Massive protest for water in Javanige region

ರಾಜ್ಯ ರೈತ ಸಂಘ, ಹಸಿರುಸೇನೆ ನೇತೃತ್ವ । ಬಿರಂಜಿ ಹೊಳೆಯಿಂದ ಪಾದಯಾತ್ರೆ । ಆಜಾದ್‌ಪಾರ್ಕ್ ವೃತ್ತದಲ್ಲಿ ಸಮಾವೇಶಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಾವಣಿಗೆ ನಾಡಿನ ರೈತರ ಜಮೀನುಗಳಿಗೆ ನೀರು ಹರಿಸುವಲ್ಲಿ ಸರ್ಕಾರದ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಬಿರಂಜಿ ಹೊಳೆಯಿಂದ ಆರಂಭಗೊಂಡ ರೈತರ ಪಾದಯಾತ್ರೆ ಮಳಲೂರು, ಹಳುವಳ್ಳಿ, ಕದ್ರಿಮಿದ್ರಿ, ರಾಮಪುರ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಆಜಾದ್‌ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡಿತು.

ನೂರಾರು ರೈತರು ಹಾಗೂ ಮಹಿಳೆಯರು ಹಸಿರು ಬಾವುಟ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ರೈತ ಮಹಿಳೆಯೊಬ್ಬರು ಬಿರಂಜಿ ಹೊಳೆಯ ನೀರನ್ನು ಕೊಡದಲ್ಲಿ ತುಂಬಿಕೊಂಡು ಪಾದಯಾತ್ರೆಯ ಮೂಲಕ ನಗರಕ್ಕೆ ತಂದರು.

ಪ್ರತಿನಿಧಿಗಳು ಸ್ಪಂದಿಸಲಿ:

ಆಜಾದ್‌ಪಾರ್ಕ್‌ನಲ್ಲಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ದೇಶಕ್ಕೆ ಅನ್ನ ನೀಡುವ ರೈತರ ಸಂಕಷ್ಟಕ್ಕೆ ಚುನಾಯಿತ ಪ್ರತಿನಿಧಿಗಳು ಸ್ಪಂದಿಸಬೇಕು.

ರೈತರ ಜಮೀನುಗಳಿಗೆ ಸಮರ್ಪಕ ನೀರು ಒದಗಿಸದೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದರು.

ಬಿರಂಜಿ ಹೊಳೆಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ಕೂಡಲೇ ಸ್ಥಗಿತಗೊಳಿಸಿ, ವೈಜ್ಞಾನಿಕ ರೀತಿಯಲ್ಲಿ ಪುನಶ್ಚೇತನಗೊಳಿಸುವ ಮೂಲಕ ರೈತರಿಗೆ ಅನುಕೂಲವಾಗುವಂತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ರೈತರು ಭರಿಸುವ ತೆರಿಗೆ ಹಣದಿಂದಲೇ ನೀರಾವರಿ ಯೋಜನೆಗಳಿಗೆ ಹಣ ಒದಗಿಸಬೇಕೇ ಹೊರತು ರೈತರು ನೀರಿಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಿಸಬಾರದು ಎಂದರು.

ಅವೈಜ್ಞಾನಿಕ ಕಾಮಗಾರಿ:

ಜಯಬಸವ ತಪೋವನದ ಶ್ರೀ ಜಯಬಸವಾನಂದ ಸ್ವಾಮೀಜಿ ಮಾತನಾಡಿ, ಜಾವಣಿಗೆ ನಾಡು ಹಿಂದೆ ಭತ್ತದ ನಾಡಾಗಿತ್ತು. ರೈತರಿಗೆ ಜಲವೇ ಜೀವನವಾಗಿತ್ತು. ಅವೈಜ್ಞಾನಿಕ ಕಾಮಗಾರಿಯಿಂದ ಜಮೀನುಗಳಿಗೆ ನೀರು ದೊರೆಯದಂತಾಗಿದೆ. ಸರ್ಕಾರ ಕೂಡಲೇ ಸಮಸ್ಯೆ ಪರಿಹರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ರೈತ ಸಂಘ ಹಸಿರುಸೇನೆ ಸಾಮೂಹಿಕ ನಾಯಕತ್ವದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜು ಕಿರಣ್, ಮಾತನಾಡಿದರು.

ನಾಲೆ ಹೂಳೆತ್ತಲು ಆಗ್ರಹ:

ಮಳಲೂರು ಏತ ನೀರಾವರಿ ಯೋಜನೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಬೇಕು. ಪುರಾತನ ಐತಿಹಾಸಿಕ ಅರಸರ ನಾಲೆಯ ಅವೈಜ್ಞಾನಿಕ ಕಾಮಗಾರಿ ತೆರವುಗೊಳಿಸಿ, ನಾಲೆಯ ಹೂಳೆತ್ತಿ ಪುನಶ್ಚೇತನಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಣಗಾಳ್ ಮೂರ್ತಿ, ಕೆ.ಕೆ. ಕೃಷ್ಣೇಗೌಡ, ಡಿ. ರಾಮೇಗೌಡ, ಬಿ.ವಿ. ಪರ್ವತೇಗೌಡ, ಎಂ.ಎನ್. ಮುಳ್ಳುಂಡಪ್ಪ, ನಜ್ಮಾಆಲಿ, ಎಂ.ಸಿ.ಗಣೇಶ್‌ಗೌಡ, ಎ.ಎನ್. ರಮೇಶ್, ಎಂ.ಡಿ. ಶಂಕರ್, ಎಂ. ಚಂದ್ರಶೇಖರ್, ಮಣೇನಹಳ್ಳಿ ರಾಜು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ರೈತರು ಪಾಲ್ಗೊಂಡಿದ್ದರು.