ಸಾರಾಂಶ
ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಲ್ಪೆ ಕಡಲ ತೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ. ಆದ್ದರಿಂದ ಈ ಪ್ರವಾಸಿಗರ ಅನುಕೂಲಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವ ಮಾಸ್ಟರ್ ಪ್ಲಾನ್ ರಚಿಸುವಂತೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಈ ಮಾಸ್ಟರ್ ಪ್ಲಾನ್ ನಲ್ಲಿ ಮಲ್ಪೆ, ಪಡುಕೆರೆ ಬೀಚ್ ಪ್ರದೇಶದ ಸ್ವಚ್ಚತಾ ನಿರ್ವಹಣೆ, ಫುಡ್ ಕೋರ್ಟ್, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆಗಳನ್ನು ಸೇರಿಸಬೇಕು. ಪ್ರವಾಸಿಗರಿಗೆ ಅನುಕೂಲವಾಗುವಂತೆ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು. ಇಂದಿನ ದಿನಗಳಲ್ಲಿ ನಿರೀಕ್ಷೆಗೂ ಮೀರಿ ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅವರುಗಳಿಗೆ ಸ್ಥಳೀಯ ಕಡಲ ಅಪಾಯದ ಮಾಹಿತಿ ಇರುವುದಿಲ್ಲ. ಅವರುಗಳಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು ಎಂದರು.ಮಲ್ಪೆ, ಪಡುಕರೆ ಬೀಚ್ ಪ್ರದೇಶಗಳಲ್ಲಿ, ಸೇಂಟ್ ಮೇರಿಸ್ ದ್ವೀಪಕ್ಕೆ ಅಗತ್ಯವಿರುವ ಜೀವ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಬೇಕು. ಬೀಚ್ ಪ್ರದೇಶಗಳಲ್ಲಿ ಹೈ ಮಾಸ್ಟ್ ದೀಪಗಳನ್ನು ಅಳವಡಿಸಬೇಕು, ಅವುಗಳ ನಿರ್ವಹಣೆಯನ್ನು ಆಗಿಂದಾಗೆ ಮಾಡುವುದರ ಜೊತೆಗೆ ಬೆಳಕಿನ ಅಭಾವ ಆಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.ಮಲ್ಪೆ ಬೀಚ್ ಪ್ರದೇಶದಲ್ಲಿ ಜಲ ಸಾಹಸ ಚಟುವಟಿಕೆಗಳು ನಡೆಸುವಾಗ ಗುತ್ತಿಗೆದಾರರು ಬೋಟ್‌ನ ಸಾಮರ್ಥ್ಯ ಮೀರಿ ಹೆಚ್ಚಿನ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ದೂರುಗಳು ಬಂದಿದ್ದು, ಅಂಥವರ ಮೇಲೆ ದಂಡ ವಿಧಿಸುವಂತೆ ಸೂಚನೆ ನೀಡಿದರು.ಸಭೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭೆಯ ಸದಸ್ಯರಾದ ಯೋಗೀಶ್ ಸಾಲಿಯಾನ್, ಲಕ್ಷ್ಮಿ ಮಂಜುನಾಥ್ ಹಾಗೂ ವಿಜಯ ಕೊಡವೂರು, ಜಿಪಂ ಸಿಓಇ ಪ್ರತೀಕ್ ಬಾಯಲ್, ಎಸ್ಪಿ ಡಾ. ಅರುಣ್ ಕೆ, ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.