ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ತನ್ನ ಕರ್ತವ್ಯ ನಿಭಾಯಿಸುತ್ತಿದ್ದು, ಅಭಿವೃದ್ಧಿಯನ್ನೂ ಮಾಡುತ್ತಿದೆ.

ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಶಾಸಕ ಸೂಚನೆ

ಕನ್ನಡಪ್ರಭ ವಾರ್ತೆ ಹಳಿಯಾಳ

ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ತನ್ನ ಕರ್ತವ್ಯ ನಿಭಾಯಿಸುತ್ತಿದ್ದು, ಅಭಿವೃದ್ಧಿಯನ್ನೂ ಮಾಡುತ್ತಿದೆ. ಹೀಗಿರುವಾಗ ಮುಂಬರುವ ಎಲ್ಲ ಪೌರ ಸಂಸ್ಥೆಗಳು ಹಾಗೂ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಗಳಿಸಲೇಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಶಾಸಕರ ಕಾರ್ಯಾಲಯ ಆವರಣದಲ್ಲಿ ಆಯೋಜಿಸಿದ್ದ ಹಳಿಯಾಳ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಜನಪ್ರತಿನಿಧಿಗಳು ಮತ್ತು ಮುಖಂಡರ ಸಮಾವೇಶ ಮತ್ತು ಮುಂಬರುವ ಚುನಾವಣೆಗೆ ಸಿದ್ಧತೆ ಹಾಗೂ ನರೇಗಾ ಯೋಜನೆಯ ಬಗ್ಗೆ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು

ರಾಜ್ಯದಲ್ಲಿ ಗ್ರಾಮಮಟ್ಟದಿಂದ ಹಿಡಿದು ತಾಪಂ ಹಾಗೂ ಜಿಪಂ ಮಟ್ಟದವರೆಗೂ ಹಾಗೂ ಪೌರ ಸಂಸ್ಥೆಗಳಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅಧಿಕಾರ ಇದ್ದರೇ ಮಾತ್ರ ಜನರ ಕೆಲಸ ಮಾಡಲು ಸಾಧ್ಯ ಎಂಬುವುದನ್ನು ಮರೆಯಬೇಡಿ ಎಂದರು.

ಬ್ಲಾಕ್ ಅಧ್ಯಕ್ಷ ಕೃಷ್ಣ ಪಾಟೀಲ ಮಾತನಾಡಿ, ಪ್ರತಿ ತಿಂಗಳು 2 ತಾರೀಕಿಗೆ ಪಕ್ಷದ ಮಾಸಿಕ ಸಭೆಯನ್ನು ಅವರು ಕರೆದಾಗ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು. ಸಭೆಯಲ್ಲಿ ನಿಮ್ಮ ವಾರ್ಡ್ ಹಾಗೂ ಗ್ರಾಮಮಟ್ಟದ ಸಮಸ್ಯೆ ಹಾಗೂ ಪರಿಹಾರದ ಕುರಿತು ಚರ್ಚಿಸಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಜನಪರ ಕಾರ್ಯ ಮಾಡುತ್ತಿದೆ. ಹಳಿಯಾಳ, ದಾಂಡೇಲಿ ಪಟ್ಟಣಗಳ ಕುಡಿಯುವ ನೀರಿನ ಯೋಜನೆ ಇನ್ನೂ ಕೆಲವೇ ದಿನಗಳಲ್ಲಿ ಕಾರ್ಯಾರಂಭಿಸಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಕಾಳಿನದಿ ನೀರಾವರಿ ಯೋಜನೆ ಕಾರ್ಯಗತವಾಗಲಿದ್ದು, ಜೋಯಿಡಾ ತಾಲೂಕಿನ ಬಹುತೇಕ ಗ್ರಾಮಗಳಿಗೆ ಪಾಂಡ್ರಿ ನದಿಯಿಂದ ನೀರು ಪೂರೈಸುವ ಯೋಜನೆ ಅಂತಿಮ ಹಂತಕ್ಕೆ ತಲುಪಿದೆ. ಹೀಗಿರುವಾಗ ಈ ಯೋಜನೆಗಳ ಮಾಹಿತಿಯನ್ನು ಮತದಾರರಿಗೆ ತಿಳಿಹೇಳಬೇಕು ಎಂದರು.

ನಮ್ಮ ಕಾರ್ಯಕರ್ತರು ಮತ್ತು ಪಕ್ಷ ಸಹ ಪ್ರಚಾರದಿಂದ ಬಹುದೂರ. ಈ ಧೋರಣೆಯೇ ನಮಗೆ ಭಾರವಾಗುತ್ತಿದೆ. ಕಾರ್ಯಕರ್ತರು ಚುನಾವಣೆ ಬಂದಾಗ ಮಾತ್ರ ಹುಲಿಯಾಗುತ್ತಾರೆ. ನಂತರ ಬಿಲ ಸೇರಿಕೊಳ್ಳುತ್ತಾರೆ. ಕೆಲವರಂತೂ ಕಾಣುವುದೇ ಅಪರೂಪ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ವಕ್ತಾರ ಉಮೇಶ ಬೊಳಶೆಟ್ಟಿ ಮಾತನಾಡಿ, ನರೇಗಾ ಯೋಜನೆ ಬದಲಾಯಿಸಲು ಹೊರಟ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.

ಕಾಂಗ್ರೆಸ್ ಮುಖಂಡ ಶಂಕರ ಬೆಳಗಾಂವಕರ, ಜೋಯಿಡಾದ ಪ್ರಮುಖ ಸಂಜಯ ಹಣಬರ, ಸತ್ಯಜಿತ ಗಿರಿ, ಸುರೇಶ ವಗ್ರಾಯಿ, ಸತ್ಯಜಿತ ಗಿರಿ ಹಾಗೂ ಇತರರು ಇದ್ದರು. ಕಾಂಗ್ರೆಸ್ ಮುಖಂಡರಾದ ದೇಮಾಣಿ ಶಿರೋಜಿ ಹಾಗೂ ವೆಂಕಟೇಶ್ ಎಸ್. ಕಾರ್ಯಕ್ರಮ ನಿರ್ವಹಿಸಿದರು.