ವಿದ್ಯಾರ್ಥಿಗಳು ಗಣಿತದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು. ಅದು ಸೃಜನಶೀಲತೆಯನ್ನು ಬೆಳೆಸುವುದಲ್ಲದೆ ಹೊಸ ಹೊಸ ಪ್ರಯೋಗಗಳಿಗೆ, ಸಂಶೋಧನೆಗೆ ಪ್ರೇರೇಪಿಸುತ್ತದೆ. ಹೊಸ ವಿಷಯಗಳ ಕುರಿತಂತೆ ಕುತೂಹಲ ಕೆರಳಿಸುತ್ತದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಗಣಿತವು ಚಿಂತನೆಗೆ ಹೊಸ ದಿಕ್ಕನ್ನು ನೀಡುತ್ತದೆ. ಗಣಿತವಿಲ್ಲದ ಯಾವುದೇ ಅಧ್ಯಯನ ಅಪೂರ್ಣ. ಜೀವನದ ಪ್ರತಿಯೊಂದು ಹಂತದಲ್ಲೂ ಗಣಿತಕ್ಕೆ ಪ್ರಾಮುಖ್ಯತೆ ಇದೆ ಎಂದು ಶಿಕ್ಷಣಾಧಿಕಾರಿ ಚಂದ್ರಕಾಂತ ತಿಳಿಸಿದರು.ನಗರದ ಕಾರ್ಮೆಲ್ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ವಿಜೃಂಭಣೆಯ ಗಣಿತ-ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಗಣಿತದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು. ಅದು ಸೃಜನಶೀಲತೆಯನ್ನು ಬೆಳೆಸುವುದಲ್ಲದೆ ಹೊಸ ಹೊಸ ಪ್ರಯೋಗಗಳಿಗೆ, ಸಂಶೋಧನೆಗೆ ಪ್ರೇರೇಪಿಸುತ್ತದೆ. ಹೊಸ ವಿಷಯಗಳ ಕುರಿತಂತೆ ಕುತೂಹಲ ಕೆರಳಿಸುತ್ತದೆ ಎಂದರು.
ಕಾರ್ಮೆಲ್ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕಿ ಸಿಸ್ಟರ್ ಡಾ.ಅಶ್ವಿನಿ ಅವರು ಮಾತನಾಡಿ, ಗಣಿತವು ಜೀವನ ಶೈಲಿಯಾಗಬೇಕು. ಅದು ಶಿಸ್ತಿನ ಜೀವನಕ್ಕೆ ಭದ್ರ ಅಡಿಪಾಯವಾಗಿದ್ದು, ತಾರ್ಕಿಕ ಚಿಂತನೆಗೆ ಅವಕಾಶ ನೀಡುತ್ತದೆ ಎಂದು ಹೇಳಿದರು.ಈ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಶಾಲೆಯ ವಿವಿಧ ತರಗತಿಗಳ ೪೫೨ ಉತ್ಸಾಹಭರಿತ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಕಾರ್ಮೆಲ್ ಗಣಿತ ಶಿಕ್ಷಕ ಸಂಗೀತ್‌ರಾಜ್ ನುಡಿದರು. ಭಾರತದ ಮಹಾನ್ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಗಣಿತಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು. ಜೊತೆಗೆ, ಪ್ರತಿವರ್ಷವೂ ವಿದ್ಯಾರ್ಥಿಗಳಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳ ಕುರಿತು ಆಸಕ್ತಿ ಮೂಡಿಸುವ ಉದ್ದೇಶದಿಂದ ಕಾರ್ಮೆಲ್ ಗಣಿತ-ವಿಜ್ಞಾನ ಸಂಘವು ನಡೆಸುತ್ತಿರುವ ರಸಪ್ರಶ್ನೆಗಳು, ವಸ್ತು ಪ್ರದರ್ಶನಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ಮೂಲಕ ನೀಡಲಾಗುವ ವೈಜ್ಞಾನಿಕ ತಿಳುವಳಿಕೆ ಕುರಿತು ವಿವರಿಸಿದರು.ಗಣಿತ ಶಿಕ್ಷಕಿ ಜ್ಯೋತಿ ಅವರು ಅತಿಥಿಗಳು ಹಾಗೂ ಸಭಿಕರನ್ನು ಸ್ವಾಗತಿಸಿದರು. ಉದ್ಘಾಟನೆಯನ್ನು ಶೂನ್ಯದಿಂದ ಅನಂತದವರೆಗೆ ಎಂಬ ಅರ್ಥಪೂರ್ಣ ಸಂಕೇತವನ್ನು ಸಾರುವಂತೆ, ವ್ಯಾಕ್ಸ್ ಲೇಪಿತ ಬೋರ್ಡ್ ಒರೆಸುವ ಮೂಲಕ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ಸಿರ್ಸ್ಟ ರೋಸ್, ಕಾರ್ಮೆಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಪೌಲಿನ್ ಉಪಸ್ಥಿತರಿದ್ದರು. ಗಣಿತ ಶಿಕ್ಷಕಿ ಶ್ರುತಿ ವಂದಿಸಿದರು.ವಸ್ತು ಪ್ರದರ್ಶನದಲ್ಲಿರಿಸಿದ ಗಣಿತ-ವಿಜ್ಞಾನ ಮಾದರಿಗಳನ್ನು ಕಾರ್ಮೆಲ್ ವಿದ್ಯಾ ಸಂಸ್ಥೆಯ ವಿವಿಧ ವಿಭಾಗಗಳಾದ ಕಾಲೇಜು, ಐಸಿಎಸ್ಸಿ ಹಾಗೂ ಕಾರ್ಮೆಲ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವೀಕ್ಷಿಸಿ ಶೈಕ್ಷಣಿಕ ಲಾಭ ಪಡೆದರು.