ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಡಿಕೇರಿಯಲ್ಲಿ ಬೃಹತ್‌ ಪ್ರತಿಭಟನೆ

| Published : Apr 17 2025, 12:02 AM IST

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಡಿಕೇರಿಯಲ್ಲಿ ಬೃಹತ್‌ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕೊಡಗು ಜಿಲ್ಲಾ ಸುನ್ನಿ ಸಮನ್ವಯ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ವೃತ್ತದಿಂದ ಗಾಂಧಿ ಮೈದಾನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ವಕ್ಫ್ ತಿದ್ದುಪಡಿ ಕಾಯ್ದೆ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಫೀ.ಮಾ.ಕೆ.ಎಂ.ಕಾರ್ಯಪ್ಪ ವೃತ್ತದಿಂದ ಗಾಂಧಿ ಮೈದಾನದವರೆಗೆ ಮೆರವಣಿಗೆ

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕೊಡಗು ಜಿಲ್ಲಾ ಸುನ್ನಿ ಸಮನ್ವಯ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ವೃತ್ತದಿಂದ ಗಾಂಧಿ ಮೈದಾನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ವಕ್ಫ್ ತಿದ್ದುಪಡಿ ಕಾಯ್ದೆ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ಸಮಾವೇಶಗೊಂಡಿತು.

ಈ ಸಂದರ್ಭ ಕೊಡಗು ಜಿಲ್ಲಾ ಖಾಝಿ ಅಬ್ದುಲ್ಲಾ ಫೈಝಿ ಮಾತನಾಡಿ, ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಲ್ಲಿ ಅದು ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತದೆ. ಅಲ್ಲದೆ ದೇವರ ಹೆಸರಿನಲ್ಲಿ ವಕ್ಫ್ ನೀಡಿದ ಆಸ್ತಿಯ ಸಂರಕ್ಷಣೆಗೆ ತೊಡಕು ಎದುರಾಗಲಿದೆ ಎಂದರು.

ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್ ಮಾತನಾಡಿ, ಕೇಂದ್ರ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಮಾತನಾಡಿ, ಕೇಂದ್ರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವುದಿಲ್ಲವೆಂದು ಈಗಾಗಲೇ ನೆರೆಯ ಕೇರಳ, ತಮಿಳುನಾಡು ರಾಜ್ಯಗಳು ತಿಳಿಸಿವೆ. ಅದೇ ರೀತಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಈ ಕಾಯ್ದೆಯನ್ನು ತಿರಸ್ಕಾರ ಮಾಡುವ ಮೂಲಕ ಅಲ್ಪಸಂಖ್ಯಾತರ ಹಿತ ಕಾಪಾಡಲಿದ್ದಾರೆ ಎಂದು ಹೇಳಿದರು.

ವಕ್ಫ್‌ಗೆ ಸಂಬಂಧಿಸಿದ ಸುಮಾರು 6.50 ಲಕ್ಷ ಮತ್ತು ದೇಶಾದ್ಯಂತ 38 ಲಕ್ಷ ಎಕ್ರೆ ಜಾಗವಿದೆ. ಈ ಆಸ್ತಿಯನ್ನು ವಕ್ಫ್‌ಗೆ ಇಲ್ಲದಂತೆ ಮಾಡುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ಮುಂದಾಗಿದೆ ಎಂದು ಆರೋಪಿಸಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ವಕ್ಫ್‌ ತಿದ್ದುಪಡಿ ಕಾಯ್ದೆ ಜಾರಿಯಾಗದಂತೆ ತಡೆಯಲು ನಾವೆಲ್ಲರು ಕಟಿಬದ್ಧರಾಗಿ ಮತ್ತಷ್ಟು ದೊಡ್ಡ ಹೋರಾಟ ರೂಪಿಸಬೇಕಾಗಿದೆ. ಸಂಕಷ್ಟ ನಮ್ಮೆದುರಿಗೆ ಬಂದು ನಿಂತಿದ್ದರೂ ನಮ್ಮ ಸಮುದಾಯ ಇನ್ನೂ ಜಾಗೃತವಾಗಿಲ್ಲ. ಇನ್ನಾದರು ವಿಷಯದ ಗಂಭೀರತೆಯನ್ನು ಅರಿತು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.

ಸುದ್ದಿಗಾರರೊಂದಿಗೆ ಸಮಿತಿಯ ಉಪಾಧ್ಯಕ್ಷ ಯಾಕೂಬ್ ಮಾತನಾಡಿ, ಬಿಜೆಪಿ ಮತಗಳ ಕ್ರೋಢಿಕರಣಕ್ಕಾಗಿ ವಕ್ಫ್ ತಿದ್ದುಪಡಿಯ ವಿವಾದವನ್ನು ಸೃಷ್ಟಿಸಿದೆ. ಮುಸ್ಲಿಂ ಸಮುದಾಯದ ಆಸ್ತಿಯ ರಕ್ಷಣೆಗೆ ನಾವೆಲ್ಲರೂ ಸಂಘಟಿತರಾಗಿದ್ದೇವೆ ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ರಾಜರು, ಬ್ರಿಟೀಷರು ಹಾಗೂ ದಾನಿಗಳು ಜಾಗವನ್ನು ವಕ್ಫ್‌ಗೆ ನೀಡಿದ್ದಾರೆ. ಸಾಂಕೇತಿಕವಾಗಿ ಈಗ ಪ್ರತಿಭಟನೆ ನಡೆಸಲಾಗಿದ್ದು, ಈ ಕಾಯ್ದೆಯನ್ನು ಹಿಂಪಡೆಯದೇ ಇದ್ದಲ್ಲಿ ಲಕ್ಷಾಂತರ ಮಂದಿ ಸೇರಿ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಮೂಲಕ ಪ್ರತಿಭಟನಾಕಾರರು ಮನವಿ ಪತ್ರವನ್ನು ರಾಷ್ಟ್ರಪತಿಗೆ ಸಲ್ಲಿಸಿದರು.