ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಕರ್ನಾಟಕದ ಮಠಗಳು ಸಮಾಜಕ್ಕೆ ಸನ್ಮಾರ್ಗ ತೋರುವ ಜೀವಂತ ಶಿಲ್ಪಿಗಳಾಗಿವೆ. ಸತ್ಯ ಶುದ್ಧ, ಕಾಯಕದ ಮೂಲಕ ಸರಳತೆ ಮತ್ತು ಸಹಜತೆಯಿಂದ ಎಲ್ಲರನ್ನೂ ಅಪ್ಪಿಕೊಳ್ಳುವ ಗುಣಗಳನ್ನು ಹೊಂದುವ ಮೂಲಕ ನಾಡಿನ ಮಠಗಳು ಜ್ಯೋರ್ತಿಲಿಂಗಗಳಾಗಿವೆ ಎಂದು ಶಿರಸಿ ಬಣ್ಣದಮಠದ ಅಟವಿ ಶಿವಲಿಂಗ ಸ್ವಾಮೀಜಿ ಹೇಳಿದರು.ನಗರದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿರುವ ಲಿಂ. ಶಿವಬಸವ ಸ್ವಾಮಿಗಳ ೭೮ನೇ ಮತ್ತು ಲಿಂ.ಶಿವಲಿಂಗ ಸ್ವಾಮೀಜಿಗಳ ೧೫ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ನಮ್ಮೂರ ಜಾತ್ರೆಯ ಮೊದಲನೇ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಪಸ್ಸಿನ ಶಕ್ತಿಯ ಮೂಲಕ ಗಳಿಸಿದ ಶಿವಯೋಗ ಶಕ್ತಿಯನ್ನು ಭಕ್ತರ ಉದ್ಧಾರಕ್ಕಾಗಿ ಧಾರೆಯೆರೆದು ಅವರನ್ನು ಆಧ್ಯಾತ್ಮಿಕವಾಗಿ ಶ್ರೀಮಂತಗೊಳಿಸಿ ಆ ಮೂಲಕ ಸಮಷ್ಠಿಯ ಹಿತವನ್ನು ಸಾಮಾಜೀಕರಣಗೊಳಿಸಿದ ಕೀರ್ತಿ ಹುಕ್ಕೇರಿಮಠದ ಉಭಯ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದರು.ಸಮ್ಮುಖ ವಹಿಸಿದ್ದ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ತನು, ಮನ, ಭಾವ ಶುದ್ಧಿಯಿಂದ ಮಾಡಿದ ಕಾಯಕವು ಸದಾ ಸ್ಮರಣೀಯವಾಗಿರುತ್ತದೆ. ಅನ್ನ, ಅರಿವು, ದಾಸೋಹಗಳು ಶರಣ ಸಂಸ್ಕೃತಿಯ ಸಾಕ್ಷಿ ಪ್ರಜ್ಞೆಗಳು. ಅಂತಹ ಕಾಯಕ ಮಾಡಿದವರು ಬಸವಾದಿ ಶಿವಶರಣರು. ಮಠಗಳು ಅವರ ದಾರಿಯಲ್ಲಿಯೇ ಸಾಗಿ ಸಮಾಜಕ್ಕೆ ಸಂಜೀವಿನಿಯಾಗಬೇಕು. ಅಂತಹ ದಾಸೋಹ ಪರಂಪರೆಯು ಶ್ರೀ ಹುಕ್ಕೇರಿ ಮಠದ್ದಾಗಿದೆ ಎಂದು ಹೇಳಿದರು.
ಕರುನಾಡು ಕಾಯಕ ಪ್ರಶಸ್ತಿ ಪುರಸ್ಕೃತೆ ರೇಖಾ ಅಂತಾಪುರ ಮಾತನಾಡಿ, ಆದರ್ಶವಿಲ್ಲದ ಬದುಕು ಬರಡು, ಸಾಧನೆ ಇಲ್ಲದ ಜೀವನ ನಿರರ್ಥಕ. ಸಾಧನೆಗೆ ಯಾವುದೇ ಅಡ್ಡಿ, ಆತಂಕಗಳು ನೆಪವಾಗಬಾರದು. ಮಠಗಳು ನೀಡುವ ಶಿಕ್ಷಣವು ನಮ್ಮನ್ನು ಸಾಧನೆಗೆ ಪ್ರೇರೇಪಿಸುತ್ತದೆ ಎಂದರು.ಇದೇ ಸಂದರ್ಭ ಶಿವಾಪುರದ ಅಡವಿಸಿದ್ದೇಶ್ವರಮಠದ ಅಡವಿ ಸಿದ್ಧರಾಮ ಸ್ವಾಮೀಜಿಗಳನ್ನು ಸನ್ಮಾನಿಸಲಾಯಿತು. ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ಕಲಾವಿದರು ಜಾನಪದ ಸಂಭ್ರಮ ಕಾರ್ಯಕ್ರಮ ನಡೆಸಿಕೊಟ್ಟರು. ಅಂತಾರಾಷ್ಟ್ರೀಯ ಯೋಗ ಪಟುಗಳಿಂದ ಯೋಗ ಪ್ರದರ್ಶನ ಬಡೆಯಿತು. ಹುಕ್ಕೇರಿಮಠದ ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಸಮಾರಂಭದಲ್ಲಿ ಹುಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಉತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ಕೂಡ್ಲಪ್ಪನವರ, ಗಿರಿಜಮ್ಮ ಹೂಗಾರ, ರಮೇಶ ಉಳ್ಳಟ್ಟಿ, ಅನ್ನಪೂರ್ಣ ಕೋಳಕೂರ, ಪರಶುರಾಮ ಹರ್ಲಾಪುರ, ಶರಣಬಸವ ಅಂಗಡಿ, ಶಿವಪುತ್ರಪ್ಪ ತುಪ್ಪದ, ಸುಮಾ ಪಲ್ಲೇದ, ಪಿ.ಡಿ. ಶಿರೂರ, ಶಿವಯೋಗಿ ಮಾಮಲೇ ಪಟ್ಟಣಶೆಟ್ಟರ, ಲಕ್ಷ್ಮೀಬಾಯಿ ಗಾಮನಗಟ್ಟಿ, ಕುರುಬೆಟ್ಟ ಹಿರೇಮಠ, ಕೆ. ಶಿವಪ್ಪ, ಆನಂದ ಅಟವಾಳಗಿ, ಕರಬಸಪ್ಪ ಹಲಗಣ್ಣನವರ, ಶಿವಯೋಗಿ ಹೂಲಿಕಂತಿಮಠ, ಮಹ್ಮದಜಾಫರ ಬ್ಯಾಡಗಿ, ಡಾ. ಬಸವರಾಜ ವೀರಾಪುರ ಇತರರು ಉಪಸ್ಥಿತರಿದ್ದರು.ವೀರಣ್ಣ ಅಂಗಡಿ ಸ್ವಾಗತಿಸಿದರು. ವೀರಬಸವ ದೇವರು ಮತ್ತು ಶಿವಬಸವ ಮರಳಿಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎನ್. ಮಳೆಪ್ಪನವರ ವಂದಿಸಿದರು.