ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂಘದ ವಾರ್ಷಿಕ ಮಹಾಸಭೆ ಮೇ ೧ರಂದು ಬೆಳಗ್ಗೆ ಬಪ್ಪಳಿಗೆಯಲ್ಲಿರುವ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಬಪ್ಪಳಿಗೆ ಜೈನ ಭವನದಲ್ಲಿ ನಡೆಯಲಿದೆ.ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಅವರಿಗೆ ‘ಸ್ವರ್ಣ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ತಿಳಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭವನ್ನು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್.ಭೈರಪ್ಪ ಉದ್ಘಾಟಿಸಲಿದ್ದಾರೆ. ತಾಲೂಕು ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದರು.ಸಾಧಕರಿಗೆ ಅಭಿನಂದನೆ: ದೆಹಲಿ ಗಣರಾಜ್ಯೋತ್ಸವದಲ್ಲಿ ಪ್ರಧಾನಮಂತ್ರಿ ರ‍್ಯಾಲಿಯಲ್ಲಿ, ದೆಹಲಿ ಕರ್ತವ್ಯಪಥ ರಾಜ್ಯೋತ್ಸವ ಪಥಸಂಚಲನದಲ್ಲಿ, ಗಣರಾಜ್ಯೋತ್ಸವ ಕರ್ತವ್ಯಪಥದಲ್ಲಿ, ಸಾಂಸ್ಕೃತಿಕ ವಿಭಾಗದಲ್ಲಿ ಪಾಲ್ಗೊಂಡ ಡಾ.ಸಾಜಿದಾಬಾನು, ಮಾ.ಸುಜಿತ್, ಲಹರಿ, ಶುಭದ ಆರ್. ಪ್ರಕಾಶ್, ಹಾರ್ದಿಕ್ ಎಚ್. ಶೆಟ್ಟಿ ಹಾಗೂ ದಿನೇಶ್ ಆಚಾರ್ಯ ಅವರನ್ನು ಅಭಿನಂದಿಸಲಾಗುವುದು. ಸಂಘದ ಶಾಶ್ವತ ನಿಧಿಗೆ ರೂ. ೨೫ ಸಾವಿರ ನೀಡಿದವರಿಗೆ ಗೌರವಾರ್ಪಣೆ, ೮೦ ವರ್ಷ ಮೇಲ್ಪಟ್ಟ ೧೧ ಮಂದಿ ಹಿರಿಯ ಸದಸ್ಯರಿಗೆ, ೮೫ ವರ್ಷ ಮೇಲ್ಪಟ್ಟ ೧೧ ಮಂದಿ ಹಿರಿಯ ಸದಸ್ಯರಿಗೆ, ೮೦ ವರ್ಷ ಪೂರೈಸಿದ ೧೮ ಮಂದಿ ಹಿರಿಯ ಸದಸ್ಯರಿಗೆ ಹಾಗೂ ೭೫ ವರ್ಷ ಪೂರ್ಣಗೊಳಿಸಿದ ೩೧ ಹಿರಿಯ ಸದಸ್ಯರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ತಿಳಿಸಿದರು.ಸುದ್ಧಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ತಿರುಮಲೇಶ್ವರ ಭಟ್, ಕೋಶಾಧಿಕಾರಿ ಬಿ.ಸೂರಪ್ಪ ಗೌಡ, ಉಪಾಧ್ಯಕ್ಷೆ ಪ್ರೊ.ಎಂ.ವತ್ಸಲಾರಾಜ್ಞಿ, ಸಂಘಟನಾ ಕಾರ್ಯದರ್ಶಿ ಬಿ.ಜಗನ್ನಾಥ ರೈ ಇದ್ದರು.