ಮಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ನೀಟ್ ಗೊಂದಲದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಕೇಂದ್ರ ಸರ್ಕಾರ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮಂಗಳೂರಿನಲ್ಲಿ ಯುವ ಸಮೂಹ ಹಾಗೂ ಪ್ರಗತಿಪರ ಸಂಘಟನೆಗಳಿಂದ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.
ಸಂಜೆ ಮಂಗಳೂರು ಕ್ಲಾಕ್ ಟವರ್ ಬಳಿಯಿಂದ ಜಾಥಾ ನಡೆಸಿದ ಪ್ರತಿಭಟನಾಕಾರರು ಪುರಭವನ ಎದುರು ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದರು. ಬಳಿಕ ಕೇಂದ್ರ ಸರ್ಕಾರ, ಪ್ರಧಾನಿ ಹಾಗೂ ಶಿಕ್ಷಣ ಸಚಿವರ ವಿರುದ್ಧ ಘೋಷಣೆ ಕೂಗಿದರು. ಈ ಪ್ರತಿಭಟನೆಯಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪಾಲ್ಗೊಂಡಿದ್ದವು.ಎಡಪಕ್ಷಗಳ ಪ್ರತಿಭಟನೆ: ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಆಹೋರಾತ್ರಿ ಹೋರಾಟವನ್ನು ಬೆಂಬಲಿಸಿ ನಗರದ ಕ್ಲಾಕ್ ಟವರ್ ಬಳಿ ಎಸ್ಎಫ್ಐ-ಡಿವೈಎಫ್ಐ ಜಂಟಿ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಈ ಹೋರಾಟ 56 ಇಂಚಿನ ಪ್ರಧಾನಿಯ ಎದೆಯಲ್ಲೂ ನಡುಕ ಹುಟ್ಟಿಸಿದೆ ಎಂದು ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಧ್ಯಕ್ಷ ಬಿ. ಕೆ. ಇಮ್ತಿಯಾಜ್ ಮಾತನಾಡುತ್ತಾ, ಕಳೆದ 12 ವರ್ಷಗಳ ಅವಧಿಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಇಡೀ ಶಿಕ್ಷಣ ಕ್ಷೇತ್ರವನ್ನೇ ಹಾಳು ಮಾಡಿದೆ. ಈ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಿದೆ ಎಂದು ಹೇಳಿದರು.ಪ್ರತಿಭಟನೆಯನ್ನು ಉದ್ದೇಶಿಸಿ ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ಯಶವಂತ ಮರೋಳಿ, ಎಸ್.ಎಫ್ಐ ಜಿಲ್ಲಾ ಮುಖಂಡ ವಿನಾಯಕ್, ಮನೋಜ್ ವಾಮಂಜೂರು ಮಾತನಾಡಿದರು.
