ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನಾತ್ಮಕವಾಗಿ ದೊರೆತಿರುವ 371(ಜೆ) ವಿಶೇಷ ಸ್ಥಾನಮಾನದ ಆಶಯ ಸಮರ್ಪಕವಾಗಿ ಈಡೇರಬೇಕು

ಕುಷ್ಟಗಿ: 371 (ಜೆ) ಕಲಂನಡಿ ಕಲ್ಯಾಣ ಕರ್ನಾಟಕಕ್ಕೆ ದೊರೆತಿರುವ ಸಂವಿಧಾನಬದ್ಧ ಹಕ್ಕುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು. ಶಿಕ್ಷಣ, ಆರೋಗ್ಯ ಹಾಗೂ ಮಾನವ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಸೆ. 17ರಂದು ಕಲಬುರಗಿಯಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು.

ತಾಲೂಕಿನ ತಾವರಗೇರಾ ಪಟ್ಟಣದ ಬುದ್ಧವಿಹಾರ ಸಭಾಂಗಣದಲ್ಲಿ ಭಾನುವಾರ ನಡೆದ ಎರಡು ದಿನಗಳ 371(ಜೆ) ಅಧ್ಯಯನ ಶಿಬಿರದ ಸಮಾರೋಪಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನಾತ್ಮಕವಾಗಿ ದೊರೆತಿರುವ 371(ಜೆ) ವಿಶೇಷ ಸ್ಥಾನಮಾನದ ಆಶಯ ಸಮರ್ಪಕವಾಗಿ ಈಡೇರಬೇಕು. ಈ ಭಾಗದ ಜನರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾನ ಅವಕಾಶ ದೊರೆಯಬೇಕು. ಆದರೆ, 371(ಜೆ) ಜಾರಿಯಾಗಿ ಹಲವು ವರ್ಷ ಕಳೆದರೂ ಅದರ ಸಂಪೂರ್ಣ ಪ್ರಯೋಜನ ಜನರಿಗೆ ತಲುಪಿಲ್ಲ. ಈ ಹಿನ್ನೆಲೆ ಹೋರಾಟ ಮತ್ತಷ್ಟು ಸಂಘಟಿತವಾಗಿ ಮುಂದುವರಿಸುವ ಅಗತ್ಯವಿದೆ ಎಂದರು.

ಏಳು ಜಿಲ್ಲೆಗಳ ಹೋರಾಟಗಾರರು, ಚಿಂತಕರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಒಗ್ಗೂಡಿಸಿ ನಡೆಸಿದ ಅಧ್ಯಯನ ಶಿಬಿರವು 371(ಜೆ) ಕುರಿತು ಸಮಗ್ರ ಚರ್ಚೆಗೆ ವೇದಿಕೆಯಾಗಿದೆ. ಶಿಬಿರದಲ್ಲಿ ಶಿಕ್ಷಣ, ನೀರಾವರಿ, ಪ್ರಾದೇಶಿಕ ಅಸಮತೋಲನ ಸೇರಿದಂತೆ ಕಲ್ಯಾಣ ಕರ್ನಾಟಕ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಆಳವಾದ ಚರ್ಚೆ ನಡೆದಿದ್ದು, ಮುಂದಿನ ಹೋರಾಟಕ್ಕೆ ಇದು ಮತ್ತಷ್ಟು ಬಲ ನೀಡಿದೆ ಎಂದು ಹೇಳಿದರು.

ಮೂರನೇ ಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಪರಿಸ್ಥಿತಿ ಮತ್ತು ಪರಿಹಾರೋಪಾಯಗಳು ಕುರಿತು ಧನರಾಜ್ ಗಂಗಾವತಿ ವಿಷಯ ಮಂಡಿಸಿದರು. ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಹಿಂದುಳಿದಿರುವಿಕೆಗೆ ಕಾರಣ, ಶಿಕ್ಷಣ ಕ್ಷೇತ್ರದಲ್ಲಿ ಎದುರಾಗುತ್ತಿರುವ ಸಮಸ್ಯೆ ಹಾಗೂ ಅವುಗಳ ಪರಿಹಾರೋಪಾಯಗಳ ಕುರಿತು ಚರ್ಚಿಸಲಾಯಿತು. ರಮೇಶ ತುಪ್ಪದ್ ಹಾಗೂ ಪಂಡಿತ್ರಾವ್ ಚಿದ್ರಿ ವಿಷಯಕ್ಕೆ ಸ್ಪಂದಿಸಿದರು. ಜಾನ್ ವೇಸ್ಲಿ ಕಾತರಕಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ನಾಲ್ಕನೇ ಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ನೀರಾವರಿ ಯೋಜನೆಗಳ ಸಮಗ್ರ ಚಿಂತನೆ ಕುರಿತು ಹನಮಗೌಡ ಬೇಳಗುರ್ಕಿ ವಿಷಯ ಅವಲೋಕನ ಹಾಗೂ ಸಂವಾದ ನಡೆಸಿದರು. ಈ ಭಾಗದ ನೀರಾವರಿ ಯೋಜನೆಗಳ ಸ್ಥಿತಿ, ಅವುಗಳ ಅನುಷ್ಠಾನದಲ್ಲಿನ ಸಮಸ್ಯೆ ಹಾಗೂ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು. ಹನಮನಗೌಡ ಸತ್ಯಂಪೇಟೆ ವಿಷಯಕ್ಕೆ ಸ್ಪಂದಿಸಿದರು.

ಐದನೇ ಗೋಷ್ಠಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ:

ಸವಾಲು ಮತ್ತು ಸಾಧ್ಯತೆ ಕುರಿತು ಈ.ಧನರಾಜ್ ಗಂಗಾವತಿ ಸಂವಾದ ನಡೆಸಿದರು. ಕಲ್ಯಾಣ ಕರ್ನಾಟಕ ಹಾಗೂ ರಾಜ್ಯದ ಇತರ ಭಾಗಗಳ ನಡುವಿನ ಅಭಿವೃದ್ಧಿ ಅಂತರ ಕಡಿಮೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಿತು.

ನಾಲ್ಕು ಪ್ರಮುಖ ನಿರ್ಣಯ: 371(ಜೆ) ಕಲಂನ ಸಂಪೂರ್ಣ ಅನುಷ್ಠಾನಕ್ಕಾಗಿ ಹೋರಾಟ ತೀವ್ರಗೊಳಿಸುವ ಉದ್ದೇಶದಿಂದ ಅಧ್ಯಯನ ಶಿಬಿರದಲ್ಲಿ ನಾಲ್ಕು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಏಳು ಜಿಲ್ಲೆಗಳ ಚುನಾಯಿತ ಜನಪ್ರತಿನಿಧಿಗಳನ್ನು ಭೇಟಿ ಮಾಡಿ 371(ಜೆ) ಅನುಷ್ಠಾನಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಸೆ.7ರಂದು ಏಳು ಜಿಲ್ಲೆಗಳ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಯಿತು. ಈ ಮೂಲಕ ಸರ್ಕಾರದ ಗಮನವನ್ನು 371(ಜೆ) ಹಕ್ಕುಗಳ ಸಂಪೂರ್ಣ ಅನುಷ್ಠಾನದತ್ತ ಸೆಳೆಯಲು ಹೋರಾಟಗಾರರು ನಿರ್ಧರಿಸಿದ್ದಾರೆ.

ಸೆ.17ರಂದು ಕಲಬುರಗಿ ವಿಭಾಗೀಯ ಕೆಕೆಆರ್‌ಡಿಬಿ ಕೇಂದ್ರ ಕಚೇರಿ ಮುಂದೆ 10 ಸಾವಿರ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು. ಏಳು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಪ್ರತಿಭಟನೆಗೆ ಕರೆತರುವ ಮೂಲಕ ಹೋರಾಟಕ್ಕೆ ದೊಡ್ಡ ಮಟ್ಟದ ಜನಬೆಂಬಲ ವ್ಯಕ್ತಪಡಿಸಲು ಉದ್ದೇಶಿಸಲಾಗಿದೆ.

ಏಳು ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಜಾಥಾ ಹಾಗೂ ವಿದ್ಯಾರ್ಥಿಗಳಿಂದ ಪ್ರಭಾತ ಫೇರಿ ನಡೆಸಿ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ದೊರೆತಿರುವ ಹಕ್ಕುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ನಿರ್ಣಯ ಕೈಗೊಳ್ಳಲಾಯಿತು.

ಶಿಬಿರದಲ್ಲಿ ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ, ಮಹಿಳಾ ಹೋರಾಟಗಾರ್ತಿ ಹಾಗೂ ಚಿಂತಕಿ ಕೆ.ನೀಲಾ, ನಜೀರಸಾಬ್ ಮೂಲಿಮನಿ, ಸಂತೋಷ ದೇಶಪಾಂಡೆ, ಡಾ.ಶಾರದಾ ಹುಲಿಹೈದರ್, ರಮೇಶ ತುಪ್ಪದ್, ಡಿ.ಎಚ್.ಕಂಬಳಿ, ಡಾ. ಎರ್ರಿಸ್ವಾಮಿ ಸೇರಿದಂತೆ ಏಳು ಜಿಲ್ಲೆಗಳ ವಿವಿಧ ಚಿಂತಕರು, ಹೋರಾಟಗಾರರು, ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.