ಅನಾರೋಗ್ಯಕ್ಕೊಳಗಾದರೂ ಲೆಕ್ಕಿಸದೆ, ಬಡವರ ಮನೆಯ ಮುದ್ದು ಮಕ್ಕಳ ಅನಾರೋಗ್ಯದ ಚಿಕಿತ್ಸೆಗಾಗಿ ಹಣ ಸಂಗ್ರಹಿಸುವ ಸಮಾಜ ಸೇವಕ ರವಿ ಕಟಪಾಡಿ ಮತ್ತೆ ಈ ಬಾರಿ ಕೃಷ್ಣಜನ್ಮಾಷ್ಟಮಿಯಂದು ವೇಷ ಹಾಕಲು ಸಿದ್ಧವಾಗುತ್ತಿದ್ದಾರೆ.

ಉಡುಪಿ: ಅನಾರೋಗ್ಯಕ್ಕೊಳಗಾದರೂ ಲೆಕ್ಕಿಸದೆ, ಬಡವರ ಮನೆಯ ಮುದ್ದು ಮಕ್ಕಳ ಅನಾರೋಗ್ಯದ ಚಿಕಿತ್ಸೆಗಾಗಿ ಹಣ ಸಂಗ್ರಹಿಸುವ ಸಮಾಜ ಸೇವಕ ರವಿ ಕಟಪಾಡಿ ಮತ್ತೆ ಈ ಬಾರಿ ಕೃಷ್ಣಜನ್ಮಾಷ್ಟಮಿಯಂದು ವೇಷ ಹಾಕಲು ಸಿದ್ಧವಾಗುತ್ತಿದ್ದಾರೆ.

ಕಳೆದ 10 ವರ್ಷಗಳಿಂದ ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ 2 ದಿನಗಳ ಚಿತ್ರವಿಚಿತ್ರ ಆದರೆ ಅತ್ಯಂತ ಕ್ಲಿಷ್ಟಕರವಾದ ವೇಷ ಹಾಕಿ, ಊರುಊರು, ಬೀದಿಬೀದಿ ಸುತ್ತಿ, ಜನರನ್ನು ರಂಜಿಸಿ, ಅವರು ನೀಡಿದ ಹಣವನ್ನು ಸಂಗ್ರಹಿಸಿ, ಅದನ್ನು ಅತ್ಯಂತ ಪಾರದರ್ಶಕವಾಗಿ ಬಡ ಕುಟುಂಬಗಳ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ದಾನ ಮಾಡುತ್ತಿದ್ದಾರೆ ರವಿ ಕಟಪಾಡಿ.ಕಟ್ಟಡ ಕಾರ್ಮಿಕನಾಗಿ ದಿನಗೂಲಿ ಮಾಡುವ ರವಿ ಕಳೆದ 10 ವರ್ಷಗಳಿಂದ ಈ ರೀತಿ ವೇಷ ಹಾಕಿ ಇದುವರೆಗೆ 1.85 ಕೋಟಿ ರು. ಸಂಗ್ರಹಿಸಿ, 204 ಅನಾರೋಗ್ಯ ಮಕ್ಕಳ ಚಿಕಿತ್ಸೆಗೆ ನೀಡಿದ್ದಾರೆ, ಆ ಮಕ್ಕಳ ಹೊಸ ಬದುಕಿಗೆ, ಅವರ ಕುಟುಂಬದ ಸಂತಸಕ್ಕೆ ಕಾರಣರಾಗಿದ್ದಾರೆ. ಎಷ್ಟೋ ಮನೆಗಳಲ್ಲಿ ರವಿ ಅವರ ಫೋಟೋ ಮನೆದೇವರ ಫೋಟೋಗಳ ಜೊತೆ ಇರುವುದೇ ಅವರ ನಿಸ್ವಾರ್ಥ ಸಾಧನೆಗೆ ಪುರಾವೆ !

ರವಿ ಈ ಬಾರಿ ಒಬ್ಬ ಹೃದ್ರೋಗಿ ಮತ್ತು ಇನ್ನೊಬ್ಬ ಕ್ಯಾನ್ಸರ್ ಪೀಡಿತ ಪುಟಾಣಿಗಳ ಚಿಕಿತ್ಸೆಗೆ ಸಹಾಯಾರ್ಥ ವೇಷ ಧರಿಸುತ್ತಿದ್ದಾರೆ, ಒಟ್ಟು 15 ಲಕ್ಷ ರು.ಗಳಾದರೂ ಸಂಗ್ರಹಿಸಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದಾರೆ ಮತ್ತು ಆ ಮೊತ್ತವನ್ನು ಸರ್ಕಾರಿ ಅಧಿಕಾರಿಗಳ ಕೈಯಿಂದ ಕಂದಮ್ಮಗಳಿಗೆ ಹಸ್ತಾಂತರಿಸಲಿದ್ದಾರೆ.ಪ್ರತಿಬಾರಿ ಹಾಲಿವುಡ್‌ನ ಫ್ಯಾಂಟಸಿ ಸಿನೆಮಾಗಳ ವಿಚಿತ್ರ ಪಾತ್ರಗಳನ್ನೇ ತನ್ನ ವೇಷಕ್ಕೆ ಆಯ್ಕೆ ಮಾಡಿಕೊಳ್ಳುವ ರವಿ, ಈ ಬಾರಿ ಕಾಲ್ಪನಿಕ ಪೌರಾಣಿಕಾ ಮರ್ಮೆನ್ ಸಿನೆಮಾದ ಸಮುದ್ರಜೀವಿ ಮರ್ಮೆನ್ (ಮತ್ಸ್ಯಪುರುಷ) ವೇಷ ಆರಿಸಿಕೊಂಡಿದ್ದಾರೆ. ಅವರು ಸ್ವತಃ ಮರ್ಮೆನ್ ಆಗಿ ಸೆ. 4ರಂದು ರಸ್ತೆಗಿಳಿಯಲಿದ್ದಾರೆ, ತಾವು ತಮಗಾಗಿ ಅಲ್ಲ, ಸಂಕಷ್ಟದಲ್ಲಿರುವ ನತದೃಷ್ಟ ಮಕ್ಕಳಿಗಾಗಿ ಈ ವೇಷ ಹಾಕುತ್ತಿದ್ದೇನೆ, ಜನರು ಕೊಟ್ಟ ಒಂದೊಂದು ರು.ಯನ್ನೂ ಈ ಇಬ್ಬರು ಮಕ್ಕಳಿಗೆ ನೀಡುತ್ತೇನೆ, ಇದು ನನ್ನ ಹಣ ಅಲ್ಲ, ಜನರ ಹಣ, ಇದರ ಪುಣ್ಯ ಕೂಡ ಹಣ ಕೊಟ್ಟ ಜನರದ್ದು, ಆದ್ದರಿಂದ ಜನರು ಉದಾರವಾಗಿ ಧನಸಹಾಯ ಮಾಡಬೇಕು ಎಂದವರು ಮನವಿ ಮಾಡಿದ್ದಾರೆ.ಇನ್ನು ಮುಂದೆ ವೇಷ ಹಾಕುವುದಿಲ್ಲ... !: ಅಂದಹಾಗೇ ಇದು ರವಿ ಅವರ ಕೊನೆಯ ವೇಷ, ಮುಂದಿನ ವರ್ಷದಿಂದ ಅವರು ಈ ರೀತಿ ವೇಷ ಹಾಕುವುದಿಲ್ಲ, ಕಾರಣ ಇಂತಹ ವೇಷಗಳನ್ನು ಹಾಕುವುದಕ್ಕೆ ಗಂಟೆಗಟ್ಟಲೇ ಮೇಕಪ್‌ಮೆನ್ ಮುಂದೆ ಕೂರಬೇಕಾಗುತ್ತದೆ, 2 ದಿನಗಳ ಕಾಲ ವೇಷ ತೆಗೆಯುವಂತಿಲ್ಲ, ಊಟ, ತಿಂಡಿ, ಸ್ನಾನ ಯಾವುದೂ ಮಾಡುವುದಕ್ಕಾಗುವುದಿಲ್ಲ, ಜೊತೆಗೆ ವೇಷಕ್ಕೆ ರಾಸಾಯನಿಕಗಳನ್ನು ಬಳಸಲಾಗುತ್ತದೆ, ನಂತರ ಶಿರದಿಂದ ಪಾದದವರೆಗೆ ವೇಷ ಕಳಚುವಾಗ, ಚರ್ಮ ಕಿತ್ತು ಗಾಯಗಳಾದ್ದೂ ಇದೆ, ನಂತರ ಸುಧಾರಿಸಿಕೊಳ್ಳುವುದಕ್ಕೆ ವಾರಗಟ್ಟಲೇ ಬೇಕಾಗುತ್ತದೆ, ಒಂದೆರಡು ಬಾರಿ ಆಸ್ಪತ್ರೆಗೆ ಹೋಗಿದ್ದೂ ಇದೆ, ವೇಷಗಳು ಈಗೀಗ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ, ಆದ್ದರಿಂದ ಇದು ಕೊನೆಯ ವೇಷ ಎಂದು ತೀರ್ಮಾನಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಆದರೂ ಬೇರೆ ರೀತಿಯಲ್ಲಿ ಮಕ್ಕಳಿಗೆ ಸಹಾಯ ಮಾಡುತ್ತೇನೆ ಎಂದೂ ಹೇಳಿದ್ದಾರೆ.