ಅಡಕೆ, ತೆಂಗು ಆಮದು ಸಂಪೂರ್ಣ ನಿಷೇಧ ಆಗ್ರಹಿಸಿ ಮಂಗಳೂರಲ್ಲಿ ರೈತರ ಬೃಹತ್ ಹೋರಾಟ

| Published : Mar 08 2024, 01:49 AM IST

ಅಡಕೆ, ತೆಂಗು ಆಮದು ಸಂಪೂರ್ಣ ನಿಷೇಧ ಆಗ್ರಹಿಸಿ ಮಂಗಳೂರಲ್ಲಿ ರೈತರ ಬೃಹತ್ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ ಜಿಲ್ಲಾ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಗುರುವಾರ ಬಿ.ಸಿ.ರೋಡ್‌ನ ನಾರಾಯಣಗುರು ವೃತ್ತದಿಂದ ಮಂಗಳೂರಿನ ಹಂಪನಕಟ್ಟೆ ಮಿನಿವಿಧಾನ ಸೌಧದ ವರೆಗೆ ಟ್ರ್ಯಾಕ್ಟರ್‌ ಹಾಗೂ ವಾಹನ ಜಾಥ, ಬಳಿಕ ಪ್ರತಿಭಟನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಡಕೆ ಮತ್ತು ತೆಂಗಿನ ಆಮದು ಸಂಪೂರ್ಣವಾಗಿ ನಿಷೇಧಿಸಬೇಕು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದ.ಕ ಜಿಲ್ಲಾ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಗುರುವಾರ ಬಿ.ಸಿ.ರೋಡ್‌ನ ನಾರಾಯಣಗುರು ವೃತ್ತದಿಂದ ಮಂಗಳೂರಿನ ಹಂಪನಕಟ್ಟೆ ಮಿನಿವಿಧಾನ ಸೌಧದ ವರೆಗೆ ಟ್ರ್ಯಾಕ್ಟರ್‌ ಹಾಗೂ ವಾಹನ ಜಾಥ, ಬಳಿಕ ಪ್ರತಿಭಟನಾ ಸಭೆ ನಡೆಯಿತು.

ನೂರಾರು ಸಂಖ್ಯೆಯಲ್ಲಿ ರೈತರು ಜಾಥದಲ್ಲಿ ಭಾಗವಹಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿದರು. ಕಾರ್ಪೊರೇಟ್‌ ಕಂಪೆನಿಗಳ 14 ಲಕ್ಷ ಕೋ.ರು. ಸಾಲಮನ್ನಾ ಮಾಡಿದ ಸರ್ಕಾರದ ತಪ್ಪು ನೀತಿಯಿಂದ ರೈತರು ಸಾಲಗಾರರಾಗಿದ್ದಾರೆ. ರೈತರ ಸಂಪೂರ್ಣ ಸಾಲ ಮನ್ನ ಮಾಡಬೇಕು. ದೆಹಲಿ ಗಡಿ ಭಾಗದಲ್ಲಿ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕು. ಅಡಕೆಗೆ ಎಲೆ ಚುಕ್ಕಿ ಹಳದಿರೋಗ ಬಾ​ಧಿತ ರೈತರಿಗೆ ಎಕರೆಗೆ 25 ಸಾವಿರ ರು. ಸಹಾಯಧನ ನೀಡಬೇಕು. ಬಂಟ್ವಾಳ ಮೂಲಕ ಹಾದು ಹೋಗಿರುವ 400 ಕೆ.ವಿ. ವಿದ್ಯುತ್‌ ಮಾರ್ಗವನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್‌ ಪುಣಚ, ಜಿ.20 ಸಭೆಯಲ್ಲಿ ಕೃಷಿ ಮಸೂದೆ ಮತ್ತೆ ಚಾಲ್ತಿಗೆ ತರುವ ಬಗ್ಗೆ ಚರ್ಚೆಯಾಗಿದೆ. ಮಸೂದೆಯಲ್ಲಿ ಏನಿತ್ತೋ ಅದನ್ನು ಇನ್ನೊಂದು ರೂಪದಲ್ಲಿ ಜಾರಿಗೆ ತರುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೃಷಿ ಮಸೂದೆ ವಿರೋಧಿಸಿ ನಡೆಸಿದ ಪ್ರತಿಭಟನೆ ಸಂದರ್ಭ ಹುತಾತ್ಮರಿಗೆ ಪರಹಾರ ಕೊಟ್ಟಿಲ್ಲ. ಜಿಲ್ಲೆಯಲ್ಲಿ ಗುಣಮಟ್ಟದ ಅಡಿಕೆ ಬೆಳೆಯಲಾಗುತ್ತಿದ್ದು, ಬೇಡಿಕೆ ಕುಂಠಿತವಾಗಿಲ್ಲ. ವಿದೇಶಗಳಿಂದ ಆಮದು ಮಾಡುವ ಮೂಲಕ ಮಾರುಕಟ್ಟೆದರವನ್ನು ಸ್ಥಿತ್ಯಂತರಗೊಳಿಸುವ ಹುನ್ನಾರ ನಡೆದಿದೆ ಎಂದರು ಆರೋಪಿಸಿದರು.ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿದರು.ರಾಜ್ಯ ಮುಖಂಡ ಸನ್ನಿ ಡಿ’ಸೋಜಾ ನೀರುಮಾರ್ಗ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಸುರೇಶ್‌ ಭಟ್‌ ಕೊಜಂಬೆ, ಜಿಲ್ಲಾಧ್ಯಕ್ಷ ಓಸ್ವಾಲ್ಡ್‌ ಫೆರ್ನಾಂಡಿಸ್‌, ಪ್ರಮುಖರಾದ ರೂಪೇಶ್‌ ರೈ ಪಲಿಮಾರು, ಅಮರನಾಥ ಆಳ್ವ, ಪ್ರಾಂತ ರೈತ ಸಂಘದ ಯಾದವ ಶೆಟ್ಟಿ, ವಿನೋದ್‌ ಭಟ್‌, ಭರತ್‌ ರೈ ಸೂಡಿಮುಳ್ಳು, ಡಿವೈಎಫ್‌ ಐ ರಾಜ್ಯ ಉಪಾಧ್ಯಕ್ಷ ಮುನೀರ್‌ ಕಾಟಿಪಳ್ಳ ಸುನಿಲ್‌ ಕುಮಾರ್‌ ಬಜಾಲ್‌, ಜಯಂತಿ ಶೆಟ್ಟಿ, ಮಾರ್ಟಿಸ್‌ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪ್ರತಿಭನಾ ಸ್ಥಳಕ್ಕೆ ಆಗಮಿಸಿದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್‌ ಆಗಮಿಸಿ ರೈತರ ಬೇಡಿಕೆಗಳ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಮನವಿ ಜಿಲ್ಲಾ​ಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ರೈತರ ಬೇಡಿಕೆಯಾಗಿರುವ ಜಿಲ್ಲಾ ಮಟ್ಟದ ರೈತರ ಸಭೆ ಆಯೋಜಿಸುವ ವಿಚಾರವನ್ನು ಜಿಲ್ಲಾ​ಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.