ಸಾರಾಂಶ
ಪರಿಸರ ವಿಜ್ಞಾನದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರ ಹೆಚ್ಚು ಸಹಾಯಕವಾಗಿದೆ. ಪ್ರಸ್ತುತ ತಂತ್ರಜ್ಞಾನದ ಸಹಾಯದಿಂದ ಗಣಿತ ವಿಶ್ಲೇಷಣೆಯಿಂದ ಇಂದು ಹವಾಮಾನದ ವೈಪರೀತ್ಯದ ಕುರಿತು ನಿಖರವಾಗಿ ಹೇಳಲು ಸಾಧ್ಯವಾಗಿದೆ.
ಧಾರವಾಡ: ನಿಖರ ಮಾಹಿತಿಯನ್ನು ಅರಿಯಲು ಗಣಿತಶಾಸ್ತ್ರ ವಿಶ್ಲೇಷಣೆ ಹೆಚ್ಚು ಉಪಯುಕ್ತ ಎಂದು ಬೆಂಗಳೂರು ವಿಮಾನ ನಿಲ್ದಾಣದ ಹವಾಮಾನ ಕೇಂದ್ರದ ನಿರ್ದೇಶಕ ಚೆನ್ನಬಸನಗೌಡ ಪಾಟೀಲ ಹೇಳಿದರು.
ಕರ್ನಾಟಕ ವಿವಿ ಗಣಿತಶಾಸ್ತ್ರ ವಿಭಾಗ ಮತ್ತು ಪಾವಟೆ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕಲ್ ಸೈನ್ಸ್ ಇವುಗಳ ಸಹಯೋಗದಲ್ಲಿ ಸೆನೆಟ್ ಸಭಾಂಗಣದಲ್ಲಿ ಗಣಿತಾತ್ಮಕ ವಿಶ್ಲೇಷಣೆ ಮತ್ತು ಮಾಹಿತಿ ತಂತ್ರಜ್ಞಾನದ ಅನುಷ್ಠಾನ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಭಾಷಣ ಮಾಡಿದ ಅವರು, ಹವಾಮಾನದ ವಿಶ್ಲೇಷಣೆಯಲ್ಲಿ ಗಣಿತ ತನ್ನದೇ ಆದ ಪಾತ್ರ ವಹಿಸಿದೆ. ಗಣಿತ ಕೇವಲ ಕಲಿಕೆಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ಗಣಿತಶಾಸ್ತ್ರವು ಸಂಖ್ಯಾಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಭೌತಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಸ್ತುತ ಕೃತಕ ಬುದ್ಧಿಮತ್ತೆ ಹಾಗೂ ಡಾಟಾ ವಿಶ್ಲೇಷಣೆಯಲ್ಲೂ ಹೆಚ್ಚು ಪ್ರಸ್ತುತತೆ ಪಡೆದಿದೆ. ಪರಿಸರ ವಿಜ್ಞಾನದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರ ಹೆಚ್ಚು ಸಹಾಯಕವಾಗಿದೆ. ಪ್ರಸ್ತುತ ತಂತ್ರಜ್ಞಾನದ ಸಹಾಯದಿಂದ ಗಣಿತ ವಿಶ್ಲೇಷಣೆಯಿಂದ ಇಂದು ಹವಾಮಾನದ ವೈಪರೀತ್ಯದ ಕುರಿತು ನಿಖರವಾಗಿ ಹೇಳಲು ಸಾಧ್ಯವಾಗಿದೆ ಎಂದ ಅವರು, ಎಲ್ಲಾ ಕಾರ್ಪೊರೇಟ್ ಕ್ಷೇತ್ರದಲ್ಲಿ ಗಣಿತ ಹೆಚ್ಚು ಮಹತ್ವ ಪಡೆದಿದೆ ಎಂದರು.ಕರ್ನಾಟಕ ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ ಮಾತನಾಡಿ, ತಂತ್ರಜ್ಞಾನವು ಕಲಿಕೆಗೆ ಹೆಚ್ಚು ಪೂರಕವಾಗಿದೆ. ತಂತ್ರಜ್ಞಾನದ ಕ್ರಾಂತಿಯಿಂದ ವಿಶ್ಲೇಷಣಾ ಕ್ಷೇತ್ರ ವಿಸ್ತಾರಗೊಂಡಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಜತೆಗೆ ಪೂರಕವಾದ ತಂತ್ರಜ್ಞಾನ ಕಲಿಕೆ ಹೆಚ್ಚು ಗಮನ ನೀಡಬೇಕು ಎಂದರು.
ತುಮಕೂರು ವಿವಿ ಗಣಿತ ಪ್ರಾಧ್ಯಾಪಕ ಪ್ರೊ. ಚಲುವರಾಜು ಬಿ, ಬೆಂಗಳೂರು ವಿವಿ ಗಣಿತಶಾಸ್ತ್ರದ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು. ಕವಿವಿ ಗಣಿತಶಾಸ್ತ್ರ ಅಧ್ಯಯನದ ಮುಖ್ಯಸ್ಥ ಡಾ. ಎಸ್.ಸಿ. ಶಿರಾಳಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ವಿಚಾರ ಸಂಕಿರಣದಲ್ಲಿ 400 ವಿದ್ಯಾರ್ಥಿಗಳು, ಸಂಶೋಧಕರು, ಮತ್ತು ಪ್ರಾಧ್ಯಾಪಕರು ಭಾಗವಹಿಸಿದ್ದು, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 145 ಸಂಶೋಧನಾ ಲೇಖನಗಳನ್ನು ಪ್ರಸ್ತುತಪಡಿಸಲಾಯಿತು.