ನೇಹಾ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ

| Published : Apr 23 2024, 12:53 AM IST

ಸಾರಾಂಶ

ಸಿಂಧನೂರು ನಾಗರಿಕರ ಹಿತರಕ್ಷಣಾ ವೇದಿ, ಬಿಜೆಪಿಯಿಂದ ಪ್ರತ್ಯೇಕ ಪ್ರತಿಭಟನೆ. ಮಾನವ ಸರಪಳಿ ನಿರ್ಮಿಸಿ ಟೈರ್‌ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರ, ಆರೋಪಿ ವಿರುದ್ಧ ಆಕ್ರೋಶ.

ಕನ್ನಡಪ್ರಭ ವಾರ್ತೆ ಸಿಂಧನೂರು

ಹುಬ್ಬಳ್ಳಿ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಚಾಕುವಿನಿಂದ ಇರಿದು ಕೊಲೆಗೈದ ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಸಿಂಧನೂರು ನಾಗರಿಕರ ಹಿತರಕ್ಷಣಾ ವೇದಿಕೆ ಮತ್ತು ಬಿಜೆಪಿಯಿಂದ ಸೋಮವಾರ ಪ್ರತ್ಯೇಕವಾಗಿ ಪ್ರತಿಭಟಿಸಿ ಕೊಪ್ಪಳ ಲೋಕಸಭೆ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಹೇಶ್ ಪೋತೆದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

ನಗರದ ಎಪಿಎಂಸಿ ಗಣೇಶ ದೇವಸ್ಥಾನದ ಆವರಣದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಸುಮಾರು 400ಕ್ಕೂ ಅಧಿಕ ಜನರು ನೆರೆದು ಅಲ್ಲಿಂದ ಮೆರವಣಿಗೆ ಹೊರಟು ಬಾಬು ಜಗಜೀವನರಾಂ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ರಸ್ತೆ ಮೂಲಕ ಗಾಂಧಿ ವೃತ್ತಕ್ಕೆ ಬಂದು ಮಾನವ ಸರಪಳಿ ನಿರ್ಮಿಸಿ ಟೈರ್‌ಗೆ ಬೆಂಕಿ ಹಚ್ಚಿ, ರಾಜ್ಯ ಸರ್ಕಾರ ಹಾಗೂ ಆರೋಪಿ ಫಯಾಜ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ನೇಹ ಹತ್ಯೆಯಾಗಿರುವುದಕ್ಕೆ ಅನುಕಂಪ ತೋರಿಸಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿದೆಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ. ಸರ್ಕಾರ ಆರೋಪಿಗೆ ಗಲ್ಲು ಶಿಕ್ಷೆ ಅಥವಾ ಎನ್‌ ಕೌಂಟರ್‌ ಮಾಡಬೇಕು ಎಂದು ಆಗ್ರಹಿಸಿದರು.

ಕರಿಬಸವನಗರದ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ನಿಮ್ಮ ಕೈಯಿಂದ ಆಗದಿದ್ದರೆ ಆರೋಪಿಯನ್ನು ಹಿಂದೂ ಸಮಾಜಕ್ಕೆ ಒಪ್ಪಿಸಿ ಎಂದು ಹೇಳಿದರು.

ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಹಾಗೂ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಮಹಿಳಾ ಮುಖಂಡೆ ಮಲ್ಲಮ್ಮ ಊಟಕನೂರು, ವಿದ್ಯಾರ್ಥಿ ಅಕ್ಷತಾ ಹಿರೇಮಠ ಮಾತನಾಡಿದರು.

ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಮಹಾಸ್ವಾಮಿ, ಬಂಗಾರಿ ಕ್ಯಾಂಪಿನ ಸಿದ್ದಾಶ್ರಮದ ಸದಾನಂದ ಶರಣರು, ರೌಡಕುಂದಾ ಸಂಸ್ಥಾನ ಮಠದ ಶಿವಯೋಗಿ ಶಿವಾಚಾರ್ಯ, ಮುಖಂಡರಾದ ಅಮರೇಶಗೌಡ ವಿರುಪಾಪುರ, ರಾಜೇಶ ಹಿರೇಮಠ, ಬಾಬುಗೌಡ ಬಾದರ್ಲಿ, ಸೋಮನಗೌಡ ಬಾದರ್ಲಿ, ಹನುಮೇಶ ಕುರಕುಂದಿ, ಟಿ.ಪಂಪನಗೌಡ, ಎನ್.ಅಮರೇಶ, ಸಿದ್ರಾಮೇಶ ಮನ್ನಾಪುರ, ವೀರೇಶ ಯಡಿಯೂರಮಠ ಇದ್ದರು. ಇದೇ ಸಂದರ್ಭದಲ್ಲಿ ಬಿಜೆಪಿಯಿಂದಲೂ ಮನವಿ ಪತ್ರವನ್ನು ಸಲ್ಲಿಸಲಾಯಿತು.22ಕೆಪಿಎಸ್ಎನ್ಡಿ2ಎಸಿಂಧನೂರು ತಾಲ್ಲೂಕು ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟಿಸಿ ಸಹಾಯಕ ಚುನಾವಣಾಧಿಕಾರಿ ಮಹೇಶ ಪೋತೆದಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.