ರಾಷ್ಟ್ರವ್ಯಾಪ್ತಿ ಮುಷ್ಕರ ಬೆಂಬಲಿಸಿ ಬೃಹತ್ ಪ್ರತಿಭಟನೆ: ಹೆದ್ದಾರಿ ತಡೆದು ಆಕ್ರೋಶ

| Published : Jul 10 2025, 12:46 AM IST

ಸಾರಾಂಶ

ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ನುಗ್ಗಿ ಕಚೇರಿ ಕೆಲಸ ಕಾರ್ಯಗಳು ಅಡ್ಡಿ ಪಡಿಸುವ ಮೂಲಕ ಧರಣಿ ನಡೆಸಲು ಯತ್ನಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ ಕಾನೂನು ಜಾರಿ ಖಂಡಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ರಾಷ್ಟ್ರ ವ್ಯಾಪ್ತಿ ಮುಷ್ಕರಕ್ಕೆ ಬೆಂಬಲಿಸಿ ವಿವಿಧ ಕಾರ್ಮಿಕರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಧರಣಿ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪೊಲೀಸರು 50ಕ್ಕೂ ಹೆಚ್ಚು ಕಾರ್ಮಿಕರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.

ಜಂಟಿ ಕಾರ್ಮಿಕ ಸಂಘ ಹಾಗೂ ಕರ್ನಾಟಕ ಸಂಯುಕ್ತ ಹೋರಾಟ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಬೃಹತ್ ರ್‍ಯಾಲಿಯಲ್ಲಿ ಅಂಗನವಾಡಿ, ಪವರ್ ಸೆಲ್, ಸನ್ವ ಡೈಮಂಡ್, ಬಿಸಿಯೂಟ ನೌಕರರು , ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ ಕೂಲಿಕಾರರ ಸಂಘ ಸೇರಿದಂತೆ ಸುಮಾರು ಹತ್ತು ಕಾರ್ಮಿಕ ಸಂಘಟನೆಗಳ ಒಂದು ಸಾವಿರ ಮಂದಿ ಕಾರ್ಮಿಕರು ಪಾಲ್ಗೊಂಡಿದ್ದರು.

ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ನುಗ್ಗಿ ಕಚೇರಿ ಕೆಲಸ ಕಾರ್ಯಗಳು ಅಡ್ಡಿ ಪಡಿಸುವ ಮೂಲಕ ಧರಣಿ ನಡೆಸಲು ಯತ್ನಿಸಿದರು. ನಂತರ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸರು ಕಾರ್ಮಿಕ ಮುಖಂಡರನ್ನು ತಡೆದು ತಾಲೂಕ ಕಚೇರಿ ಪ್ರವೇಶ ಮಾಡದಂತೆ ಮನವೊಲಿಸಿದರು.

ನಂತರ ಬೆಂಗಳೂರು ಮೈಸೂರು ಹೆದ್ದಾರಿ ಸರ್ವಿಸ್ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಮತ್ತೆ ಪ್ರವಾಸಿ ಮಂದಿರದ ವೃತ್ತಕ್ಕೆ ಧಾವಿಸಿದ ಪ್ರತಿಭಟನಾ ನಿರತ ಕಾರ್ಮಿಕರು ಹೆದ್ದಾರಿಯಲ್ಲಿ ಮಾನವ ಸರಪಳಿಯೊಂದಿಗೆ ಧರಣಿ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು.

ಕಾರ್ಮಿಕ ಸಂಘಟನೆಗಳ ಮುಖಂಡರಾದ ದೇವಿ, ಅರುಣ್ ಕುಮಾರ್, ಹನುಮೇಶ್ ಮತ್ತಿತರರು, ಕಾರ್ಪೊರೇಟರ್‌ಗಳ ಹಿತಾಸಕ್ತಿಗೆ ಅನುಕೂಲ ವಾಗುವಂತೆ 29 ಕಾರ್ಮಿಕ ಕಾನೂನುಗಳನ್ನು ಹರಣಗೊಳಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ತುದಿಗಾಲಿನಲ್ಲಿ ನಿಂತಿದೆ ಎಂದು ಆರೋಪಿಸಿದರು. ನಂತರ ಕಾರ್ಮಿಕರ ವಿವಿಧ ಬೇಡಿಕೆಗಳ ಕುರಿತಂತೆ ತಹಸೀಲ್ದಾರ್ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಮಂಜುಳಾರಾಜ್ , ಪ್ರಣಿತ,ಜಯಶೀಲ, ಮಹಾಂತೇಶ, ತುಳಸಿದೇವಿ, ನಾಗಮಣಿ, ಸುನಂದ ಪದ್ಮ, ರತ್ನಮ್ಮ, ಶಿವಕುಮಾರ್, ಕೆ.ಟಿ. ಮಂಜು, ಶಶಿಕುಮಾರ್, ಶೋಭಾ, ವಿಶ್ವನಾಥ್ ಸೇರಿದಂತೆ ಕಾರ್ಮಿಕ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.ರಸ್ತೆ ತಡೆ ನಡೆಸಿದ 70ಕ್ಕೂ ಕಾರ್ಮಿಕರ ಬಂಧನ, ಪ್ರಕರಣ ದಾಖಲಿಸಿ ಬಿಡುಗಡೆ

ಮದ್ದೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮೂಲಕ ರಸ್ತೆತಡೆ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪೊಲೀಸರು ಕಾರ್ಮಿಕ ಮುಖಂಡರಾದ ಮಂಜುಳಾ ರಾಜ್, ಹನುಮೇಶ್ ಸೇರಿದಂತೆ 70ಕ್ಕೂ ಕಾರ್ಮಿಕರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬೆಂಗಳೂರು ಮೈಸೂರು ಸರ್ವಿಸ್ ರಸ್ತೆಯಲ್ಲಿ ಕಾರ್ಮಿಕ ಮುಖಂಡರು ಧರಣಿ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದಾಗ ಬೆಂಗಳೂರು- ಮೈಸೂರು, ಮದ್ದೂರು- ಮಳವಳ್ಳಿ- ಕೊಳ್ಳೇಗಾಲ ಮಾರ್ಗದಲ್ಲಿ ಸುಮಾರು ಅರ್ಧ ತಾಸುಗಳ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿ ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾದರು.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ರಸ್ತೆ ತಡೆ ಕೈ ಬಿಟ್ಟು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರೂ ಪ್ರತಿಭಟನೆ ಮುಂದುವರಿಸಿ ಕಾರ್ಮಿಕರು ಸಾಮೂಹಿಕವಾಗಿ ಬಂಧಿಸುವಂತೆ ಒತ್ತಾಯಿಸಿದರು.

ಕೊನೆಗೆ ಪೊಲೀಸರು ಮುಖಂಡರಾದ ಮಂಜುಳಾ ರಾಜು, ಹನುಮೇಶ್, ಟಿ.ಎಲ್.ಕೃಷ್ಣ, ಅರುಣ್ ಕುಮಾರ್, ಶಿವಕುಮಾರ್, ಶೋಭಾ, ಗುಣಶೇಖರ್, ಬಿ.ಶೋಭಾ ಸೇರಿದಂತೆ 70ಕ್ಕೂ ಹೆಚ್ಚು ಕಾರ್ಮಿಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಎರಡು ಬಸ್ಸುಗಳಲ್ಲಿ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ವರೆಗೆ ಕರೆದೊಯ್ದು ನಂತರ ಪ್ರವಾಸಿ ಮಂದಿರದ ಆವರಣಕ್ಕೆ ಕರೆತಂದು ಪ್ರಕರಣ ದಾಖಲಿಸಿದ ನಂತರ ಬಿಡುಗಡೆ ಮಾಡಿದರು.