ಸಾರಾಂಶ
ಕೊಪ್ಪ: ನುಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಪ್ರದೇಶದಲ್ಲಿ ೧೫-೧೬ನೇ ಶತಮಾನಕ್ಕೆ ಸೇರಿದ ಐದು ಮಾಸ್ತಿಕಲ್ಲುಗಳು ಪತ್ತೆಯಾಗಿವೆ.
ಕೊಪ್ಪ: ನುಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಪ್ರದೇಶದಲ್ಲಿ ೧೫-೧೬ನೇ ಶತಮಾನಕ್ಕೆ ಸೇರಿದ ಐದು ಮಾಸ್ತಿಕಲ್ಲುಗಳು ಪತ್ತೆಯಾಗಿವೆ.
ಪಿಡಿಒ ಪ್ರದೀಪ್ ಎಸ್. ತಮ್ಮ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಈ ಐದು ಮಾಸ್ತಿಕಲ್ಲುಗಳನ್ನು ಪತ್ತೆಮಾಡಿದ್ದು ಇದರ ಅಧ್ಯಯನವನ್ನು ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ನ. ಸುರೇಶ ಕಲ್ಕೆರೆ ಮಾಡಿದ್ದಾರೆ. ಸುಮಾರು ಎರಡುವರೆ ಅಡಿ ಅಗಲ, ಮೂರುವರೆ ಅಡಿ ಎತ್ತರ ಹೊಂದಿವೆ. ನಾಲ್ಕು ಮಾಸ್ತಿಕಲ್ಲು ಗಳು ಒಂದೇ ತೆರನಾಗಿದ್ದು, ಒಂದು ಮಾತ್ರ ಇವುಗಳಿಗಿಂತ ಭಿನ್ನವಾಗಿರುವುದು ಅಧ್ಯಯನದಿಂದ ತಿಳಿದು ಬಂದಿದೆ.ನಾಲ್ಕು ಮಾಸ್ತಿಕಲ್ಲುಗಳಲ್ಲಿ ಸತಿ ಪತಿಗಳ ಉಬ್ಬು ಕೆತ್ತನೆಯಿದ್ದು, ಎರಡು ವೀರಗಲ್ಲುಗಳಲ್ಲಿ ಕೀರ್ತಿಮುಖದ ಕೆತ್ತನೆಯೊಂದಿಗೆ ಗಜಗಳು ಶಿವಲಿಂಗಕ್ಕೆ ನಮಸ್ಕರಿಸುವ ಕೆತ್ತನೆಯಿದೆ. ಹಾಗೆಯೇ ಒಂದು ಕೈಯಲ್ಲಿ ಲಿಂಬೆ ಹಿಡಿದಿರುವಂತೆ ತೋರಿಸಿದ್ದು ಇದರ ಜೊತೆಗೆ ಪುಷ್ಪದ ಕೆತ್ತನೆ ಮಾಡಲಾಗಿದೆ. ಇನ್ನೊಂದು ಮಾಸ್ತಿಗಲ್ಲು ಮೂರು ಪಟ್ಟಿಕೆ ಹೊಂದಿದ್ದು ಕೆಳಭಾಗದಲ್ಲಿ ಬಿಲ್ಲು,ಬಾಣ ಕತ್ತಿ, ಗುರಾಣಿ ಹಿಡಿದು ಯುದ್ಧ ಮಾಡುವ ದೃಶ್ಯ ತೋರಿಸಲಾಗಿದೆ. ಎರಡನೇ ಪಟ್ಟಿಕೆಯಲ್ಲಿ ಮರಣ ಹೊಂದಿದ ಪತಿ ಜೊತೆ ಸತಿ ಕೆತ್ತನೆಯಿದೆ.
ಮೇಲಿನ ಪಟ್ಟಿಕೆಯಲ್ಲಿ ಗಜಗಳು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ಕೆತ್ತನೆ ಇದೆ ಹಾಗೂ ಅದರ ಮೇಲೆ ಕೀರ್ತಿ ಮುಖದ ಕೆತ್ತನೆ ಇದೆ. ಭೂಮಿಯಲ್ಲಿ ಹುದುಗಿ ಹೋಗಿದ್ದ ಈ ಮಾಸ್ತಿಕಲ್ಲುಗಳನ್ನು ಪ್ರದೀಪ್ ಸ್ಥಳೀಯರ ಸಹಕಾರದಿಂದ ಸ್ವಚ್ಛಗೊಳಿಸಿದ್ದು, ಸ್ಥಳೀಯರು ಇದನ್ನು ಪೂಜಿಸಿ ಹಾಗೂ ಸಂರಕ್ಷಿಸಿಕೊಂಡು ಬಂದಿರುವುದು ಶ್ಲಾಘನೀಯ. ಈ ಮಾಸ್ತಿಕಲ್ಲುಗಳ ಹೆಚ್ಚಿನ ಅಧ್ಯಯನ ವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ತಿಳಿಸಿರುತ್ತಾರೆ.