ಸಾರಾಂಶ
ಶಿರಹಟ್ಟಿ: ತಾಲೂಕಿನ ಕ್ಷೇತ್ರ ಶ್ರೀ ವರವಿ ಮೌನೇಶ್ವರರ ರಥೋತ್ಸವ ಶ್ರಾವಣ ಕಡೆ ಸೋಮವಾರದಂದು ಸಾವಿರಾರು ಭಕ್ತರ ಜಯಘೋಷ ಹಾಗೂ ವಾದ್ಯಮೇಳಗಳ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಆಗಾಗ್ಗೆ ಸುರಿದ ಮಳೆಯಲ್ಲಿಯೇ ಭಕ್ತ ಸಮೂಹ ತಂಡೋಪತಂಡವಾಗಿ ವರವಿ ಮೌನೇಶ್ವರ ರಥೋತ್ಸವದೆಡೆಗೆ ಧಾವಿಸಿ ಬರುತ್ತಿದ್ದರು. ಬಸ್ಸು, ಕಾರು, ಜೀಪು, ಚಕ್ಕಡಿ ಮತ್ತು ಆಟೋಗಳಲ್ಲದೇ ಶಕ್ತಿ ಯೋಜನೆ ಜಾರಿಯಿಂದಾಗಿ ಉಚಿತವಾಗಿ ಮಹಿಳೆಯರೆಲ್ಲ ಸರ್ಕಾರಿ ಬಸ್ ಏರಿ ಬರುತ್ತಿರುವುದು ಸಾಮಾನ್ಯವಾಗಿತ್ತು.
ಎಕ್ ಲಾಕ್ ಐಸಿ ಹಜಾರ್ ಪಾಚೋಪೀರ್ ಪೈಗಂಬರ್, ಹರಹರ ಮಹಾದೇವ ಎಂಬ ಮಂತ್ರಘೋಷಗಳು ಮೊಳಗಿದವು. ಭಾವೈಕ್ಯದ ಸಂಕೇತ ಸಾರುವ ಕೇಸರಿ ಮತ್ತು ಹಸಿರು ಸಂಕೇತದ ಧ್ವಜಗಳನ್ನು ಹಿಡಿದ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ತೂರಿ ಭಕ್ತಿಯ ಪರಾಕಾಷ್ಠೆ ಮೆರೆದರು. ಕಟ್ಟಡದ ಮೇಲೆ ಹಾಗೂ ಎತ್ತರದ ಪ್ರದೇಶದ ಮೇಲೆ ನಿಂತು ದೂರದಿಂದಲೇ ರಥೋತ್ಸವವನ್ನು ಕಣ್ಣು ತುಂಬಿಕೊಂಡರು.ಶಿರಹಟ್ಟಿ, ಸೊರಟೂರ, ಹಂಗನಕಟ್ಟಿ, ಜಲ್ಲಿಗೇರಿ, ಕಡಕೋಳ, ಕುಸ್ಲಾಪೂರ, ಗುಡ್ಡದಪೂರ ಸೇರಿದಂತೆ ಅನೇಕ ಹಳ್ಳಿಗಳಿಂದ ಅಸಂಖ್ಯಾತ ಭಕ್ತರು ಪಾದಯಾತ್ರೆಯ ಮೂಲಕ ಮೌನೇಶ್ವರ ರಥೋತ್ಸವಕ್ಕೆ ಧಾವಿಸಿದ್ದರು. ರಥವನ್ನು ದೇವಾಲಯದ ಪಶ್ಚಿಮ ದಿಕ್ಕಿನಿಂದ ಪೂರ್ವ ದಿಕ್ಕಿನ ತುದಿಯವರೆಗೆ ಸಾಯಂಕಾಲ ೫-೩೦ರಿಂದ ೬ರ ವರೆಗೆ ಎಳೆಯಲಾಯಿತು. ಇಳಿಹೊತ್ತು ಸೂರ್ಯ ಮುಳುಗುವ ಸಂದರ್ಭದಲ್ಲಿ ಸುಕ್ಷೇತ್ರದ ಆವರಣದಲ್ಲಿ ಅಪಾರ ಸಂಖ್ಯೆ ಭಕ್ತರು ಮೌನೇಶ್ವರರ ರಥೋತ್ಸವವನ್ನು ಕಣ್ತುಂತಿಬಿಕೊಳ್ಳುವ ಉತ್ಸುಕದಲ್ಲಿದ್ದರು. ಪೀಠಾಧಿಪತಿ ಮೌನೇಶ್ವರ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡುವುದೇ ತಡ, ಭಕ್ತವೃಂದ ಮೌನೇಶ್ವರ ಮಹಾರಾಜ ಕೀ ಜೈ ಎಂಬ ಮುಗಿಲು ಮುಟ್ಟುವ ಜಯಘೋಷ ಮಾಡುತ್ತಾ ರಥವನ್ನು ಎಳೆದು ಸಂಭ್ರಮಿಸಿದರು. ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತವೃಂದ ರಥವನ್ನು ಭಕ್ತಿ ಭಾವಗಳಿಂದ ಎಳೆದರು. ಭಕ್ತ ಸಮೂಹ ಬಾಳೆಹಣ್ಣು ಹಾಗೂ ಉತ್ತತ್ತಿಯನ್ನು ರಥದ ಮೇಲೆ ಎಸೆದು ತಮ್ಮ ಭಕ್ತಿಯ ಸಮರ್ಪಣೆ ಮಾಡಿ ಕೈಮುಗಿದು ನಮಿಸಿದರು. ಇಷ್ಠಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು. ಕರ್ನಾಟಕ ಮಾತ್ರವಲ್ಲ ನೆರೆಯ ಆಂಧ್ರ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದು ಕೃತಾರ್ಥರಾದರು. ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ, ದೇವರ ಕೃಪೆಯಿಂದ ನಾಡಿನ ಎಲ್ಲ ಜನರ ಬದುಕು ಹಸನಾಗಿರಲಿ, ಮಳೆ ಬೆಳೆ ಚನ್ನಾಗಿ ಬಂದು ಜನತೆಯ ಮನೆ ಮನ ಬೆಳಗುವಂತಾಗಲಿ ಎಂದು ಹರಸಿದರು. ಮಾನವ ತನ್ನ ಜೀವನದಲ್ಲಿ ಮೇಲು ಕೀಳು ಎಂಭ ಭೇದ ಭಾವ ಮರೆತು ಎಲ್ಲ ಧರ್ಮದ ತಿರುಳು ಒಂದೇ ಎಂಬುದನ್ನು ಅರಿತು, ಸನ್ಮಾರ್ಗದಲ್ಲಿ ನಡೆದಾಗಲೇ ಮಾನವನಾಗಿ ಹುಟ್ಟಿದ್ದಕ್ಕೂ ಸಾರ್ಥಕ ಎಂದು ನುಡಿದರು.ಹರಿದು ಬಂದ ಜನಸಾಗರ: ಈ ಬಾರಿ ಸರಿಯಾಗಿ ಮಳೆ ಬೆಳೆ ಚೆನ್ನಾಗಿ ಆಗಿದ್ದರಿಂದ ಜನಸಾಗರವೇ ಹರಿದು ಬಂದಿತ್ತು. ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಕ್ಷೇತ್ರ ಶ್ರೀ ವರವಿ ಮೌನೇಶ್ವರ ಜಾತ್ರೆಗೆ ಮಹಿಳೆಯರ ದಂಡೇ ಹರಿದು ಬಂದಿತ್ತು. ಎಲ್ಲಿ ನೋಡಿದರಲ್ಲಿ ಮಹಿಳೆಯರು, ಹೆಣ್ಣು ಮಕ್ಕಳ ದಂಡೇ ಕಂಡುಬರುತ್ತಿತ್ತು. ರಥೋತ್ಸದಲ್ಲಿ ಮಠದ ಟ್ರಸ್ಟ ಕಮಿಟಿ ಅಧ್ಯಕ್ಷ ಮೋಹನ್ ನರಗುಂದ, ಚಂದ್ರಕಾಂತ ಸೋನಾರ, ಮಹೇಶ ಹುಲಬಜಾರ, ಆರ್.ಡಿ. ಕಡ್ಲಿಕೊಪ್ಪ, ಈರಣ್ಣ ಬಡಿಗೇರ ಹಾಗೂ ಮಠದ ಅರ್ಚಕರು, ಜನಪ್ರತಿನಿಧಿಗಳು ಇದ್ದರು. ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಚನ್ನಯ್ಯ ದೇವೂರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.