ಸಾರಾಂಶ
ನಗರದ ಸರ್ಕಾರಿ ಆರ್.ಸಿ. ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜನ್ನು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳನ್ನಾಗಿ ಪರಿವರ್ತಿಸುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಎಐಡಿಎಸ್‌ಓ ಸಂಘಟನೆ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಸರ್ಕಾರಿ ಆರ್.ಸಿ. ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜನ್ನು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳನ್ನಾಗಿ ಪರಿವರ್ತಿಸುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಎಐಡಿಎಸ್‌ಓ ಸಂಘಟನೆ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.ಸರ್ಕಾರ ದೀನ ದಲಿತರ ಬಗ್ಗೆ ಮಾತನಾಡುತ್ತದೆ. ಆದರೆ ಈ ಸಮುದಾಯದವರೇ ಹೆಚ್ಚಾಗಿ ಅಭ್ಯಸಿಸುವ ಕಾಲೇಜುಗಳನ್ನು ಮುಗಿಸಲು ಮುಂದಾಗಿದೆ. ನ್ಯಾಯ ಕೇಳಿದರೆ ವಿದ್ಯಾರ್ಥಿಗಳನ್ನು ಭಯೋತ್ಪಾದಕರನ್ನು ನೋಡಿದಂತೆ ನೋಡುತ್ತಾರೆ. ಘಟಕ ಕಾಲೇಜುಗಳನ್ನಾಗಿ ಪರಿವರ್ತಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿನಿ ಅಭಯ, ಬಡ ವಿದ್ಯಾರ್ಥಿಗಳಿಗಾಗಿ ಈ ಕಾಲೇಜುಗಳನ್ನು ಉಳಿಸಿ ಎಂದು ಮನವಿ ಮಾಡುತ್ತಿದ್ದೇವೆ. ಆದರೆ ಕಾಲೇಜಿನಲ್ಲಿ ಹುಡುಗರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಐಡಿ ಕಾರ್ಡ್‌ಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಘಟನೆ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ಘಟಕ ಕಾಲೇಜುಗಳ ಪರಿಸ್ಥಿತಿ ಭೀಕರವಾಗಿದೆ. ಪದವಿ ಕೋರ್ಸ್‌ಗಳಿಗೆ ಸರ್ಕಾರಿ ಪದವಿ ಕಾಲೇಜುಗಳಲ್ಲಿ 6 ಸಾವಿರಕ್ಕಿಂತ ಕಡಿಮೆ ಶುಲ್ಕವಿದ್ದರೆ, ಘಟಕ ಕಾಲೇಜುಗಳಲ್ಲಿ ಕನಿಷ್ಠ ಶುಲ್ಕವೇ 12 ಸಾವಿರ ರುಪಾಯಿಯಿಂದ ಆರಂಭವಾಗುತ್ತದೆ. ಹಣದ ಕೊರತೆಯಿಂದ ರಾಜ್ಯದ 7 ವಿವಿಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಹೊರಗುಳಿಯುವಂತೆ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಸಂಘಟನೆ ರಾಜ್ಯ ಉಪಾಧ್ಯಕ್ಷ ಅಭಯ ದಿವಾಕರ್, ಜಿಲ್ಲಾಧ್ಯಕ್ಷೆ ಅಪೂರ್ವ, ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ಮತ್ತು ಆರ್.ಸಿ. ಮತ್ತು ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.