ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸಿದ್ದೇನೆ. ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆ ಬುದ್ದಿ ಕೊಡಲಿ. ಹಿಂದೂ ಶ್ರದ್ಧಾ ಕೇಂದ್ರ ಟಾರ್ಗೆಟ್ ಮಾಡುವ ಮನಸ್ಥಿತಿ ತೆಗೆದು ಹಾಕಲಿ. ಹಿಂದೂಗಳ ಭಾವನಗೆ ಧಕ್ಕೆ ತರದಂತೆ ಬುದ್ಧಿ ಕೊಡಲಿ ಎಂದು ಬೇಡಿದ್ದೇನೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.ಚಾಮುಂಡಿಬೆಟ್ಟಕ್ಕೆ ಭಾನುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ದೇವಾಲಯ ಹಿಂದೂಗಳು ದೇವಾಲಯ ಅಲ್ಲ ಎಂದಿದ್ದಾರೆ. ಹಿಂದೂಗಳದ್ದಲ್ಲ ಎಂದರೆ ಮತ್ಯಾರದ್ದು? ನಿಮಗೆ ಧೈರ್ಯ, ಗಂಡಸ್ತನ ಇದ್ರೆ ಮಸೀದಿ ಮುಂದೆ ನಿಂತು ಇದು ಮುಸ್ಲಿಮರದ್ದಲ್ಲ ಎಂದು ಹೇಳ್ತೀರಾ ಎಂದು ಪ್ರಶ್ನಿಸಿದರು.
ಪದೇ ಪದೇ ಹಿಂದೂ ದೇವಾಲಯಗಳ ಟಾರ್ಗೆಟ್ ಯಾಕೆ? ಚುನಾವಣೆ ಬಂದಾಗ ವೋಟ್ ಪಾಲಿಟಿಕ್ಸ್ ಮಾಡಿ. ಚುನಾವಣೆ ವೇಳೆ ಮುಸಲ್ಮಾನರ ಮೂಗಿಗೆ ತುಪ್ಪ ಸುರಿಯಿರಿ. ಆದರೆ, ಈಗ ಯಾಕೆ ವೋಟಿನ ಓಲೈಕೆ ರಾಜಕಾರಣ ಎಂದು ಅವರು ಕಿಡಿಕಾರಿದರು.ಸೆ.1 ರಂದು ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಎಲ್ಲಾ ಹಿಂದೂಗಳು ಬರಬೇಕು. ಚಾಮುಂಡಿಬೆಟ್ಟದ ಬಗ್ಗೆ ಪದೇ ಪದೇ ಮಾತನಾಡಿದ್ರೆ ಚಾಮುಂಡೇಶ್ವರಿ ಚಲೋ ಕೂಡ ಮಾಡ್ತೀವಿ. ಟೂಲ್ ಕಿಟ್ ಆಗಿ ಚಾಮುಂಡೇಶ್ವರಿ ದೇವಾಲಯ ಬಳಸಿದರೆ ಹಿಂದೂಗಳು ಸಹಿಸಲ್ಲ. ಚಾಮುಂಡೇಶ್ವರಿ ತಾಯಿಯಿಂದಾನೇ ಕಾಂಗ್ರೆಸ್ ಅವನತಿ ಪ್ರಾರಂಭವಾಗುತ್ತದೆ ಎಂದು ಅವರು ಎಚ್ಚರಿಸಿದರು.
ಬಾನು ಮುಷ್ತಾಕ್ ಕನ್ನಡಿಗರ ಕ್ಷಮೆ ಕೇಳಬೇಕು:ದಸರಾ ಉದ್ಘಾಟಕರಾಗಿ ಭಾನು ಮುಷ್ತಾಕ್ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್ ಅವರು, ಮುಷ್ತಾಕ್ ಇಲ್ಲ, ಯಾವಕ್ಕಾನೋ ಗೊತ್ತಿಲ್ಲ. ದಸರಾ ಸಾವಿರಾರು ವರ್ಷಗಳ ಸಂಪ್ರದಾಯ. ಇಲ್ಲಿ ಬರುವವರು ಚಾಮುಂಡೇಶ್ವರಿ ತಾಯಿ ಪೂಜಿಸುತ್ತಾರೆ. ಮೊದಲು ತಾಯಿಗೆ ಭಕ್ತಿ ಇದೆ ಎಂದು ಒಪ್ಪಿಕೊಳ್ಳಬೇಕು. ಕನ್ನಡವನ್ನ ಭುವನೇಶ್ವರಿ ಮಾಡಿದ್ದೀರಾ ಎಂದು ಬಾನು ಮಷ್ತಾಕ್ ಹೇಳಿದ್ದು. ಅರಿಶಿನ ಕುಂಕುಮ ಬಣ್ಣದ ಧ್ವಜ ಮಾಡಿದ್ದೀರಾ, ನಾವು ಭುವನೇಶ್ವರಿ ಒಪ್ಪಿಕೊಳ್ಳಲ್ಲ ಎಂದಿದ್ದರು.
ಭುವನೇಶ್ವರಿ ಒಪ್ಪದಿದ್ದ ಮೇಲೆ ಚಾಮುಂಡೇಶ್ವರಿ ಹೇಗೆ ಒಪ್ಪುತ್ತೀರಾ ಎಂದು ಪ್ರಶ್ನಿಸಿದರು.ಬಾನು ಮುಷ್ತಾಕ್ ಕನ್ನಡ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಬಾನು ಮುಷ್ತಾಕ್ ಕನ್ನಡಿಗರ ಕ್ಷಮೆ ಕೇಳಬೇಕು. ಆ ನಂತರ ದಸರಾ ಉದ್ಘಾಟನೆ ಬಗ್ಗೆ ನೋಡುವ. 6 ಕೋಟಿ ಹಿಂದೂಗಳಲ್ಲಿ ಒಬ್ಬ ಸಾಧಕ ಸಿಗೋದಿಲ್ವಾ? ಕನ್ನಡದ ಬಗ್ಗೆ ಅಗೌರವ ತೋರಿದವರನ್ನೇ ಕರೆಯಬೇಕಿತ್ತಾ? ನಿಸಾರ್ ಅಹಮದ್ ಧರ್ಮದ ವಿರೋಧಿಯಲ್ಲ, ಎಲ್ಲರನ್ನು ಗೌರವಿಸುತ್ತಾರೆ. ತಾಯಿಗೆ ನಿತ್ಯೋತ್ಸವ ಎಂದು ಬರೆದಿದ್ದಾರೆ. ಧ್ವಜದ ಬಗ್ಗೆ ಆಡಿರುವ ಮಾತಿನ ಬಗ್ಗೆ ಮುಷ್ತಾಕ್ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದರು.
ಧರ್ಮಸ್ಥಳ ಬಳಿಕ ದಸರಾ ಉದ್ಘಾಟನೆ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್ ಅವರು, ಒಂದು ಕೋಮುವನ್ನು ಸಂತೃಪ್ತಿ ಮಾಡಲು ಪ್ರಯತ್ನ. ಅಯ್ಯಪ್ಪ, ತಿರುಪತಿ ಈಗ ಧರ್ಮಸ್ಥಳ, ಮುಂದೆ ಚಾಮುಂಡೇಶ್ವರಿ ದೇವಾಲಯ. ಇದು ಕಾಂಗ್ರೆಸ್ ಸರ್ಕಾರದ ಟೂಲ್ ಕಿಟ್ ಎಂದು ಟೀಕಿಸಿದರು.ಇನ್ನೊಂದು ಗಲಭೆಗೆ ಸರ್ಕಾರವೇ ದಾರಿ ಮಾಡ್ತಿದೆ:
ನಾಗಮಂಗಲದಲ್ಲಿ ಮಸೀದಿ ಮುಂದೆ ಗಣೇಶ ಮೆರವಣಿಗೆಗೆ ಅವಕಾಶ ಕೊಡ್ತಿಲ್ಲ ಎಂದು ಹೇಳಿದ್ದವರ ವಿರುದ್ಧ ಎಫ್ಐಆರ್ ದಾಖಲು ವಿಚಾರಕ್ಕೆ ಆರ್. ಅಶೋಕ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಗಣೇಶನನ್ನೇ ಪೊಲೀಸ್ ಠಾಣೆಯಲ್ಲಿ ಇಟ್ಟಂತವರು. ಗಣೇಶೋತ್ಸವ ಮೆರವಣಿಗೆ ಅನುಮತಿ ಕೊಡುತ್ತಿಲ್ಲ. ಮಸೀದಿ ಮುಂದೆ ರಸ್ತೆ ಮಾಡಿರುವುದು ಸರ್ಕಾರ. ಉದ್ದೇಶಪೂರ್ವಕವಾಗಿ ಅನುಮತಿ ನಿರಾಕರಿಸುತ್ತಿದ್ದಾರೆ. ಮಾತನಾಡಿದರು ಎಂಬ ಕಾರಣಕ್ಕಾಗಿ ಇಬ್ಬರ ಮೇಲೆ ಎಫ್ಐಆರ್ ಆಗಿದೆ. ಇನ್ನೊಂದು ಗಲಭೆಗೆ ಸರ್ಕಾರವೇ ದಾರಿ ಮಾಡ್ತಿದೆ. ಹೀಗೆ ಮುಂದುವರೆದರೆ ದೇವರೆ ಶಿಕ್ಷೆ ಕೊಡುತ್ತಾರೆ ಎಂದು ಎಚ್ಚರಿಸಿದರು.