ಸಾರಾಂಶ
ಪುಸ್ತಕಾವಲೋಕನ ಮತ್ತು ಸಂವಾದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕಾರಟಗಿ
ಬತ್ತದ ಕಣಜದ ನಮ್ಮ ಹಳ್ಳಿಗಳ ರೈತರ, ಸಾಮಾನ್ಯರ ಜೀವನ, ತಲ್ಲಣ, ಸಾಮಾಜಿಕ ಮತ್ತು ರಾಜಕೀಯ ಪ್ರಭಾವ ಆಗು ಹೋಗುವ ಘಟನೆಗಳು ಹೀಗೆ ಕಥೆಗಳಿಗೆ ಸಾಕಷ್ಟು ಪೂರಕ ವಸ್ತು ಸಿಗುತ್ತವೆ. ಕಥೆಗಾರರು ಇಂಥ ರೂಪಗಳನ್ನು ತಮ್ಮ ಅಕ್ಷರ ರೂಪದಲ್ಲಿ ಓದುಗರಿಗೆ ಬುತ್ತಿ ಕಟ್ಟಬೇಕಾಗಿದೆ ಎಂದು ಯುವ ಕಥೆಗಾರ ಆನಂದ ಗೊಬ್ಬಿ ಹೇಳಿದರು.ಇಲ್ಲಿನ ಕೆಪಿಎಸ್ ಕಾಲೇಜು ಸಭಾಂಗಣದಲ್ಲಿ ಸ್ಪಂದನ ಓದು ಹೊತ್ತಿಗೆ ಬಳಗ ಭಾನುವಾರ ಆಯೋಜಿಸಿದ್ದ ಪುಸ್ತಕಾವಲೋಕನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರದ ಅಂತಿಮ ಸುತ್ತಿಗೆ ಹೋಗಿದ್ದ ಕಥೆಗಾರ ನಾಗರಾಜ ಕೋರಿ ಅವರ ಕಳವಳದ ದೀವಿಗೆ ಕಥಾ ಸಂಕಲನ ಅವಲೋಕಿಸಿ ಮಾತನಾಡಿದರು.
ನಾಗರಾಜ ಕೋರಿ ಅವರ ಕತೆಗಳು ವಾಸ್ತವಕ್ಕೆ ಹತ್ತಿರವಾಗಿವೆ. ಸಾಮಾಜಿಕ ಹಿಂಸೆ, ಪ್ರಕ್ಷುಬ್ಧತೆ, ದೇವರು, ದೆವ್ಚದ ಬಗ್ಗೆ, ಮನುಷ್ಯನ ಒಳಿತು-ಕೆಡಕುಗಳ ಬಗ್ಗೆ ಮಾತನಾಡುತ್ತವೆ. ಶ್ರಮಿಕರು ದೇವರು-ಧರ್ಮವನ್ನು ತೆಗೆದುಕೊಳ್ಳುವ ಪರಿ, ಹೊಟ್ಟೆ ತುಂಬಿದವರು ಅದನ್ನು ಪರಿಭಾವಿಸುವ ರೀತಿಯನ್ನು ಪರಿಚಯಿಸುತ್ತವೆ ಎಂದರು.ಕವಿ ಚನ್ನಬಸಪ್ಪ ಆಸ್ಪರಿ ಮಾತನಾಡಿ, ನಾಗರಾಜ ಅವರ ಕತೆಗಳು ಓದುವ ಸುಖ ನೀಡುತ್ತವೆ. ಬಹುತೇಕ ಪಾತ್ರಗಳು ಸಮಕಾಲಿನ ಜಗತ್ತಿನಲ್ಲಿ ನಡೆಯುತ್ತಿರುವ ಕೋಮು ಕೇಂದ್ರಿತ ಗದ್ದಲದಲ್ಲಿ ಕೂಡಿ ಬಾಳುವುದನ್ನು, ಕಳೆದುಕೊಂಡಿದ್ದರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತವೆ ಎಂದರು.
ಓದು ಹೊತ್ತಿಗೆ ಬಳಗದ ಸಂಚಾಲಕ ಸಾಹಿತಿ ರಮೇಶ್ ಬನ್ನಿಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ನಂತರ ಕತೆಗಾರರೊಂದಿಗೆ ನಡೆದ ಸಂವಾದದಲ್ಲಿ ಪತ್ರಕರ್ತ ಟಿ.ಎಸ್. ಗೊರವರ, ಸ್ನೇಹ ಬುಕ್ ಹೌಸ್ ಮಾಲೀಕ ನಿಜಗುಣಯ್ಯಸ್ವಾಮಿ ಗಣಾಚಾರಿ, ಖಜಾನೆ ಇಲಾಖೆ ಅಧಿಕಾರಿ ಹನುಮಂತಪ್ಪ ನಾಯಕ, ಕೃಷ್ಣ ಸೆಳೆಕೆ, ವಿರುಪಾಕ್ಷಿ ದೇಶನೂರು, ಗಂಗಾಧರ ಪೂಜಾರ, ಜಗದೀಶ ಈಡಿಗೇರ, ಮಹಾಂತೇಶ, ಡಾ. ಹನುಮಂತಪ್ಪ ಅಭಿಪ್ರಾಯ ಹಂಚಿಕೊಂಡರು.
ಶಿವರಾಜಕುಮಾರ್, ಮಂಜುನಾಥ್ ಚಿಕೇನಕೊಪ್ಪ, ಎನ್. ಮಾರುತಿ ಮತ್ತು ಅಶೋಕ ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರು.