯ ಸಚಿವರು ನೀಡಿದ್ದರು. ಅದರಂತೆ ಆರ್ಥಿಕ, ಕಾನೂನು ವಿಭಾಗಗಳು ನಮ್ಮನ್ನು ‘ಡಿ’ ಗ್ರೂಪ್‌ಗೆ ಸೇರಿಸಬೇಕು ಎಂದು ಒಪ್ಪಿಗೆ ಕೊಟ್ಟಿವೆ. ಇದೀಗ ಕಂದಾಯ ಇಲಾಖೆ ತೀರ್ಮಾನ ಬಾಕಿ ಇದ್ದು, ಸಚಿವರು ಆರ್ಥಿಕ ಇಲಾಖೆ ಒಪ್ಪಿಗೆ ಪಡೆದು ನಮ್ಮ ಬೇಡಿಕೆ ಈಡೇರಿಸಬೇಕು. ಬೇಡಿಕೆ ಈಡೇರಿಸುವವರೆಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಕಾನೂನು ಸಲಹೆಗಾರ ಪಾವಗಡ ಶ್ರೀನಿವಾಸ್ ಸೇರಿ ಹಲವರಿದ್ದರು.