₹ 90.49 ಲಕ್ಷ ಮೌಲ್ಯದ ವಸ್ತು ವಶ

| Published : Mar 29 2024, 12:56 AM IST

ಸಾರಾಂಶ

ಧಾರವಾಡ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ತಪಾಸಣಾ ಕೇಂದ್ರದಲ್ಲಿ ಮಾ. 16ರಿಂದ ಮಾ. 28ರ ವರೆಗೆ ನಗದು ಹಣ, ವಸ್ತುಗಳು ಸೇರಿದಂತೆ ಒಟ್ಟು 90.49 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 47 ಪ್ರಕರಣ ದಾಖಲಿಸಲಾಗಿದೆ.

ಧಾರವಾಡ:

ಧಾರವಾಡ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ತಪಾಸಣಾ ಕೇಂದ್ರದಲ್ಲಿ ಮಾ. 16ರಿಂದ ಮಾ. 28ರ ವರೆಗೆ ನಗದು ಹಣ, ವಸ್ತುಗಳು ಸೇರಿದಂತೆ ಒಟ್ಟು ₹ 90.49 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 47 ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಚುನಾವಣಾ ಆಯೋಗ ಲೋಕಸಭೆ ಸಾರ್ವತ್ರಿಕ ಚುನಾವಣೆ ಘೋಷಣೆ ಮಾಡಿದ ಮಾ. 16ರಂದು ಜಿಲ್ಲೆಯ ಗಡಿ ಭಾಗ ಮತ್ತು ಜಿಲ್ಲೆಯ ಅಂತರ ವಿಧಾನಸಭಾ ಮತಕ್ಷೇತ್ರಗಳ ಮುಖ್ಯ ಸ್ಥಳಗಳು ಸೇರಿದಂತೆ ಒಟ್ಟು 24 ಚೆಕ್‌ ಪೋಸ್ಟ್‌ ತೆರೆಯಲಾಗಿದೆ. ಪ್ರತಿಯೊಂದರಲ್ಲಿ ನಿತ್ಯ ಸಂಚರಿಸುವ ಪ್ರತಿ ವಾಹನಗಳನ್ನು ಪರಿಣಾಮಕಾರಿಯಾಗಿ ತಪಾಸಣೆ ಮಾಡಲಾಗುತ್ತಿದೆ. ಸರಿಯಾದ ದಾಖಲೆಗಳಿಲ್ಲದೇ ಮತ್ತು ಚುನಾವಣಾ ಅಕ್ರಮಗಳಿಗೆ ಬಳಸಬಹುದಾದ ಸಂಶಯದ ಆಧಾರದಲ್ಲಿ ಪತ್ತೆಯಾದ ₹ 11.02 ಲಕ್ಷ ನಗದು, ₹ 3.31 ಲಕ್ಷ ಮೊತ್ತದ 788.190 ಲೀಟರ್ ಮದ್ಯ, ₹ 8.09 ಮೊತ್ತದ ಡ್ರಗ್ಸ್, ₹ 38.50 ಮೊತ್ತದ ಬಂಗಾರದ ಆಭರಣ ಮತ್ತು ₹ 29.56 ಲಕ್ಷ ಮೌಲ್ಯದ ಮಿಕ್ಸರ್, ಸೀರೆ, ಪ್ಯಾಂಟ್ ಪೀಸ್ ಸೇರಿದಂತೆ ವಿವಿಧ ರೀತಿಯ ಉಚಿತ ಕೊಡುಗೆಗಳ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದರು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಎಫ್.ಎಸ್.ಟಿ ಒಂದು ಪ್ರಕರಣ, ಎಸ್.ಎಸ್.ಟಿ. ಐದು ಪ್ರಕರಣ ಹಾಗೂ ಅಬಕಾರಿ ಕಾನೂನು ಉಲ್ಲಂಘನೆಯಡಿ 41 ಪ್ರಕರಣ ಸೇರಿ ಒಟ್ಟು 47 ಪ್ರಕರಣ ದಾಖಲಾಗಿವೆ. ಪ್ರತಿ ಕೇಂದ್ರದಲ್ಲಿ ಮ್ಯಾಜಿಸ್ಟ್ರೇಟ್ ಅಧಿಕಾರಿಯ ನೇತೃತ್ವದಲ್ಲಿ ಪೊಲೀಸ್, ವಾಣಿಜ್ಯ, ಅಬಕಾರಿ ಇಲಾಖೆಗಳ ಸಿಬ್ಬಂದಿ ಮತ್ತು ಒರ್ವ ವಿಡಿಯೋಗ್ರಾಫರ್ ತಂಡವಿದೆ. ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವಂತೆ ಕ್ರಮಕೈಗೊಳ್ಳಲಾಗಿದೆ. ಒಟ್ಟಾರೆ ಮಾ. 16ರಿಂದ ಈ ವರೆಗೆ ಜಿಲ್ಲೆಯ 24 ತಪಾಸಣಾ ಕೇಂದ್ರದಲ್ಲಿ 87 ಸಾವಿರ ವಿವಿಧ ರೀತಿಯ ವಾಹನ ತಪಾಸಣೆ ಮಾಡಲಾಗಿದ್ದು, 47 ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.