ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಹುಟ್ಟು ಹಬ್ಬಕ್ಕೆ ಶಾಸಕ ವೀರೇಂದ್ರ ಪಪ್ಪಿ ಕೇಕ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಉನ್ನತ ಸ್ಥಾನಗಳು ಸಿಗಲಿ ಎಂದು ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಡಿ.ಕೆ.ಶಿವಕುಮಾರ್ ಅವರ ಜನ್ಮ ದಿನಾಚರಣೆಗೆ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಸಮನ್ವಯತೆಯಿರುವುದರಿಂದ ರಾಜ್ಯ ಸರ್ಕಾರ ಮೂರು ವರ್ಷಗಳ ಅಧಿಕಾರವಧಿಯನ್ನು ಯಶಸ್ವಿಯಾಗಿ ಪೂರೈಸಿದೆ ಎಂದರು.

ಏಪ್ರಿಲ್‍ನಲ್ಲಿ ನಡೆದ ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಐದು ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಕಾರ್ಯಕರ್ತರ, ಮುಖಂಡರು ಪರಿಶ್ರಮದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕಾಂಗ್ರೆಸ್ ತತ್ವ ಸಿದ್ಧಾಂತಗಳು ಕರ್ನಾಟಕದ ಜನರ ಮನದಲ್ಲಿ ನೆಲೆಯೂರಿವೆ ಎಂಬುದಕ್ಕೆ ಉಪಚುನಾವಣೆ ಗೆಲವು ಸಾಕ್ಷಿ ಎಂದರು.

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಚರು ಜೋಡೆತ್ತಿನಂತೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ವಿರೋಧ ಪಕ್ಷಗಳ ಟೀಕೆ, ಅಪವಾದಗಳಿಗೆ ಎದೆಗುಂದದೆ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದು ಉಚಿತ ಗ್ಯಾರಂಟಿಗಳನ್ನು ಜನತೆಗೆ ನೀಡಿದ್ದಾರೆ. ರಾಜಕೀಯದಲ್ಲಿ ಡಿಕೆಶಿ ಉತ್ತುಂಗ ಸ್ಥಾನಕ್ಕೇರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಹಿಂದುಳಿದ ವರ್ಗಗಳ ಅಧ್ಯಕ್ಷ ಎನ್.ಡಿ.ಕುಮಾರ್, ಪರಿಶಿಷ್ಟ ವರ್ಗಗಳ ಅಧ್ಯಕ್ಷ ಮಂಜುನಾಥ್, ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ಅಬ್ದುಲ್ಲಾ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪುಖಾಸಿಂಆಲಿ, ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್‍ರವರ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಜೆ.ಮಂಜುನಾಥ, ಸೈಯದ್ ಸೈಫುಲ್ಲಾ, ಇಂದಿರಾ, ಜಿ.ವಿ.ಮಧುಗೌಡ ಗಂಜಿಗಟ್ಟೆ, ದಲಿತ ಮುಖಂಡ ಜಿ.ರಾಜಪ್ಪ, ಕಾಂಗ್ರೆಸ್ ಕಾರ್ಯದರ್ಶಿ ರಮೇಶ್, ನ್ಯಾಯವಾದಿ ಸುದರ್ಶನ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಎಸ್.ಎನ್.ಸುರೇಶ್, ಸೈಯದ್ ಅಫಾಖ್‍ ಅಹಮದ್ ಪಾಲ್ಗೊಂಡಿದ್ದರು.