ಬೆಂಗಳೂರಿನಲ್ಲಿ ಧರಣಿ ನಡೆಸಲು ವ್ಯಾಪಕ ತಯಾರಿ ನಡೆಸಲಾಗಿದೆ. ಇದಕ್ಕಾಗಿ ಸಂಚಾಲನಾ ಸಮಿತಿ ರಚಿತವಾಗಿದ್ದು, ವ್ಯಾಪಕ ಸಂಪರ್ಕ ಅಭಿಯಾನ ಆರಂಭವಾಗಿದೆ.
ಶಿರಸಿ: ಸ್ವರ್ಣವಲ್ಲಿ ಶ್ರೀಗಳ ಗೌರವ ಅಧ್ಯಕ್ಷತೆಯಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಅ. 10ರಂದು ಬೇಡ್ತಿ ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಬೃಹತ್ ಧರಣಿ ನಡೆಸಲಾಗುವುದು ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಧರಣಿ ನಡೆಸಲು ವ್ಯಾಪಕ ತಯಾರಿ ನಡೆಸಲಾಗಿದೆ. ಇದಕ್ಕಾಗಿ ಸಂಚಾಲನಾ ಸಮಿತಿ ರಚಿತವಾಗಿದ್ದು, ವ್ಯಾಪಕ ಸಂಪರ್ಕ ಅಭಿಯಾನ ಆರಂಭವಾಗಿದೆ. ಸಾಮಾಜಿಕ ಮಾಧ್ಯಮ, ಪತ್ರಿಕಾ ಮಾಧ್ಯಮಗಳಲ್ಲಿ ಲೇಖನಗಳು ಪ್ರಕಟವಾಗುತ್ತಿವೆ. ಜತೆಗೆ ಹಲವು ಸಂಘ- ಸಂಸ್ಥೆಗಳು, ಗಣ್ಯರು, ಸಾಹಿತಿಗಳು, ಕಲಾವಿದರು ಬೆಂಬಲ ಘೋಷಿಸಿದ್ದಾರೆ ಎಂದರು.ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಪರಿಸರ ತಜ್ಞ, ಎ.ಎನ್. ಯಲ್ಲಪ್ಪ ರೆಡ್ಡಿ ಸೇರಿದಂತೆ ನಾಡಿನ ಗಣ್ಯರು ಹೋರಾಟದಲ್ಲಿ ಪಾಲ್ಗೊಳ್ಳುವರು. ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಉಪಾಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸಂಚಾಲಕರಾದ ವಿಶ್ವನಾಥ ಶೀಗೇಹಳ್ಳಿ, ಗೋಪಾಲ ಕೃಷ್ಣ ತಂಗಾರ‍್ಮನೆ, ರಮೇಶ ದುಬಾಶಿ, ಗಣಪತಿ ಕೆ. ಬಿಸಲಕೊಪ್ಪ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ಜಿಲ್ಲೆಯ ಶಾಸಕರು, ಸಂಸದರನ್ನು ಆಹ್ವಾನಿಸಲಾಗಿದೆ ಎಂದರು.
ರಾಜ್ಯಮಟ್ಟದಲ್ಲಿ ನಡೆಯುವ ಬೆಂಗಳೂರಿನ ಹೋರಾಟದಲ್ಲಿ ಬೇಡ್ತಿ- ಅಘನಾಸಿನಿ ನದಿ ಜೋಡಣೆ ಯೋಜನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಕೈಬಿಡಬೇಕು ಎಂದು ದೊಡ್ಡ ಧ್ವನಿಯಲ್ಲಿ ಒತ್ತಾಯ ಮಾಡಲಿದೆ. ಈಗಾಗಲೇ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟ ಬೃಹತ್ ಯೋಜನೆಗಳಿಂದ ಧಾರಣಾ ಸಾಮರ್ಥ್ಯ ಕಳೆದುಕೊಂಡಿದೆ. ನೀರಿಲ್ಲದ ಬೇಡ್ತಿ ವರದಾ ಡಿಪಿಆರ್‌ಗೆ ತಡೆ ನೀಡುವ ಮೂಲಕ ಸರ್ವೆ ಕಾರ್ಯ ನಿಲ್ಲಿಸಬೇಕೆಂದು ಆಗ್ರಹಿಸಿದರು.ಈಗಾಗಲೇ ಸ್ವರ್ಣವಲ್ಲಿ ಶ್ರೀಗಳ ಚಾತುರ್ಮಾಸ ಸಂದರ್ಭದಲ್ಲಿ 2 ತಿಂಗಳಲ್ಲಿ 15 ಸಾವಿರ ಪತ್ರಗಳನ್ನು ಬರೆಯುವ ಮೂಲಕ ಬೇಡ್ತಿ ಅಘನಾಶಿನಿ ಯೋಜನೆ ಕೈ ಬಿಡಬೇಕೆಂದು ಮುಖ್ಯಮಂತ್ರಿಗಳಿಗೆ ಭಕ್ತವೃಂದದಿಂದ ಒತ್ತಾಯಿಸಲಾಗಿದೆ. ಇಲ್ಲಿಯವರೆಗೆ 6 ತಿಂಗಳಲ್ಲಿ 60 ಸಾವಿರ ಪತ್ರ ಬರೆಯಲಾಗಿದೆ. ಅಲ್ಲದೇ ಬೆಂಗಳೂರಿನ ಧರಣಿಯಲ್ಲಿ ಮತ್ತೆ 3 ಸಾವಿರ ಜನರ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.
ಬೇಡ್ತಿ ಚಳವಳಿಯ ಭಾಗವಾಗಿ ಸ್ವರ್ಣವಲ್ಲಿ ಶ್ರೀಗಳು ರಚಿಸಿದ ಪರಿಸರ ಗೀತೆಗಳ ಸಿಡಿಯನ್ನು ಸಮಾವೇಶದಲ್ಲಿ ಅನಾವರಣಗೊಳಿಸಲಾಗುತ್ತದೆ. ಯಲ್ಲಾಪುರದಲ್ಲಿ ನವೆಂಬರ್ ತಿಂಗಳಿನಲ್ಲಿ ಬೃಹತ್ ರಾಸ್ತಾರೋಕೊ ನಡೆಯಲಿದೆ. ಈ ಕುರಿತು ಯಲ್ಲಾಪುರದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಗೋಪಾಲಕೃಷ್ಣ ವೈದ್ಯ, ಗಣಪತಿ ಕೆ. ಬಿಸಲಕೊಪ್ಪ, ರಮೇಶ ದುಬಾಶಿ ಸೇರಿದಂತೆ ಅನೇಕರು ಇದ್ದರು.