ಸಾರಾಂಶ
ಕಾರಟಗಿ:
ತಾಲೂಕು ಕೇಂದ್ರವಾಗಿರುವ ಪಟ್ಟಣಕ್ಕೆ ಸರ್ಕಾರಿ ಪದವಿ ಕಾಲೇಜು ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ದಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಿಂದ ಎಸ್‌ಎಫ್‌ಐ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೃಹತ್ ಮೆರವಣಿಗೆ ಮೂಲಕ ಬಸ್ ನಿಲ್ದಾಣದ ಬಳಿ ಆಗಮಿಸಿ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಾರಂಭಿಸುವುದು, ತಾಲೂಕಿನ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೂಲಭೂತ ಸೌಕರ್ಯ, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ, ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್, ಎಸ್ಸಿ-ಎಸ್ಟಿ ಮೆಟ್ರಿಕ್ ನಂತರದ ಹಾಸ್ಟೆಲ್ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಕಾರಟಗಿ ಬಂದ್‌ಗೆ ಕರೆ ನೀಡಿ ಸಚಿವರ ಮನೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.ಎಸ್‌ಎಫ್‌ಐ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಯು.ಎಂ. ಸೂಗುರ ಮಾತನಾಡಿ, ತಾಲೂಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಇದ್ದರೂ ಪಟ್ಟಣದಲ್ಲಿ ಈ ವರೆಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಿಲ್ಲ. ಇದರಿಂದ ಬಡವರು, ರೈತರು, ಕೂಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ದೂರದ ಊರಿಗೆ ಹೋಗಿ ಅಭ್ಯಾಸ ಮಾಡದೆ ಶಿಕ್ಷಣದಿಂದ ದೂರುವುಳಿಯುತ್ತಿದ್ದಾರೆ. ನಿತ್ಯ ಸಿಂಧನೂರು ಹಾಗೂ ಗಂಗಾವತಿಗೆ ತೆರಳುವ ಪರಿಸ್ಥಿತಿ ವಿದ್ಯಾರ್ಥಿಗಳಿಗಿದೆ. ಈಗಿದ್ದರೂ ಸಚಿವ ಶಿವರಾಜ ತಂಗಡಗಿ ಏಕೆ ಮೌನ ವಹಿಸಿದ್ದಾರೆಂದು ಪ್ರಶ್ನಿಸಿದರು.
ತಾಲೂಕು ಘಟಕದ ಕಾರ್ಯದರ್ಶಿ ಬಾಲಾಜಿ ಜಿ. ಚಳ್ಳಾರಿ, ಮಾತನಾಡಿ, ಪಟ್ಟಣದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಉಪನ್ಯಾಸಕರು, ಶಿಕ್ಷಕರು, ಬಸ್ ಸೌಲಭ್ಯ, ಹಾಸ್ಟೆಲ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಶೈಕ್ಷಣಿಕ ಭವಿಷ್ಯಕ್ಕೆ ಪೆಟ್ಟು ಬಿದ್ದಿದೆ. ಈ ಕೂಡಲೇ ಸಚಿವರು ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.ಈ ವೇಳೆ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಬರೆದ ಮನವಿ ಪತ್ರವನ್ನು ಉಪತಹಸೀಲ್ದಾರ್ ಜಗದೀಶ ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಘಟಕದ ಶಿವಕುಮಾರ ಈಚನಾಳ, ಬಾಲಾಜಿ ಚಳ್ಳಾರಿ, ದರ್ಶನ ಹೊಸ್ಕೇರ, ರೇಣುಕಾ, ಮಲ್ಲಮ್ಮ, ಕವಿತಾ, ಪರಿಮಳ, ರಮೇಶ, ನಾಗರಾಜ, ಫಕೀರಪ್ಪ, ಹುಲುಗಪ್ಪ, ಪ್ರಕಾಶ, ವಾಸುದೇವ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.