ಕ್ರಿಸ್‌ಮಸ್ ಶಾಂತಿ, ಪ್ರೀತಿ, ನೆಮ್ಮದಿ ಮೂಡಿಸಲಿ: ಬಿಷಪ್‌ ಸಂದೇಶ

| Published : Dec 22 2023, 01:30 AM IST

ಕ್ರಿಸ್‌ಮಸ್ ಶಾಂತಿ, ಪ್ರೀತಿ, ನೆಮ್ಮದಿ ಮೂಡಿಸಲಿ: ಬಿಷಪ್‌ ಸಂದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲು ಶಾಂತಿ ನಮ್ಮ ಹೃದಯದಲ್ಲಿ ಮೂಡಿ ಬರಬೇಕು. ಬಳಿಕ ಎಲ್ಲೆಡೆ ಪಸರಿಸಬೇಕು. ಮನುಷ್ಯರ ನಡುವೆ ಜಾತಿ, ಮತ, ಧರ್ಮವನ್ನು ಮೀರಿ ಪರಸ್ಪರ ಗೌರವದೊಂದಿಗೆ, ಶಾಂತಿ, ಪ್ರೀತಿಯೊಂದಿಗೆ ಬದುಕಬೇಕಾಗಿದೆ. ಈ ಜಗತ್ತನ್ನು ಸರ್ವ ಜನರ ಶಾಂತಿಯ ತೋಟವಾಗಿ ಪರಿವರ್ತಿಸಬೇಕಾಗಿದೆ ಎಂದು ಮಂಗಳೂರು ಬಿಷಪ್ ಪೀಟರ್ರ್‌ ಪೌಲ್ಲ್‌ ಸಲ್ದಾನ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕ್ರಿಸ್‌ಮಸ್ ಹಬ್ಬವು ಜನರಲ್ಲಿ ಶಾಂತಿ, ಪರಸ್ಪರ ಪ್ರೀತಿ ಮೂಡಿಸುವಂತಾಗಲಿ, ಹತಾಶೆಯಿಂದ ಕೂಡಿದ ಜನಸಮುದಾಯದ ನಡುವೆ ಭರವಸೆ ಮೂಡಿಸುವಂತಾಗಲಿ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಗುರು ಅತಿ.ವಂ. ಪೀಟರ್ ಪೌಲ್ ಸಲ್ದಾನ ಸಂದೇಶ ನೀಡಿದ್ದಾರೆ.

ನಗರದ ಬಿಷಪ್‌ಹೌಸ್‌ನಲ್ಲಿ ಗುರುವಾರ ಕ್ರಿಸ್‌ಮಸ್ ಪ್ರಯುಕ್ತ ಕೇಕ್‌ ಕತ್ತರಿಸಿ ಅವರು ಸಂದೇಶ ನೀಡಿದರು.

ಜಗತ್ತಿನಲ್ಲಿ ದ್ವೇಷ, ಧರ್ಮ- ಜಾತಿ ಆಧಾರಿತ ತಾರತಮ್ಯ, ಹಿಂಸೆ ತಾಂಡವವಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಯುದ್ಧ, ಸಾವು, ನೋವು ದುರ್ಘಟನೆಗಳೇ ಪ್ರಮುಖ ಸುದ್ದಿಗಳಾಗಿವೆ. ಮೂರನೇ ಜಾಗತಿಕ ಯುದ್ಧದ ಪರಿಸ್ಥಿತಿ ಕಾಣುತ್ತಿದೆ. ಆತ್ಮಹತ್ಯೆಗಳು ಏರಿಕೆಯಾಗುತ್ತಿವೆ. ಹತಾಶೆ, ನಿರಾಸೆಯೆಡೆಗೆ ನಾವೆಲ್ಲ ಮುಖ ಮಾಡಿದಂತೆ ಕಾಣುತ್ತಿದೆ. ಇಂಥ ಸಂದರ್ಭದಲ್ಲಿ ನಾವು ಯೇಸು ಕ್ರಿಸ್ತರ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೇವೆ. ಶೋಷಿತ ಸಮುದಾಯದ ಜನರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸಿದ ಏಸುಕ್ರಿಸ್ತರ ಜನ್ಮ ದಿನವಾದ ಕ್ರಿಸ್ಮಸ್ ಸಂದರ್ಭದಲ್ಲಿ ಜನರ ಮನದಲ್ಲಿ ಸಂತೋಷ ಹೆಚ್ಚುವಂತಾಗಲಿ ಎಂದು ಆಶಿಸಿದರು.

ಮೊದಲು ಶಾಂತಿ ನಮ್ಮ ಹೃದಯದಲ್ಲಿ ಮೂಡಿ ಬರಬೇಕು. ಬಳಿಕ ಎಲ್ಲೆಡೆ ಪಸರಿಸಬೇಕು. ಮನುಷ್ಯರ ನಡುವೆ ಜಾತಿ, ಮತ, ಧರ್ಮವನ್ನು ಮೀರಿ ಪರಸ್ಪರ ಗೌರವದೊಂದಿಗೆ, ಶಾಂತಿ, ಪ್ರೀತಿಯೊಂದಿಗೆ ಬದುಕಬೇಕಾಗಿದೆ. ಈ ಜಗತ್ತನ್ನು ಸರ್ವ ಜನರ ಶಾಂತಿಯ ತೋಟವಾಗಿ ಪರಿವರ್ತಿಸಬೇಕಾಗಿದೆ. ಇತರರ ಬದುಕಿನಲ್ಲಿ ಹೊಸ ದೀಪ ಹಚ್ಚಬೇಕಾಗಿದೆ. ಕ್ರಿಸ್ಮಸ್, ಹೊಸವರ್ಷ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಬಿಷಪ್ ಕರೆ ನೀಡಿದರು.

ಕೋವಿಡ್ ಭಯ ಬೇಡ:

ಕೊರೋನಾ ಬಗ್ಗೆ ಎಚ್ಚರಿಕೆ ವಹಿಸಿ ಹಬ್ಬವನ್ನು ಆಚರಿಸೋಣ. ಆದರೆ ಈ ಬಗ್ಗೆ ಜನರಲ್ಲಿ ಅನಗತ್ಯವಾಗಿ ಭಯ ಹುಟ್ಟಿಸಬೇಕಾಗಿಲ್ಲ ಎಂದು ಹೇಳಿದರು.

ಶ್ರೇಷ್ಠ ಧರ್ಮಗುರು ಮೊ. ಮ್ಯಾಕ್ಸಿಂ ನೊರೊನ್ಹಾ, ಧರ್ಮಪ್ರಾಂತ್ಯದ ಪಿಆರ್‌ಒಗಳಾದ ಫಾ.ಜೆ.ಬಿ. ಸಲ್ಡಾನ, ರೋಯ್ ಕ್ಯಾಸ್ತಲಿನೊ, ಪಾಲನಾ ಮಂಡಳಿಯ ಕಾರ್ಯದರ್ಶಿ ಡಾ.ಜಾನ್ ಡಿಸಿಲ್ವಾ, ಬಿಷಪ್ ಅವರ ಕಾರ್ಯದರ್ಶಿ ಫಾ.ತ್ರಿಶಾನ್ ಡಿಸೋಜ, ಕೆನರಾ ಕಮ್ಯೂನಿಕೇಶನ್‌ನ ನಿರ್ದೇಶಕ ಫಾ.ಅನಿಲ್ ಫರ್ನಾಂಡಿಸ್, ಫೋರ್ ವಿಂಡ್ಸ್‌ನ ಎಲಿಯಾಸ್ ಫರ್ನಾಂಡೀಸ್, ರಾಕ್ಣೋ ಸಂಪಾದಕ ಫಾ.ರೂಪೇಶ್ ಮಾಡ್ತಾ ಇದ್ದರು.