ಸಮ್ಮೇಳನವು ಒಂದು ಉತ್ತಮ ವೇದಿಕೆಯಾಗಿದ್ದು ಅವರು ಅರ್ಜಿಸಿರುವ ಸಂಶೋಧನಾ ಜ್ಞಾನ, ಸಂವಹನ ಮತ್ತು ಪ್ರಸ್ತುತಿಯ ಕೌಶಲ್ಯದ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವುದೇ ಈ ಸಮ್ಮೇಳನದ ಉದ್ದೇಶವಾಗಿದೆ.
ಕನ್ನಡಪ್ರಭ ವಾರ್ತೆ ರಾಯಚೂರು
ಕೃಷಿ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾರ್ಥಿಗಳು ಒಂದು ನಿರ್ಣಾಯಕ ಹಂತದಲ್ಲಿರುವವರಾಗಿದ್ದು, ವಿದ್ಯಾರ್ಥಿಗಳು ಕೈಗೊಳ್ಳುತ್ತಿರುವ ಪ್ರತಿಯೊಂದು ಸಂಶೋಧನೆಯು ರೈತರ ಬಾಳಿಗೆ ಬೆಳಕಾಗಾಬೇಕು ಎಂದು ಕಲಬುರಗಿ ವಿಶ್ವವಿದ್ಯಾಲಯದ ಕುಲಪತಿ ಡಾ.ಶಶಿಕಾಂತ್ ಎಸ್. ಉಡಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ರಾಷ್ಟ್ರೀಯ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದ ಅವರು,ಸಂಶೋಧಿಸಿದ ಫಲಿತಾಂಶಗಳು ರೈತರನ್ನು ತಲುಪಿ ಅವರ ಏಳ್ಗೆಗೆ ಸಹಕಾರಿಯಾಗಬೇಕಾಗಿದೆ. ಆದ್ದರಿಂದ, ಈ ನಿಟ್ಟಿನಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯಗಳು ಗಮನಹರಿಸಬೇಕಾಗಿದೆ. ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆಯುವ ಅಂತಿಮ ಘಟ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಈ ಸಮ್ಮೇಳನವು ಒಂದು ಉತ್ತಮ ವೇದಿಕೆಯಾಗಿದ್ದು ಅವರು ಅರ್ಜಿಸಿರುವ ಸಂಶೋಧನಾ ಜ್ಞಾನ, ಸಂವಹನ ಮತ್ತು ಪ್ರಸ್ತುತಿಯ ಕೌಶಲ್ಯದ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವುದೇ ಈ ಸಮ್ಮೇಳನದ ಉದ್ದೇಶವಾಗಿದೆ ಎಂದರು.
ರಾಜ್ಯದ ಎಲ್ಲ ಕೃಷಿ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಸ್ಪರ್ಶ ವನ್ನು ನಿಜಾರ್ಥದಲ್ಲಿ ವಿದ್ಯಾರ್ಥಿಗಳಿಗೆ ಕಲ್ಪಿಸಿವೆ. ಹೀಗಾಗಿ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಮಾಡಿಕೊಂಡು ಉತ್ತಮ ರೀತಿಯ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಸಹಲೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ವಿವಿ ಶಿಕ್ಷಣ ನಿರ್ದೇಶಕ ಡಾ. ಗುರುರಾಜ ಸುಂಕದ ಮಾತನಾಡಿ,ರೈತರ ಸಮಸ್ಯಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಸಂಶೋಧನೆಗಳನ್ನು ಕೈಗೊಳ್ಳಬೇಕು. ಕೃಷಿಯನ್ನು ಕೇವಲ ಕಸುಬನ್ನಾಗಿ ಕಾಣದೇ ಅದನ್ನು ಒಂದು ಉದ್ಯಮವನ್ನಾಗಿ ಕಂಡರೆ ಮಾತ್ರ ರೈತರು ಸಂತಸದಿಂದಿ ರಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಇದನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆಗಳನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕೃಷಿ ತಾಂತ್ರಿಕತೆ ಡೀನ್ ಡಾ. ಕೆ. ವಿ. ಪ್ರಕಾಶ,ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್ ಡಾ. ಜಾಗೃತಿ ದೇಶಮಾನ್ಯ ಮಾತನಾಡಿದರು.ಈ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಹಾಗೂ ಸ್ನಾತಕೋತ್ತರ ಡೀನ್ ಡಾ. ಎ. ಜಿ. ಶ್ರೀನಿವಾಸ, ಡಾ. ಶರಣಗೌಡ, ಪ್ರಾಧ್ಯಾಪಕರು, ತಜ್ಞರು, ಹಿವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿ ಸುಮಾರು 900 ಕ್ಕಿಂತ ಹೆಚ್ಚು ಜನರು ಉಪಸ್ಥಿತರಿದ್ದರು.